ಕುಶಾಲನಗರ, ಜ 24: ನುಡಿದಂತೆ ನಡೆಯುವುದು ಕಾಂಗ್ರೆಸ್ ಪಕ್ಷ, ಕೊಟ್ಟ ಮಾತು ತಪ್ಪುವುದು ಬಿಜೆಪಿಯ ಛಾಳಿ, ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಕೊಡಗು-ಮೈಸೂರು ಗಡಿ ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ಗ್ರಾಮದ ಸಮೀಪದ ಮುತ್ತಿನ ಮುಳ್ಳುಸೋಗೆ ಗ್ರಾಮದ ಹತ್ತಿರ ಕಾವೇರಿ ನದಿಯಿಂದ ನೀರೆತ್ತಿ 79 ಗ್ರಾಮಗಳಲ್ಲಿ ಬರುವ 150 ಕೆರೆಗಳು ಹಾಗೂ ಕಟ್ಟೆಗಳಿಗೆ ನೀರು ತುಂಬಿಸುವ ಕಾವೇರಿ ನೀರಾವರಿ ನಿಗಮದ ಯೋಜನೆಗೆ ಚಾಲನೆ ನೀಡಿದ ಬಳಿಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಿರಿಯಾಪಟ್ಟಣ ತಾಲೂಕಿನ ಹಲವು ಹಳ್ಳಿಗಳು ನೀರಿನ ಬವಣೆ ಎದುರಿಸುತ್ತಿದೆ. ಈ ಭಾಗದ 93 ಸಾವಿರ ಮಂದಿಗೆ, ಜನ ಜಾನುವಾರುಗಳಿಗೆ,ಕೃಷಿಗೆ ಅನುಕೂಲವಾಗುವ ನಿಟ್ಟಿನಲ್ಲಿ 150 ಕೆರೆಕಟ್ಟೆಗಳನ್ನು ತುಂಬಿಸುವ ಹಿನ್ನಲೆಯಲ್ಲಿ ಈ ಯೋಜನೆ ಲೋಕಾರ್ಪಣೆಗೊಳಿಸಲಾಗಿದೆ. ನೀರಾವರಿ ಕ್ಷೇತ್ರಕ್ಕೆ ಒತ್ತು ನೀಡಿ ಕಾಂಗ್ರೆಸ್ ಸರಕಾರ ಕಳೆದ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಇಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಹಿಂದಿನ ಅವಧಿಯಲ್ಲಿ 5 ವರ್ಷಕ್ಕೆ 56 ಸಾವಿರ ಕೋಟಿ ರೂಗಳನ್ನು ವಿನಿಯೋಗಿಸಲಾಗಿದೆ. ಈ ಬಾರಿ ರಾಜ್ಯದಲ್ಲಿ ತಲೆದೋರಿರುವ ಬರಗಾಲದಿಂದ ಜನತೆಗೆ ಸಂಕಷ್ಟ ಎದುರಾಗದಂತೆ ಎಲ್ಲವನ್ನು ಸಮರ್ಪಕವಾಗಿ ನಿರ್ವಹಣೆಮಾಡಲಾಗಿದೆ.
