ಕುಶಾಲನಗರ, ಫೆ 21 : ಸಹಕಾರ ಸಂಘಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ಸಮುದಾಯ ಭಾಗವಹಿಸುವಿಕೆ ಅತೀ ಪ್ರಮುಖವಾಗಿದೆ.ಜೊತೆಗೆ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾಗಿದೆ ಎಂದು ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಾಮ ನಿರ್ದೇಶಿತ ನಿರ್ದೇಶಕ ಎನ್.ಗಂಗಣ್ಣ ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ.ನಿ.ಬೆಂಗಳೂರು.
ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ ಮೆಂಟ್ ಮಡಿಕೇರಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ.ಹಾಗೂ ಸಹಕಾರ ಇಲಾಖೆ ಸಹಯೋಗದೊಂದಿಗೆ ಹೋಟೆಲ್ ಟಾಪ್ ಇನ್ ಟೌನ್ ಸಭಾಂಗಣದಲ್ಲಿ ಮೈಸೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯ್ದ
ಪರಿಶಿಷ್ಟ ಜಾತಿ, ಮತ್ತು ಪರಿಶಿಷ್ಟ ವರ್ಗದ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ರಾಜ್ಯ ಮಟ್ಟದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳಲ್ಲಿ ಸಿಗುವ ಸಾಲಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ಸ್ವಂತ ದುಡಿಮೆಯೊಂದಿಗೆ ಲಾಭಾಂಶಗಳಿಸಿ ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ರೈತರು ದೇಶದ ಬೆನ್ನೆಲುಬಾಗಿದ್ದಾರೆ. ಅವರ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುವ ಉದ್ದೇಶದಿಂದ ಸಹಕಾರ ಸಂಘಗಳನ್ನು ಆರಂಭಿಸಲಾಗಿದೆ. ರೈತ ಸಮುದಾಯ ಮೋಸ ಹೋಗದಂತೆ ತಡೆಯ ಬೇಕು ಎಂದರು.
ಮೈಸೂರು ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಲದ ಅಧ್ಯಕ್ಷ ಬಿ.ಕಾವೇರ ಮಾತನಾಡಿ,ಸಹಕಾರ ಮಹಾಮಂಡಲದ ವತಿಯಿಂದಪರಿಶಿಷ್ಟ ಜಾತಿ, ಮತ್ತು ಪರಿಶಿಷ್ಟ ವರ್ಗದ ಸಹಕಾರ ಸಂಘಗಳ ಪದಾಧಿಕಾರಿಗಳು ತರಬೇತಿ ಆಯೋಜಿಸಿರುವುದು ಹೆಮ್ಮೆಯ ವಿಚಾರ.ಈ ತರಬೇತಿಯನ್ನು ವರ್ಷಕ್ಕೆ ಮೂರು ಬಾರಿ ಆಯೋಜಿಸಲು ಕ್ರಮ ಕೈಗೊಳ್ಳಬೇಕು.ವರ್ಷದ ಕೊನೆಯಲ್ಲಿ ಕಾಟಾಚಾರಕ್ಕಾಗಿ ತರಬೇತಿಯನ್ನು ನಡೆಸಬಾರದು.ಇದರಿಂದ ಶಿಬಿರಾರ್ಥಿಗಳಿಗೆ ಪ್ರಯೋಜನವಾಗಬೇಕು ಎಂದರು.ಪರಿಶಿಷ್ಟ ವರ್ಗದ ಸಹಕಾರ ಸಂಘಗಳು ಕೇವಲ ಅರಣ್ಯ ಕಿರುಉತ್ಪನ್ನಗಳನ್ನು ಅವಲಂಬಿಸಿಕೊಳ್ಳಬಾರದು ಕಾರವಾರ ಹಾಗೂ ಮಂಗಳೂರು ಲ್ಯಾಂಪ್ಸ್ ಸಹಕಾರ ಸಂಘಗಳು ಬ್ಯಾಂಕ್ ವ್ಯವಹಾರ ನಡೆಸುವ ಮೂಲಕ ಅಭಿವೃದ್ಧಿಯತ್ತ ಸಾಗುತ್ತಿವೆ.ಅದೇ ರೀತಿಯ ಇತರೆ ಸಹಕಾರ ಸಂಘಗಳು ಕಾರ್ಯನಿರ್ವಹಿಸುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದರು.
ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ನ ಅಧ್ಯಕ್ಷ ಎ.ಕೆ. ಮನುಮುತ್ತಪ್ಪ ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿ ಮಾತನಾಡಿ,ದೇಶದ ಪ್ರಗತಿಗೆ ಸಹಕಾರ ಸಂಘಗಳ ಪಾತ್ರವು ಬಹುಮುಖ್ಯವಾಗಿರುತ್ತದೆ, ಅಲ್ಲದೆ ಸಹಕಾರ ವಲಯವು ರಾಷ್ಟ್ರದ ಅರ್ಥ ವ್ಯವಸ್ಥೆಯ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಸಾರ್ವಜನಿಕ- ಖಾಸಗಿ ಸಹಕಾರಿ ಸಹಭಾಗಿತ್ವವನ್ನು ಬಲಪಡಸುವುದರ ಮೂಲಕ ಇತ್ತೀಚಿನ ದಿನಗಳಲ್ಲಿ ಸಹಕಾರ ಸಂಘಗಳು ಸಹಕಾರ ಶಿಕ್ಷಣ, ತರಬೇತಿ, ಸಹಕಾರ ಕ್ಷೇತ್ರದ ಬೆಳವಣಿಗೆಗೆ ಸೂಕ್ತ ಸಹಕಾರ ಕಾನೂನು ಮತ್ತು ನಿಯಮಗಳ ತಿದ್ದುಪಡಿಗಳ ಮೂಲಕ ರಾಜ್ಯ ಮತ್ತು ಜಿಲ್ಲೆಯ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಅನುಕೂಲವಾಗುತ್ತಿದೆ. ಜಿಲ್ಲೆಯ ಯೂನಿಯನ್ ಬ್ಯಾಂಕ್ 12ವರ್ಷಗಳಿಂದಲೂ ಸಹಕಾರ ಶಿಕ್ಷಣ ನಿಧಿಯನ್ನು ನೂರಕ್ಕೆ ನೂರರಷ್ಟು ಪಾವತಿಸುವ ಮೂಲಕ ರಾಜ್ಯದಲ್ಲಿ ಏಕೈಕ ಜಿಲ್ಲೆಯಾಗಿದೆ. ರಾಜ್ಯ ಸಹಕಾರ ಒಕ್ಕೂಟದ ಮುಖೇನ ವಿವಿಧ ಹಂತಗಳಲ್ಲಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ನಿರ್ದೇಶಕರು ತರಬೇತಿಯನ್ನು ಪಡೆಯುವ ಮೂಲಕ ಹೊಸ ಸಹಕಾರ ನಿಯಮಗಳನ್ನು ತಿಳಿದುಕೊಂಡು ಅಯಾಯ ಸಂಘಗಳನ್ನು ಅಭಿವೃದ್ಧಿ ಪಡಿಸಲು ಸಹಕಾರವಾಗುವುದು ಎಂದರು.
ಈ ಸಂದರ್ಭ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ.ಮಡಿಕೇರಿ ನಿರ್ದೇಶಕ ರವಿ ಬಸಪ್ಪ ಉಪಸ್ಥಿತರಿದ್ದರು.
ಕಾರ್ಯಗಾರದಲ್ಲಿ ಬೆಂಗಳೂರು ಸಹಕಾರ ಸಂಘಗಳ ನಿವೃತ್ತ ಅಪರ ನಿಬಂಧಕರು ಎಚ್.ಎಸ್.ನಾಗರಾಜಯ್ಯ ಅವರು ಸಹಕಾರ ಸಂಸ್ಥೆಗಳ ಆಡಳಿತ ಮಂಡಳಿ ಅಧಿಕಾರ,ಕರ್ತವ್ಯ ಹಾಗೂ ಸಹಕಾರ ಕಾನೂನಿನ ಬದಲಾವಣೆ ಕುರಿತು,
ನಬಾರ್ಡ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ವೈ.ವಿ.ಗುಂಡೂರಾವ್ ಅವರು ನಾಯಕತ್ವದ ಗುಣಗಳು ಹಾಗೂ ಮಾನಸಿಕ ಒತ್ತಡ ನಿರ್ವಹಣೆ ಕುರಿತು,
ಮಡಿಕೇರಿಯ ಸಹಕಾರ ತರಬೇತಿ ಕೇಂದ್ರ ಪ್ರಾಂಶುಪಾಲೆ ಡಾ. ಆರ್. ಎಸ್. ರೇಣುಕಾ ಸಹಕಾರ ಕಾಯ್ದೆ ತಿದ್ದುಪಡಿ ಕುರಿತು ಹಾಗೂ ಮಡಿಕೇರಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಚಂದ್ರಪ್ಪ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸದಸ್ಯರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.
ಮೈಸೂರು ವಿಭಾಗ ಮಟ್ಟದ, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಒಟ್ಟು 8. ಜಿಲ್ಲೆಯ ಸಹಕಾರ ಸಂಘಗಳ ಪರಿಶಿಷ್ಟ ಜಾತಿ, ಮತ್ತು ಪಂಗಡದ ಪದಾಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಿದ್ದರು.
Back to top button
error: Content is protected !!