ಅರಣ್ಯ ವನ್ಯಜೀವಿ

ನಂಜರಾಯಪಟ್ಟಣ ವ್ಯಾಪ್ತಿಯಲ್ಲಿ ಪುಂಡಾನೆ ಗುರುತಿಸಲು ಶಾಸಕರ ಸೂಚನೆ: ಆನೆ‌ಮಾನವ ಸಂಘರ್ಷ ತಡೆಗೆ ಪರಿಣಾಮಕಾರಿ ಕ್ರಮ ಅಗತ್ಯ

ಕುಶಾಲನಗರ, ಮಾ 14: ಬಾಳೆಗುಂಡಿಯಲ್ಲಿ ಮಹಿಳೆಯನ್ನು ಬಲಿತೆಗೆದುಕೊಂಡ ಕಾಡಾನೆ ಸೆರೆಹಿಡಿಯುವ ನಿಟ್ಟಿನಲ್ಲಿ ಆದಷ್ಟು ಬೇಗ ಪತ್ತೆ ಕಾರ್ಯ ನಡೆಸುವಂತೆ ಕುಶಾಲನಗರ ವಲಯ ಅರಣ್ಯಾಧಿಕಾರಿಗೆ ಶಾಸಕ ಡಾ.ಮಂತರ್ ಗೌಡ ಅವರು ಸೂಚಿಸಿದರು.

ಕಾವೇರಿ ನಿಸರ್ಗಧಾಮದಲ್ಲಿ ಅರಣ್ಯಾಧಿಕಾರಿಗಳೊಂದಿಗೆ ಆನೆ ಮಾನವ ಸಂಘರ್ಷ ನಿಯಂತ್ರಣ ಸಂಬಂಧ ಶಾಸಕರು ಸಭೆ ನಡೆಸಿದರು.
ಆನೆ ಮಾನವ ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಕಾಡಾನೆ ಹಾವಳಿ ತಡೆಗೆ ಕೈಗೊಂಡ‌ ಕ್ರಮಗಳು ವಿಫಲವಾಗುತ್ತಿರುವ ಬಗ್ಗೆ ಅವಲೋಕಿಸಬೇಕಿದೆ.
ಇತ್ತೀಚಿಗೆ
ಜಿಲ್ಲೆಯಲ್ಲಿ ನಾಲ್ಕು ಮಂದಿ ಅಮಾಯಕ ಜೀವಗಳು ಕಾಡಾನೆಗಳಿಗೆ ಬಲಿಯಾಗಿವೆ. ಬಲಿಯಾದ ಜೀವಕ್ಕೆ ಸರಕಾರದ ಪರಿಹಾರ ಧನ ಒದಗಿಸುವುದೊಂದೇ ಪರಿಹಾರ ಮಾರ್ಗ ಆಗಬಾರದು. ಜೀವಹಾನಿ ತಡೆಗಟ್ಟಲು ಪರಿಣಾಮಕಾರಿಯಾದ ಕಾರ್ಯಯೋಜನೆ ಅಗತ್ಯವಿದೆ.

ದುಬಾರೆ, ಆನೆಕಾಡು, ಕಾಜೂರು, ಸಿದ್ದಾಪುರ ಮೊದಲಾದ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳು ಸಂಚರಿಸುವ ಪ್ರದೇಶಗಳಲ್ಲಿ ಕಾಡಾನೆಗಳ ಕಾರಿಡಾರ್ ಅತಿ ಅಗತ್ಯವಾಗಿದೆ. ಕಾರಿಡಾರ್ ಗಳು ವಿಸ್ತಾರಗೊಂಡಷ್ಟು ಆನೆ ಮಾನವ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಕಾಡಿನಲ್ಲಿ ಆನೆಗಳಿಗೆ ಕುಡಿಯುವ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಮಂತರಗೌಡ ಅಧಿಕಾರಿಗಳಿಗೆ ಸೂಚಿಸಿದರು.
ದುಬಾರೆಯಲ್ಲಿ ರೂ.8 ಕೋಟಿ ವೆಚ್ಚದಲ್ಲಿ ನಿರ್ಮಿಸಲು ‌ಉದ್ದೇಶಿಸಿರುವ ತೂಗುಸೇತುವೆ ನಿರ್ಮಾಣ ಕಾಮಗಾರಿಗೆ ಮಳೆಗೆ ಮುನ್ನವೇ ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಬೇಕಿದೆ ಎಂದರು. ಇದರೊಂದಿಗೆ ದುಬಾರೆ ಆನೆ ಶಿಬಿರ ಸುಂದರೀಕರಣ ಯೋಜನೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ, ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲಿ ವ್ರಿಸ್ನಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್,
ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ, ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಜಲಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಕುಡ ಮಾಜಿ ಅಧ್ಯಕ್ಷ ಬಿ.ಜಿ.ಮಂಜುನಾಥ್, ಸೋಮವಾರಪೇಟೆ ತಾಲ್ಲೂಕು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ.ಗೋಪಾಲ್, ವಲಯ ಅರಣ್ಯಾಧಿಕಾರಿ ರಕ್ಷಿತ್, ಸಹಾಯಕ ವಲಯ ಅರಣ್ಯಾಧಿಕಾರಿ ಚರಣ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!