ಕಾರ್ಯಕ್ರಮ

ಕೂಡಿಗೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಕಾರ್ಯದರ್ಶಿಗಳಿಗೆ ವಿಶೇಷ ಶಿಕ್ಷಣ ಕಾರ್ಯಗಾರ

ಕುಶಾಲನಗರ, ಡಿ 11: ಗ್ರಾಮಾಂತರ ಪ್ರದೇಶದ ಹಾಲು ಉತ್ಪಾದಕ ರೈತರು ಗುಣಮಟ್ಟದ ಹಾಲನ್ನು ಸಹಕಾರ ಸಂಘಗಳಿಗೆ ಹಾಕುವುದರ ಮೂಲಕ ಸಂಘದ ಅಭಿವೃದ್ಧಿಯೊಂದಿಗೆ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ, ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ ಕೆ.ಹೇಮಂತ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯುನಿಯನ್ ನಿ.ಇವರುಗಳು ಸಂಯುಕ್ತಾಶ್ರದಲ್ಲಿ ಕೂಡಿಗೆಯಲ್ಲಿ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಕಾರ್ಯದರ್ಶಿಗಳಿಗೆ, ಸಹಕಾರ ಸಂಘಗಳ ಮೇಲ್ವಿಚಾರಣೆ, ನಿರ್ವಹಣೆ, ಸಹಕಾರ ಕಾಯ್ದೆ- ಕಾನೂನು ಹಾಗೂ ರಾಸುಗಳ ಆರೋಗ್ಯ- ನಿರ್ವಹಣೆ ಕುರಿತು ವಿಶೇಷ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು.
ಕೊಡಗು ಜಿಲ್ಲೆ ಒಳಗೊಂಡಂತೆ ಇರುವ ಹಾಸನ ಹಾಲು ಒಕ್ಕೂಟವು ರಾಜ್ಯದಲ್ಲಿ ಉತ್ತಮವಾಗಿ ಹಾಲು ಸಂಸ್ಕರಣೆ ಮಾಡುವ ಮೂಲಕ ಹಾಲು ಸೇರಿದಂತೆ ಹಾಲಿನ ಉತ್ಪನ್ನಗಳನ್ನು ದೇಶದ ಎಲ್ಲಾ ಭಾಗಗಳು ಸೇರಿದಂತೆ ದೇಶದ ಸೈನಿಕರಿಗೂ ಸಹ ಸರಬರಾಜು ಮಾಡಲಾಗುತ್ತಿದೆ. ಹಾಸನ ಒಕ್ಕೂಟದ ವತಿಯಿಂದ ಗುಜರಾತ್ ರಾಜ್ಯದ ಮೆಗಾಡೈರಿಯ ಮಾದರಿಯಲ್ಲಿ ರೂ. 600 ಕೋಟಿ ವೆಚ್ಚದಲ್ಲಿ ನೂತನ ತಂತ್ರಜ್ಞಾನದ ಯಂತ್ರಗಳ ಅಳವಡಿಕೆ ಮೂಲಕ ಘಟಕ ಆರಂಭುಸಲು ಸಿದ್ದತೆ ನಡೆಯುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ. ಯು. ರಾಬಿನ್ ದೇವಯ್ಯ ಮಾತನಾಡಿ, ಪ್ರಪಂಚದಲ್ಲೇ ಭಾರತ ಹೈನುಗಾರಿಕೆಯಲ್ಲಿ ಪ್ರಥಮ ಸ್ಧಾನದಲ್ಲಿದೆ.
ಜಿಲ್ಲೆಯಲ್ಲಿ 39 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು ಇನ್ನು ಹೆಚ್ಚಿನ ಸಂಘಗಳ ಆರಂಭಕ್ಕೆ ಒಕ್ಕೂಟವು ಹೆಚ್ಚು ಒತ್ತು ನೀಡಬೇಕು. ಇದರ ಮೂಲಕ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಹೈನುಗಾರಿಕೆಗೆ ಒತ್ತು ನೀಡಲು ಸಹಕಾರಿಯಾಗಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಸ್. ಆರ್. ಸುನಿಲ್ ರಾವ್, ವಿ‌.ಸಿ. ಅಮೃತ್, ಎಂ.ಎಂ.ಶ್ಯಾಮಲಾ, ಹಾಸನ ಹಾಲು ಒಕ್ಕೂಟದ ಪಶುವೈದ್ಯಾಧಿಕಾರಿ ಡಾ. ಪ್ರಸನ್ನ, ಕೂಡಿಗೆ ಜಾನುವಾರು ಸಂವರ್ಧನ ಮತ್ತು ತರಬೇತಿ ಕೇಂದ್ರ ಹಿರಿಯ ಪಶುವೈದ್ಯಾಧಿಕಾರಿ ಡಾ. ಶ್ರೀ ದೇವ್, ಒಕ್ಕೂಟದ ವಿಸ್ತಾರಣಾಧಿಕಾರಿ ಬಿ. ವಿ. ವೀಣಾ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯೋಗೇಂದ್ರ ನಾಯಕ್ ಹಾಜರಿದ್ದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ ಜಿಲ್ಲೆಯ 39 ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಸಂಘದ ಮೇಲ್ವಿಚಾರಣೆ, ನಿರ್ವಹಣೆ, ಸಹಕಾರ ಕಾಯ್ದೆ, ರಾಸುಗಳ ಆರೋಗ್ಯ ನಿರ್ವಹಣೆ ಸೇರಿದಂತೆ ವಿಮಾ ಯೋಜನೆಯ ಬಗ್ಗೆ ಡಾ.ಪ್ರಸನ್ನ, ಡಾ. ಶ್ರೀ ದೇವ್, ಶ್ಯಾಮಲಾ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕೆ.ಕೆ. ಹೇಮಂತ್ ಕುಮಾರ್ ಮತ್ತು ರಾಬಿನ್ ದೇವಯ್ಯ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

11 ಕೆಯುಎಸ್ 02 ಚಿತ್ರದಲ್ಲಿ ಕೂಡಿಗೆಯಲ್ಲಿ ನಡೆದ ವಿಶೇಷ ಶಿಕ್ಷಣ ಕಾರ್ಯಗಾರವನ್ನು ಹೇಮಂತ್ ಕುಮಾರ್ ಉದ್ಘಾಟಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!