ನಿರ್ವಹಣೆ, ಸ್ವಚ್ಚತೆ ಕಾಣದೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಚಿಕ್ಲಿಹೊಳೆ ಅಣೆಕಟ್ಟೆಯನ್ನು ಗ್ರಾಪಂ ಸುಪರ್ದಿಗೆ ಹಸ್ತಾಂತರಿಸಿ, ಗ್ರಾಪಂ ವತಿಯಿಂದ ನಾವು ಅಭಿವೃದ್ಧಿಪಡಿಸುತ್ತೇವೆ ಎಂದು ನಂಜರಾಯಪಟ್ಟಣ ಗ್ರಾಪಂ ಕೆಡಿಪಿ ಸಭೆಯಲ್ಲಿ ಗ್ರಾಪಂ ಜನಪ್ರತಿನಿಧಿಗಳು ನೀರಾವರಿ ನಿಗಮದ ಅಭಿಯಂತರರನ್ನು ಆಗ್ರಹಿಸಿದರು.
ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಚಿಕ್ಲಿಹೊಳೆ ಅಣೆಕಟ್ಟೆ ವ್ಯಾಪ್ತಿಯಲ್ಲಿ ಸಮಸ್ಯೆಗಳ ನಿವಾರಣೆಗೆ, ಅಭಿವೃದ್ಧಿ ಕಾಮಗಾರಿಗೆ ಕ್ರಮವಹಿಸದ ನೀರಾವರಿ ನಿಗಮದ ನಿರ್ಲಕ್ಷತೆ ಬಗ್ಗೆ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಸದಸ್ಯರಾದ ಆರ್.ಕೆ.ಚಂದ್ರ, ರಕ್ಷಿತ್ ಮಾವಜಿ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನೀರಾವರಿ ನಿಗಮ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಶು ವೈದ್ಯಕೀಯ ಅಧಿಕಾರಿಗಳು, ಪ್ರತಿನಿಧಿಗಳೊಂದಿಗೆ ಆಯಾ ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಪ್ರಗತಿ, ಅನುಷ್ಠಾನ, ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಚರ್ಚಿಸಿದರು.
ಗ್ರಾಮದಲ್ಲಿ ಕಾಡಾನೆ ಮಾನವ ಸಂಘರ್ಷಕ್ಕೆ ಸಂಬಂಧಿಸಿದಂತೆ ಹೋರಾಟ ಸಮಿತಿ ರಚಿಸಿ ಅಗತ್ಯ ಕ್ರಮಕ್ಕೆ ಕೋರಿ ಸಲ್ಲಿಸಿದ ಮನವಿಗೆ ಇಲಾಖೆಯಿಂದ ಸೂಕ್ತವಾಗಿ ಸ್ಪಂದನೆ ದೊರೆತಿಲ್ಲ, ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ, ಕಾಡಾನೆ ದಾಳಿ ಎಗ್ಗಿಲ್ಲದೆ ಮುಂದುವರೆದಿದೆ. ಕಾಡಾನೆ ತಡೆಗಟ್ಟುವ ನಾಮಕಾವಸ್ಥೆ ಯೋಜನೆಗಳು ವಿಫಲವಾಗಿ ಕಾಡುಪಾಲಾಗಿದೆ.
ಕಾಡಾನೆ ದಾಳಿಯಿಂದ ಉಂಟಾದ ಬೆಳೆ ಹಾನಿಗೆ ಕಳೆದರೆಡು ವರ್ಷದಿಂದ ಪರಿಹಾರದ ಮೊತ್ತ ಒದಗಿಸಿಲ್ಲ, ಇತ್ತೀಚೆಗೆ ಕಾಡಾನೆ ದಾಳಿಯಿಂದ ಗ್ರಾಮದಲ್ಲಿ ಗಾಯಗೊಂಡವರಿಗೆ ಕೂಡ ಪರಿಹಾರ ಮೊತ್ತ ವಿತರಿಸಿಲ್ಲ ಎಂದು ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಅರಣ್ಯಾಧಿಕಾರಿಗಳೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಎಲ್ಲಾ ಸಮಸ್ಯೆಗಳ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಹೋರಾಟ ಸಮಿತಿಯಿಂದ ಅರಣ್ಯಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಕಾಡಾನೆ, ಹುಲಿ ಸಂಚಾರವಿರುವ ಕಾರಣ
