ಕಾರ್ಯಕ್ರಮ

ಕುಶಾಲನಗರ ಗೌಡ ಮಹಿಳಾ ಸಂಘದಿಂದ ಸಾಂಪ್ರದಾಯಿಕ ಕೆಡ್ಡಸ ಹಬ್ಬ ಆಚರಣೆ

ಕುಶಾಲನಗರ, ಫೆ 16:ಕುಶಾಲನಗರದ ಕೃಷಿ ಭೂಮಿಯಲ್ಲಿ ಗೌಡ ಮಹಿಳಾ ಸಂಘದ ನೇತೃತ್ವದಲ್ಲಿ ನಡೆದ ಸಾಂಪ್ರದಾಯಿಕ ಕೆಡ್ಡಸ ಪೂಜೆ ಯಲ್ಲಿ ಸಂಘದ ಎಲ್ಲ ಸದಸ್ಯರು ಭಾಗವಹಿಸಿದ್ದರು.

ಕೆಡ್ಡಸದ ಮಹತ್ವದ ಬಗ್ಗೆ ವಿವರವಾಗಿ ಮಾತನಾಡಿದ ಸಂಘದ ಅಧ್ಯಕ್ಷರಾದ ಶ್ರೀಮತಿ ಕಲಾ ಕರಂದ್ಲಾಜೆ ಅವರು
ಗೌಡರ ಜೀವನ ನೇರವಾಗಿ ಒಕ್ಕಲುತನಕ್ಕೆ ಸಂಬಂಧಿಸಿದ್ದು ಭೂಮಿ ತಾಯಿಯ ಆರಾಧನೆಯಲ್ಲಿ ಅವರು ಪ್ರಥಮವಾಗಿ ನಿಲ್ಲುತ್ತಾರೆ. ಕೆಡ್ಡಸ ಪೂಜೆ ಈ ದಿಶೆಯಲ್ಲಿ ಪ್ರಮುಖವಾಗಿದೆ.
ಕ್ಯಾಲೆಂಡರ್ ಪ್ರಕಾರ ಫೆಬ್ರವರಿ ತಿಂಗಳ ಮಧ್ಯದಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಅಂದರೆ ಮೂರು ದಿನದಲ್ಲಿ ಮೊದಲನೆಯ ದಿನ ಕೊಡಿ ಕೆಡ್ಡಾಸ, ನಡು ಕೆಡ್ಡಾಸ, ಕಡೆ ಕೆಡ್ಡಾಸ ಎಂಬುದಾಗಿ ಈ ಹಬ್ಬವನ್ನು ಹೆಚ್ಚಾಗಿ ಕೃಷಿ ಪ್ರಧಾನ ಜಿಲ್ಲೆಗಳಾದ ಕೊಡಗು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಆಚರಿಸುತ್ತಾರೆ. ಅಂದರೆ ಈ ಸಮಯದಲ್ಲಿ ಭೂಮಿ ತಾಯಿಯು ಋತುಮತಿಯಾಗುತ್ತಾಳೆ ಎಂಬುದು ಇಲ್ಲಿಯ ಜನರ ನಂಬಿಕೆ.
ಸ್ತ್ರೀ ಋತುಮತಿಯಾದ ನಂತರ ಹೇಗೆ ಮಗು ಪಡೆಯಲು ಸಶಕ್ತಳಾಗುತ್ತಾಳೋ, ಹಾಗೆ ಭೂಮಿಯು ಕೂಡ ಮುಂದಿನ ಮಳೆಗಾಲದ ಕೃಷಿಗೆ ಮತ್ತು ಬೆಳೆಗಳನ್ನು ಬೆಳೆಸಲು ಸಜ್ಜಾಗುತ್ತಾಳೆ ಎನ್ನುವುದು ಇದರ ಆಶಯ .
ಇದೊಂದು ಫಲವತ್ತತೆಯ ಸಂಕೇತ.ಕೆಡ್ಡಸದ ಮೂರು ದಿನಗಳಲ್ಲಿ ರೈತರು ಭೂಮಿಯನ್ನು ಊಳುವಂತಿಲ್ಲ,ಮರ ಗಿಡಗಳನ್ನು ಕಡಿಯುವಂತಿಲ್ಲ ಮತ್ತು ಗುದ್ದಲಿ ಪಿಕಾಶಿ ಬಳಸಿ ನೆಲ ಅಗಿಯುವಂತಿಲ್ಲ.
