ಕಾರ್ಯಕ್ರಮ

ಸಾಹಿತಿ, ಜಿಲ್ಲಾಧಿಕಾರಿ ಡಾ.ಸಿದ್ದಯ್ಯಪುರಾಣಿಕ್ ಸ್ಮರಣೆ

ಕುಶಾಲನಗರ, ಮಾ 20: : ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳಾಗಿ ಕರ್ತವ್ಯ ಗೈದ ಸಾಹಿತಿಯೂ ಆಗಿದ್ದ ಡಾ.ಸಿದ್ದಯ್ಯ ಪುರಾಣಿಕ್ ಅವರ ಕುರಿತು ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.
ಕುಶಾಲನಗರದ ಅನುಗ್ರಹ ಪದವಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಸಿದ್ದಯ್ಯ ಪುರಾಣಿಕ್ ಭಾವಚಿತ್ರಕ್ಕೆ ದ್ವಿಭಾಷಾ ಸಾಹಿತಿ ಬಿ.ಆರ್.ನಾರಾಯಣ್ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು,
1967 ರ ದಶಕದಲ್ಲಿ ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಡಾ. ಪುರಾಣಿಕ್ ಅತ್ಯಂತ ಸರಳ, ಸಜ್ಜನ, ಸಭ್ಯ, ಸಾತ್ವಿಕ ಸೌಮ್ಯ ಸ್ವಭಾವದವರಾಗಿದ್ದರು.
ದೀನ ದಲಿತರು, ಶೋಷಿತರಿಗೆ, ನೊಂದವರಿಗೆ ತಮ್ಮ ಕಛೇರಿ ಹಾಗೂ ತಮ್ಮನ್ನು ಮುಕ್ತಗೊಳಿಸಿದ್ದ ಬಹುಶಃ ಪ್ರಥಮ
ಜಿಲ್ಲಾಧಿಕಾರಿಗಳಾಗಿದ್ದರು.
ಸಾಹಿತ್ಯ ಕ್ಷೇತ್ರದ ಬಗ್ಗೆ ಉತ್ಕಟ ಒಲವು ಹೊಂದಿದ್ದ ಪುರಾಣಿಕರು ಬಸವಚಿಂತನೆಯ ಛಾಯೆಯೊಂದಿಗೆ ಹಲವಾರು ಕೃತಿಗಳನ್ನು ಹೊರತಂದಿದ್ದರು.
ಶಿಕ್ಷಕನೇ ಇರಲಿ, ಅಥವಾ ಇನ್ನಾವುದೇ ಕೆಳಸ್ತರದ ಉದ್ಯೋಗಿಯೇ ಇರಲಿ ನಿಸ್ಪೃಹತೆ ಹಾಗೂ ಶ್ರದ್ದೆಯಿಂದ ತನ್ನ ಕಾರ್ಯವನ್ನು ನಿರ್ವಹಿಸಿದಲ್ಲಿ ಅದರ ಮೂಲಕ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಬಹುದೆಂದು ಡಾ.ಪುರಾಣಿಕ್ ಭಾವಿಸಿದ್ದರು ಎಂದು ನಾರಾಯಣ್ ಬಣ್ಣಿಸಿದರು.
ಅನುಗ್ರಹ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಹೆಚ್.ಬಿ.ಲಿಂಗಮೂರ್ತಿ ಮಾತನಾಡಿ, ಕಾವ್ಯಾನಂದ ಎಂಬ ಕಾವ್ಯನಾಮದೊಂದಿಗೆ ಹೆಸರಾಗಿದ್ದ ಪುರಾಣಿಕರು ಏನಾದರೂ ಆಗು ನೀ ಬಯಸಿದಂತಾಗು ಎಂದು ಕರೆ ನೀಡಿದ್ದರು.
ಹಾಗೆಯೇ ಹೊತ್ತಿತೋ ಹೊತ್ತಿತು ಕನ್ನಡದ ದೀಪ. ಕಳೆಯಿತು ಶತಮಾನಗಳ ತಾಪ ಎಂದು ಸಂಭ್ರಮಿಸಿದ್ದ ದಿಟ್ಟ ಕವಿ ಎಂದು ಸ್ಮರಿಸಿದರು.
ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ಸಂಚಾಲಕ ಕೆ.ಎಸ್.ಮೂರ್ತಿ ಮಾತನಾಡಿ, ಕೊಡಗು ಜಿಲ್ಲೆಯ ದಕ್ಷ ಅಧಿಕಾರಿಯಾಗಿದ್ದ ಡಾ.ಸಿದ್ದಯ್ಯಪುರಾಣಿಕರ ಹೆಸರಿನಲ್ಲಿ ಕುಶಾಲನಗರದಲ್ಲಿ ಬಡಾವಣೆಯೊಂದಿದ್ದು ಸದಾ ಸ್ಮರಣೀಯ ಎಂದರು.
ಸಾಹಿತಿ ಲೀಲಾಕುಮಾರಿ ತೊಡಿಕಾನ ಮಾತನಾಡಿ, ಸಾಹಿತ್ಯ ರಂಗದ ಸಾಹಿತ್ಯ ಸಾಧಕರನ್ನು ಸ್ಮರಿಸುವ ಮೂಲಕ ವಿದ್ಯಾರ್ಥಿಗಳು ಸಾಹಿತ್ಯದ ಅಭಿರುಚಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಉಪನ್ಯಾಸಕರಾದ ನುಸ್ರತ್, ರೇಷ್ಮಾ, ಸೀಮಾ, ಮೇಘನಾ, ಅಶ್ವಿನಿ,ಪವನ್, ಹೇಮಂತ್ ಇದ್ದರು.
ವಿದ್ಯಾರ್ಥಿ ಭಾವಗೀತೆ ಹಾಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!