ಪ್ರತಿಭಟನೆ

ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣ: ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ

ಕುಶಾಲನಗರ, ಏ 04: ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕೊಡಗಿನ ಶಾಸಕರುಗಳ ವಿರುದ್ದ ಕುಶಾಲನಗರ ಭಾರತೀಯ ಜನತಾ ಪಾರ್ಟಿ ಮಹಾಶಕ್ತಿ ಕೇಂದ್ರದ ವತಿಯಿಂದ ಪ್ರತಿಭಟನೆ ನಡೆಯಿತು.
ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು, ‌ಕಾರ್ಯಕರ್ತರು ಕೊಡಗು ಪೊಲೀಸ್ ಇಲಾಖೆ ಕಾಂಗ್ರೆಸ್ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿ ಆಕ್ರೋಷ ವ್ಯಕ್ತಪಡಿಸಿದರು. ಮೃತ ವಿನಯ್ ಕೊನೆಯ ವಾಟ್ಸಾಪ್ ಸಂದೇಶದ ಅನ್ವಯದಂತೆ ಕೊಡಗಿನ ಶಾಸಕರ ವಿರುದ್ದ ಎಫ್ ಐ ಆರ್ ದಾಖಲಿಸಿ‌ ಬಂಧಿಸುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿಯ ಸಕ್ರಿಯ ಕಾರ್ಯಕರ್ತ ವಿನಯ್ ಸೋಮಯ್ಯ ಕೊಡಗಿನ ಇಬ್ಬರು ಶಾಸಕರುಗಳ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತನ ಮೆಸೆಜ್ ನಿಂದ ಆತನಿಗೆ ಉಂಟಾಗಿರುವ ಕಿರುಕುಳ ಬಹಳ ಸ್ಪಷ್ಟವಾಗಿದೆ. ಆತ ಮಾಡಿರುವ ವಾಟ್ಸಾಪ್ ಕೊನೆಯ ಸಂದೇಶವನ್ನು ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸಿ ಕೊಡಗಿನ ಇಬ್ಬರು ಶಾಸಕರು, ತೆನ್ನಿರಾ ಮೈನಾ ಹಾಗೂ ಉಳಿದವರ ವಿರುದ್ದ ಎಫ್.ಐ.ಆರ್.ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.
ಇಂದಿನ ಇಬ್ಬರು ಶಾಸಕರು ದ್ವೇಷ ರಾಜಕಾರಣ‌ ಮಾಡುತ್ತಿದ್ದಾರೆ. ಜಾತಿಗಳ ನಡುವೆ ಹೊಡೆದಾಟ ನಡೆಯುತ್ತಿದೆ. ವಿನಯ್ ಸೋಮಯ್ಯ ಕೇವಲ ವಾಟ್ಸಾಪ್ ಗ್ರೂಪ್ ಅಡ್ಮಿನ್ ಮಾತ್ರ. ಆತನ ವಿರುದ್ದ ಗಂಭೀರ ಪ್ರಕರಣ ದಾಖಲಿಸುವುದಲ್ಲದೆ ಪೊಲೀಸ್ ಪೇದೆಯೊಬ್ಬ ನಿರಂತರವಾಗಿ ಕರೆ ಮಾಡಿ ರೌಡಿ ಶೀಟರ್ ತೆರೆಯುವ ಬಗ್ಗೆ ಬೆದರಿಕೆ ಹಾಕಿದ್ದಾನೆ. ಆತನ ವಿರುದ್ದ ಕೂಡ ಎಫ್.ಐ.ಆರ್.ದಾಖಲಿಸಬೇಕು. ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಅಭಿವೃದ್ಧಿ ಪರ ಕೆಲಸ‌ ಮಾಡಿವುದನ್ನು ಬಿಟ್ಟು ಎಫ್.ಐ.ಆರ್.ದಾಖಲಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಇಬ್ಬರು ಶಾಸಕರ ವಿರುದ್ದ ಪ್ರಕರಣ ದಾಖಲಾಗುವವರೆಗೆ ವಿನಯ್ ಅಂತ್ಯಸಂಸ್ಕಾರ ನೆರವೇರಿಸದಂತೆ ಪ್ರತಾಪ್ ಸಿಂಹ ಅವರ ಕುಟುಂಬದವರನ್ನು ಆಗ್ರಹಿಸಿದರು.

ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಕೊಡಗಿನ ಸಮಸ್ಯೆಗಳ ಬಗ್ಗೆ ಪ್ರಶ್ನಿಸದೆ ಶಾಸಕರುಗಳನ್ನು ಹೊಗಳಿಕೊಂಡೇ ಇರಬೇಕೇ. ಮೂರನೇ ವ್ಯಕ್ತಿ ಪ್ರಶ್ನಿಸಿ ಹಾಕಿದ ಸಂದೇಶಕ್ಕೆ ಅಡ್ಮಿನ್ ಎಂಬ ಕಾರಣಕ್ಕೆ ವಿನಯ್ ವಿರುದ್ದ ಪ್ರಕರಣ ದಾಖಲಿಸಿ ಕಿರುಕುಳ ನೀಡಿರುವುದು ಸರಿಯಲ್ಲ. ಅನ್ಯಾಯ ವಿರುದ್ದ ಪ್ರಶ್ನಿಸುವುದು ನಮ್ಮ‌ ಹಕ್ಕು. ಕೊಡಗಿನ ಪೊಲೀಸ್ ಸ್ಟೇಷನ್ ಗಳು ಕಾಂಗ್ರೆಸ್ ಕಚೇರಿಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದ ಅವರು, ಪೊಲೀಸರನ್ನು ಬಳಸಿಕೊಂಡು ಬಿಜೆಪಿಗರ ಹೋರಾಟಗಳನ್ನು ಹತ್ತಿಕ್ಕಬಹುದೆಂಬ ಶಾಸಕರುಗಳ ಕನಸು ಕೊಡಗಿನಲ್ಲಿ ನಡೆಯುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಕೊಡಗು ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಪೂವಯ್ಯ, ಪ್ರಧಾನ ಕಾರ್ಯದರ್ಶಿ ಪುಷ್ಪಾ ನಾಗೇಶ್,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್, ಕಾರ್ಯದರ್ಶಿ ರಕ್ಷಿತ್ ಮಾವಾಜಿ, ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್, ಕುಶಾಲನಗರ ಬಿಜೆಪಿ ಅಧ್ಯಕ್ಷ ಎಂ.ಎಂ.ಚರಣ್, ಯುವ ಮೋರ್ಚಾ ಅಧ್ಯಕ್ಷ ರಾಮು, ಕಾರ್ಯದರ್ಶಿ ಆದರ್ಶ್, ವಿವಿಧ ಘಟಕಗಳ ಪ್ರಮುಖರಾದ ಸೋಮೇಶ್, ಚಂದ್ರಶೇಖರ್ ಹೇರೂರು, ನವನೀತ್, ವೈಶಾಖ್, ಪ್ರವೀಣ್, ಪ್ರವೀಣ್ ಕುಶಾಲಪ್ಪ, ದಿನೇಶ್ ಚಿಕ್ಕತ್ತೂರು, ಅನುದೀಪ್, ಶಶಿಕುಮಾರ್, ಅಭಿ, ಬಿ.ಜೆ.ಅಣ್ಣಯ್ಯ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!