ಭೂಮಿತಾಯಿಗೆ ಸಂಪೂರ್ಣ ವಿಶ್ರಾಂತಿ ಕೊಡುವ ಸಮಯ ಆದ್ದರಿಂದ ಆ ಮೂರು ದಿವಸದಲ್ಲಿ ಭೂಮಿತಾಯಿಗೆ ತೆಂಗಿನ ಎಣ್ಣೆಯನ್ನು ಬಿಟ್ಟು ,ಸ್ನಾನಕ್ಕೆ ಸೀಗಕಾಯಿ,ಅಂಟುವಾಳ ಕಂಚಿನ ಚೆಂಬಲ್ಲಿ ನೀರ ನಿಟ್ಟು ಮರದ ಬಾಚಣಿಗೆಯನ್ನಿಟ್ಟು ಸೂರ್ಯದೇವನಿಗೆ ಅಕ್ಕಿಯನ್ನು ಪ್ರೋಕ್ಷಣೆ ಮಾಡಿ ಭೂಮಿತಾಯಿಗೆ ನಮಸ್ಕರಿಸುವರು. ಹಾಗೆಯೆ ಅಟ್ಟದ ಮೇಲಿನ ಭತ್ತದ ಕಡಿಕೆಗೆ ಸೀಮಳು ಕೊಡಿ ಮತ್ತು ಕಲ್ಲನ್ನು ಇಡುವ ಕ್ರಮವಿರುತ್ತದೆ ಎಂದು ವಿವರಿಸಿದರು.
ಸಂಘದ ನಿರ್ದೇಶಕರಾದ ಶ್ರೀಮತಿ ಕುಕ್ಕುನೂರು ತೀರ್ಥರವರು ಮಾತನಾಡಿ
ಕೆಡ್ಡಸದ ಈ ಮೂರು ದಿವಸಗಳನ್ನು ನಮ್ಮ ಪೂರ್ವ ಪದ್ಧತಿಯಂತೆ ಆಚರಿಸುವುದು ಅವಶ್ಯಕ ಮತ್ತು ನಮ್ಮ ಯುವ ಪೀಳಿಗೆಗೆ ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ತಿಳಿಯಬೇಕು ಹಾಗೂ ಇಂಥ ಮುಖ್ಯವಾದ ಹಬ್ಬಗಳನ್ನು ಪೋಷಣೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭೂಮಿ ತಾಯಿಯ ಪ್ರಾರ್ಥನೆಯನ್ನು ಶ್ರೀಮತಿ ಶ್ರೀವಾಣಿ ಕುಯ್ಯಮುಡಿ ರವರು ಮಾಡಿದರು.
ಶ್ರೀಮತಿ ದೇವಕ್ಕಿ ಕುದುಪಜೆ ರವರು ಸರ್ವರನ್ನು ಸ್ವಾಗತಿಸಿದರು.
ಸಂಘದ ಪ್ರತಿನಿಧಿಗಳಾದ ಶ್ರೀಮತಿ ಪ್ರಮೀಳಾ ಪೊಡನೊಳನ, ವಿಂದ್ಯಾ ಕಾಳೆeರಮ್ಮನ ರವರು ಹಾಜರಿದ್ದರು.
ಶ್ರೀಮತಿ ಲತಾ ಕಾಳೆರಮ್ಮ ಅವರ ವಂದನೆಯೊಂದಿಗೆ ಈ ವರ್ಷದ ಕೆಡ್ಡಸ ಹಬ್ಬದಲ್ಲಿ ಭೂತಾಯಿಗೆ ಸಾಂಪ್ರದಾಯಿಕ ವಂದನೆ ಸಲ್ಲಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!