ಕುಶಾಲನಗರ, ಜ 06: ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ದುಬಾರೆ ಗಿರಿಜನ ಹಾಡಿಯಲ್ಲಿ ಮೂಲಸೌಕರ್ಯಗಳ ಅವ್ಯವಸ್ಥೆ ಹಿನ್ನೆಲೆಯಲ್ಲಿ ಐಟಿಡಿಪಿ ಅಧಿಕಾರಿಗಳು ಹಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಸಮರ್ಪಕ ವಿದ್ಯುತ್ ಸಂಪರ್ಕ ಮತ್ತು ಕುಡಿವ ನೀರಿನ ಅವ್ಯವಸ್ಥೆ ಬಗ್ಗೆ ನಂಜರಾಯಪಟ್ಟಣ ಗ್ರಾಪಂ ಸದಸ್ಯ, ಗಿರಿಜನ ಮುಖಂಡ ಆರ್.ಕೆ.ಚಂದ್ರ ದಿಶಾ ಸಮಿತಿಯ ಸಭೆಯಲ್ಲಿ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ವಿರಾಜಪೇಟೆ ತಾಲೂಕು ಐಟಿಡಿಪಿ ಅಧಿಕಾರಿ ತೇಜರಾಜ್ ಹಲಸಬಾಳ, ಕಛೇರಿ ಅಧೀಕ್ಷಕ ಪ್ರಶಾಂತ್ ಕುಮಾರ್ ವಿ.ಎಸ್.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಧಿಕಾರಿಗಳನ್ನು ಸ್ಥಳಕ್ಕೆ ಬರಮಾಡಿಕೊಂಡ ಆರ್.ಕೆ.ಚಂದ್ರ ಅವರು ಹಾಡಿಗೆ ಕರೆದೊಯ್ದು ಖುದ್ದು ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದರು. ಈ ಹಿಂದೆ ಸೋಲಾರ್ ಸಂಪರ್ಕ ನೀಡಿದ ಮಾರ್ಗಕ್ಕೆ ಹೊಸ ವಿದ್ಯುತ್ ಲೈನ್ ಜೋಡಣೆ ಮಾಡಲಾಗಿದೆ. ಇದು ಅವೈಜ್ಞಾನಿಕ ರೀತಿಯಲ್ಲಿದೆ. ಇದರಿಂದ ವಿದ್ಯುತ್ ಅವಘಡಗಳು ಉಂಟಾಗುವ ಸಂಭವ ಅಧಿಕವಿದೆ. ಕೂಡಲೆ ಮುಖ್ಯ ಲೈನ್ ನಿಂದ ಸಮರ್ಪಕ ರೀತಿಯಲ್ಲಿ ಮನೆಗೆ ಹೊಸದಾಗಿ ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕಿದೆ. ಮನೆಗಳಿಗೆ ಕುಡಿವ ನೀರು ಒದಗಿಸಲು ನಲ್ಲಿಗೆ ಪೈಪ್ ಲೈನ್ ಜೋಡಣೆ ಮಾಡದೆ ನೆಲದಿಂದಲೇ ನೀರು ಪಡೆದುಕೊಳ್ಳುವಂತೆ ಸ್ಥಿತಿ ಉಂಟುಮಾಡಲಾಗಿದೆ. ಕಾಡಿನ ವಾಸಿಗಳಿಗೆ ಸೌಲಭ್ಯ ಲಭ್ಯವಾದರೂ ಕಾಟಾಚಾರದ ವ್ಯವಸ್ಥೆ ಮಾಡಲಾಗಿದೆ ಎಂದು ಆರ್.ಕೆ.ಚಂದ್ರ ಅವರು ಆರೋಪಿಸಿದರು. ಹಲವು ಕುಟುಂಬಗಳು ಇನ್ನೂ ಕೂಡ ಪ್ಲಾಸ್ಟಿಕ್ ಜೋಪಡಿಯಲ್ಲೇ ಜೀವನ ನಡೆಸುತ್ತಿದ್ದಾರೆ. ಮನೆ ಮಂಜೂರಾದರೂ ತಾಂತ್ರಿಕ ಸಮಸ್ಯೆ ಕಾರಣ ಹಲವರಿಗೆ ಹಣ ಬಿಡುಗಡೆಯಾಗುತ್ತಿಲ್ಲ, ಹಾಡಿಯಿಂದ ಸಿದ್ದಾಪುರ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದುವರೆಗೆ ಅಭಿವೃದ್ಧಿ ಕಂಡಿಲ್ಲ ಎಂದು ದೂರಿದರು. ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡ ಅಧಿಕಾರಿಗಳು ಈ ಬಗ್ಗೆ ಕೂಲಕುಂಶವಾಗಿ ಪರಿಶೀಲನೆ ನಡೆಸಿ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಸರಕಾರದ ಯೋಜನೆಗಳು ಗಿರಿಜನರ ಅಭಿವೃದ್ಧಿಗೆ ಸಮಪರ್ಕವಾಗಿ ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸದಂತೆ ಆರ್.ಕೆ.ಚಂದ್ರ ಮನವಿ ಮಾಡಿದರು.
Back to top button
error: Content is protected !!