ಪ್ರವಾಸಿ ತಾಣ ಚಿಕ್ಲಿಹೊಳೆಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ದೃಷ್ಠಿಯಿಂದ ಅರಣ್ಯ ಇಲಾಖೆಯಿಂದ ಎಚ್ಚರಿಕೆಯ ಸೂಚನಾ ಫಲಕಗಳ ಅಳವಡಿಕೆ, ರಸ್ತೆ ಬದಿ ಕಾಡು ಗಿಡಗಳ ತೆರವಿಗೆ ನೀರಾವರಿ ನಿಗಮದೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲು ಸೂಚಿಸಿದರು. ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಜಾಗ ಅರಣ್ಯ ಇಲಾಖೆ ತನ್ನ ಸುಪರ್ದಿಗೆ ಪಡೆಯಲು ಮುಂದಾಗಿರುವ ಕ್ರಮದ ಕುರಿತು ಚರ್ಚಿಸಲಾಯಿತು. 14 ಸಾವಿರ ಜನಸಂಖ್ಯೆ ಅವಲಂಬಿಸಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಉಳಿಸಿಕೊಂಡು, ಮುಂದಿನ ದಿನಗಳಲ್ಲಿ ಹೈಟೆಕ್ ಆಸ್ಪತ್ರೆಯಾಗಿಸುವ ನಿಟ್ಟಿನಲ್ಲಿ ಎಲ್ಲರ ಜವಬ್ದಾರಿ ಮುಖ್ಯವಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಗಿರಿಜನರಿಗೆ ಸಮರ್ಪಕ ದಾಖಲಾತಿಗಳ ರಚಿಸುವುದು, ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯವರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಗ್ರಾಪಂ ಸದಸ್ಯ ಆರ್.ಕೆ.ಚಂದ್ರ ಸೂಚಿಸಿದರು. ಮರಗಳು, ಹಸುಗಳ ಕಳ್ಳತನ ಹೆಚ್ಚಾಗಿದ್ದು ನೈಟ್ ಬೀಟ್ ವ್ಯವಸ್ಥೆ ಹೆಚ್ಚಿಸುವಂತೆ ಪೊಲೀಸ್ ಸಿಬ್ಬಂದಿಗೆ ಸದಸ್ಯ ಆರ್.ಕೆ.ಚಂದ್ರ ಸೂಚಿಸಿದರು. ಚಿಕ್ಲಿಹೊಳೆ ವ್ಯಾಪ್ತಿಯಲ್ಲಿ ಜಂಗಲ್ ಕಟ್ಟಿಂಗ್, ರಸ್ತೆ ಗುಂಡಿ ಮುಚ್ಚುವುದು, ಶಿಲ್ಟ್ ಕ್ಲೀನಿಂಗ್ ಗೆ ಕ್ರಮವಹಿಸಲು ಸದಸ್ಯ ರಕ್ಷಿತ್ ಮಾವಜಿ ಸೂಚಿಸಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಆರೋಗ್ಯ ಜಾಗೃತಿಗಾಗಿ ಕಾರ್ಯಕರ್ತರ ನೇಮಕಾತಿಗೆ ಸೂಚಿಸಲಾಯಿತು. ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗದ ಸಮಸ್ಯೆ, ಕೆರೆ ಒತ್ತುವರಿ ತೆರವು, ಗ್ರಾಪಂ ನಿಂದ ಅಂಗನವಾಡಿಗಳ ದುರಸ್ಥಿ, ನಿರ್ವಹಣೆಗೆ ಅನುದಾನ ಒದಗಿಸುವ ವಿಚಾರಗಳ ಕುರಿತು ಚರ್ಚಿಸಲಾಯಿತು. ಬಾಣಂತಿಯರು, ಗರ್ಭಿಣಿಯರು, ನವಜಾತ ಶಿಶುಗಳು ವಿವರ, ಆರೋಗ್ಯ ಯೋಜನೆಗಳ ಅನುಷ್ಠಾನದ ವಿವರ ಪಡೆದುಕೊಳ್ಳಲಾಯಿತು. ಪಂಚಾಯತ್ ರಾಜ್ ಅಭಿಯಂತರ ಕಾಮಗಾರಿಗಳ ವಿವರ ಒದಗಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿ.ಎಲ್.ವಿಶ್ವ, ನಮ್ಮ ಆಡಳಿತ ಅವಧಿಯಲ್ಲಿ ರೂ 25 ಲಕ್ಷದಿಂದ 1.25 ಕೋಟಿಗೆ ಗ್ರಾಪಂ ಆದಾಯ ವೃದ್ದಿಸಿದೆ. ಸಂಪನ್ಮೂಲ ಕ್ರೋಡೀಕರಣ, ಕಛೇರಿ ಕಟ್ಟಡ ಅಭಿವೃದ್ದಿ ಸೇರಿದಂತೆ ಗ್ರಾಮ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕಾಮಗಾರಿ ಕೈಗೊಂಡು ಫಲಾನುಭವಿಗಳಿಗೆ ಸರಕಾರದ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಒದಗಿಸಲಾಗಿದೆ ಎಂದು ತಿಳಿಸಿದರು.
ಟೀಕೆಗಳನ್ನು ಬದಿಗೊತ್ತಿ ಸದಾ ನೆಲೆ ನಿಲ್ಲುವಂತಹ ಸೇವೆ ಒದಗಿಸಲು ಅಧಿಕಾರಿ ವರ್ಗಕ್ಕೆ ಅವರು ಸೂಚಿಸಿದರು.
ಸಭೆಯಲ್ಲಿ ಗ್ರಾಪಂ ಪಿಡಿಒ ರಾಜಶೇಖರ್, ಕಾರ್ಯದರ್ಶಿ ಶೇಷಾಚಲ ಇದ್ದರು.
Back to top button
error: Content is protected !!