ಬಿಜೆಪಿ ಪಕ್ಷ ರೈತರ ಪರವಾಗಿ ಬರೀ ಬೂಟಾಟಿಕೆ ಪ್ರದರ್ಶಿಸುತ್ತಿದೆ. ಬರ ಪರಿಹಾರಕ್ಕೆ ಕೋರಿ ಕಳೆದ ಸೆಪ್ಟೆಂಬರ್ ತಿಂಗಳಲ್ಲೇ ಕೇಂದ್ರಕ್ಕೆ ಮನವಿ ಮಾಡಿದ್ದು, ಅಲ್ಲಿನ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿ ತೆರಳಿದರೂ ಇದುವರೆಗೆ ಯಾವುದೇ ಅನುದಾನ ಒದಗಿಸಿಲ್ಲ. ಕಳೆದ ತಿಂಗಳಷ್ಟೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡಿ ಕೋರಿಕೆ ಸಲ್ಲಿಸಿದರೂ ಇದುವರೆಗೆ ಬಿಡಿಗಾಡು ಬಿಡುಗಡೆ ಮಾಡಿಲ್ಲ. ಕೇಂದ್ರ ಸರಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲ. ರಾಜ್ಯದ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಎಲ್ಲರೂ ಒಂದೇ ಕುಟುಂಬದಂತೆ ಬಾಳಬೇಕೆನ್ನುವಿದು ಕಾಂಗ್ರೆಸ್ ನ ಆಶಯ. ಆದರೆ ಬಿಜೆಪಿ ಇದಕ್ಕೆ ತದ್ವಿರುದ್ದ ಎಂದು ಆರೋಪಿಸಿದರು.
ಇದೀಗ ತಮ್ಮ ಅಸ್ತಿತ್ವಕ್ಕಾಗಿ ಬಿಜೆಪಿ-ಜೆಡಿಎಸ್ ಒಂದಾಗಿದ್ದು ಈಗಲಾದರೂ ಮೋದಿಗೆ ಹೇಳಿ ಅನುದಾನ ಬಿಡುಗಡೆಗೊಳಿಸಲು ದೇವೇಗೌಡರು ಮುಂದಾಗಬೇಕಿದೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂತಹ ಡೋಂಗಿ ಬಿಜೆಪಿ ಪಕ್ಷವನ್ನು ಮತದಾರರು ದೂರವಿಡಬೇಕು ಎಂದು ಕರೆ ನೀಡಿದರು.
ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಜನತೆ ಹಾಗೂ ರೈತರ ಸಮಸ್ಯೆಗಳಿಗೆ ಸ್ಪಂದಿಸುವವರು ಮಾತ್ರ ರಾಜಕಾರಣದಲ್ಲಿ ಉಳಿದುಕೊಳ್ಳಲು ಸಾಧ್ಯ. ರಾಜ್ಯದಲ್ಲಿ ನೀರಿನ ಬವಣೆ ನೀಗಿಸುವಲ್ಲಿ ಕಾಂಗ್ರೆಸ್ ಬದ್ದವಾಗಿದೆ. ನಮ್ಮ ಗ್ಯಾರೆಂಟ್ ಯೋಜನೆಗಳು ಜನಸಾಮಾನ್ಯರ ಜೀವನಕ್ಕೆ ಬೆಳಕಾಗಿದೆ. ನಮ್ಮ ಉಚಿತ ಯೋಜನೆಗಳ ಬಗ್ಗೆ ಟೀಕೆ ಮಾಡಿದಂತಹ ಬಿಜೆಪಿಯ ಕೇಂದ್ರ ಸರಕಾರ ಇದೀಗ ನಮ್ಮದೇ ತಂತ್ರ ಅನುಸರಿಸಲು ಮುಂದಾಗಿದೆ ಎಂದು ಲೇವಡಿ ಮಾಡಿದರು.
ನಮ್ಮ ಪಕ್ಷ ಬದುಕಿನ ಬಗ್ಗೆ ಯೋಚಿಸುತ್ತದೆ ಆದರೆ ಬಿಜೆಪಿ ಪಕ್ಷ ಜನರ ಭಾವನೆಗಳ ಜೊತೆ ಆಟವಾಡುತ್ತದೆ. ಸಿದ್ದರಾಮಯ್ಯ ಅವರ ಅಕ್ಕಿ ಬಿಜೆಪಿಗರಿಗೆ ಮಂತ್ರಾಕ್ಷತೆಯಾಗಿದೆ. ಕಾಂಗ್ರೆಸಿಗರ ಪ್ರತಿ ನಾಯಕರ ಹೆಸರಲ್ಲಿ ದೇವರಿದ್ದಾನೆ ಎಂದ ಶಿವಕುಮಾರ್, ನಮ್ಮ ಸರಕಾರದ ಉಚಿತ ಯೋಜನೆಗಳೇ ಜನರಿಗೆ ಮಂತ್ರಾಕ್ಷತೆ. ಕನ್ನಡಾಭಿಮಾನಕ್ಕೆ ಒತ್ತು ನೀಡುವಲ್ಲಿ ಕೂಡ ಪಕ್ಷ ಆದ್ಯತೆ ನೀಡಿದೆ. ನೀರಿಗಾಗಿ ಹೆಜ್ಜೆ ಹಾಕುವುದನ್ನು ಮುಂದುವರೆಸಲಿದ್ದು ನಮ್ಮ ಅವಧಿಯಲ್ಲಿ ಮೇಕೆದಾಟು ಯೋಜನೆ ಜಾರಿ ಶತಶಿದ್ದ ಎಂದರು.
ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. 2018 ರಲ್ಲಿ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದ ಸಿದ್ದರಾಮಯ್ಯ ಅವರಿಂದಲೇ ಈ ಯೋಜನೆ ಉದ್ಘಾಟನೆಯಾಗಿದೆ. ಮಧ್ಯದಲ್ಲಿ ನಮ್ಮ ಸರಕಾರ ಅಧಿಕಾರ ಕಳೆದುಕೊಂಡ ಕಾರಣ ಯೋಜನೆಯ ಹಿನ್ನಡೆಗೆ ಕಾರಣವಾಗಿತ್ತು. ನನ್ನ ಅವಧಿಯಲ್ಲಿ ತಾಲೂಕಿಗೆ ಹೆಚ್ಚಿನ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ತಾಲೂಕಿಗೆ ಸಿದ್ದರಾಮಯ್ಯ ಅವರ ಕೊಡುಗೆ ಅಪಾರ ಎಂದರು.
ಇದೇ ಸಂದರ್ಭ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸಹಾಯಧನ ವಿತರಣೆ ಮಾಡಲಾಯಿತು.
ಈ ಸಂದರ್ಭ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು, ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ, ಕೆ.ಆರ್.ನಗರದ ರವಿಶಂಕರ್, ಚಾಮರಾಜ ವಿಧಾನಸಭೆಯ ಹರೀಶಗ ಗೌಡ, ಎಂಎಲ್ಸಿಗಳಾದ ಮರಿತಿಬ್ಬೇಗೌಡ, ತಿಮ್ಮಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಕೆ.ಪಿ.ಚಂದ್ರಕಲಾ, ಸದಸ್ಯ ಮಂಜುನಾಥ್ ಗುಂಡುರಾವ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಎಂಎಲ್ಸಿ ಅಭ್ಯರ್ಥಿ ಮಂಜುನಾಥ್ ಗುಂಡುರಾವ್, ಕೊಪ್ಪ ಗ್ರಾಪಂ ಅಧ್ಯಕ್ಷೆ ಶೀಲಾ, ಆವರ್ತಿ ಗ್ರಾಪಂ ಅಧ್ಯಕ್ಷೆ ಶಶಿಕಲಾ, ಮೈಸೂರು ಜಿಲ್ಲಾಧಿಕಾರಿ ಡಾ.ರಾಜೇಂದ್ರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಮುಖ್ಯ ಇಂಜಿನಿಯರ್ ಆರ್.ಎಲ್.ವೆಂಕಟೇಶ್, ಅಧೀಕ್ಷಕ ಅಭಿಯಂತರ ಕೆ.ಕೆ.ರಘುಪತಿ, ಕಾರ್ಯಪಾಲಕ ಅಭಿಯಂತರ ಎನ್.ಎಸ್.ದೇವೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಎಂ.ಶಿವಕುಮಾರ್, ಪುಟ್ಟಸ್ವಾಮಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಕಾಂಗ್ರೆಸ್ ಮುಖಂಡರುಗಳು ಇದ್ದರು.
Back to top button
error: Content is protected !!