ಮನವಿ

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಅಖಿಲ ಭಾರತ ಸನ್ಯಾಸಿಗಳ ಸಂಘದಿಂದ ರವಿಶಂಕರ್ ಗುರೂಜಿ ಭೇಟಿ

ಕುಶಾಲನಗರ, ನ 22:
ಜೀವನದಿ ಕಾವೇರಿ ಸಂರಕ್ಷಣೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೂಲಕ ಯೋಜನೆಗಳನ್ನು ರೂಪಿಸಲು ಆಗ್ರಹಿಸುವುದಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕರಾದ ಶ್ರೀ ರವಿಶಂಕರ್ ಗುರೂಜಿ ಭರವಸೆ ವ್ಯಕ್ತಪಡಿಸಿದ್ದಾರೆ.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಅಖಿಲ ಭಾರತ ಸನ್ಯಾಸಿಗಳ ಸಂಘ ಗುರೂಜಿ ಅವರನ್ನು ಬೆಂಗಳೂರಿನ ಆಶ್ರಮದಲ್ಲಿ ಭೇಟಿ ಮಾಡಿ ಕಾವೇರಿ ನದಿ ಸಂರಕ್ಷಣೆಯ ಬಗ್ಗೆ ಚರ್ಚೆ ನಡೆಸಿದ ನಂತರ ಅವರು ಮಾತನಾಡಿದರು.
ತಮ್ಮ ಸಂಸ್ಥೆಯ ಮೂಲಕ ದೇಶದ ವಿವಿದೆಡೆ ನದಿಗಳ ಪುನಶ್ಚೇತನ ಕಾರ್ಯ ನಡೆಯುತ್ತಿದೆ.
ರಾಜ್ಯ ಮತ್ತು ಕೇಂದ್ರ ಜಲ ಶಕ್ತಿ ಸಚಿವಾಲಯಗಳ ಮೂಲಕ ಸಂಪರ್ಕಿಸಿ ಕಾವೇರಿ ನದಿ ಸಂರಕ್ಷಣೆ ಕಾರ್ಯ ನಡೆಸಲು ಎಲ್ಲ ರೀತಿಯಲ್ಲಿ ಕೈಜೋಡಿಸಲಾಗುವುದು ಎಂದರು.
ಶನಿವಾರ ಬೆಂಗಳೂರಿಗೆ ತೆರಳಿದ ಸಾಧು ಸಂತರು ಮತ್ತು ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಪ್ರಮುಖರೊಂದಿಗೆ ಚರ್ಚಿಸಿದ ಶ್ರೀಗಳು ತಲಕಾವೇರಿ ಕ್ಷೇತ್ರದಿಂದ ಉಗಮವಾಗುವ ಕಾವೇರಿ ನದಿಯ ವಾಸ್ತವ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸರ್ಕಾರದ ಸಂಬಂಧಪಟ್ಟ ಇಲಾಖೆಗಳೊಂದಿಗೆ ವ್ಯವಹರಿಸುವುದಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಈ ಸಂಬಂಧ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಟ್ರಸ್ಟಿ ವಿಷ್ಣು ಪಾದ ಸ್ವಾಮೀಜಿ ಮತ್ತು ಕಾರ್ಯಕ್ರಮ ಸಂಯೋಜಕರಾದ ಡಾ ವೆಂಕಟೇಶ್ ಅವರಿಗೆ ನದಿ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಜಲ ಮೂಲಗಳ ಸಂರಕ್ಷಣೆ ಅಭಿವೃದ್ಧಿ ಮತ್ತು ಯೋಜನೆಗಳನ್ನು ರೂಪಿಸಲು ಅಗತ್ಯ ದಾಖಲೆಗಳನ್ನು ರಾಜ್ಯ ಕೇಂದ್ರ ಜಲ ಶಕ್ತಿ ಇಲಾಖೆಗಳಿಗೆ ರವಾನಿಸುವ ಮೂಲಕ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ನಿಟ್ಟಿನಲ್ಲಿ ನಿಯೋಗದೊಂದಿಗೆ ಸಭೆ ನಡೆಸಿದ ಪ್ರಮುಖರು ನದಿಯ ವಾಸ್ತವ ಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಪ್ರತಿ ಜಿಲ್ಲೆಗಳಲ್ಲಿ ಸಭೆ ನಡೆಸಿ ನದಿಯ ಸಂರಕ್ಷಣೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು ಹಾಗೂ ಸರ್ಕಾರದ ಮೂಲಕ ಅಗತ್ಯ ಯೋಜನೆಗಳನ್ನು ರೂಪಿಸುವ ಸಂಬಂಧ ಸಭೆ ನಡೆಸುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ನಿಯೋಗದಲ್ಲಿ ಹರಿದ್ವಾರ ಅಖಂಡ ಪರಂಧಾಮ್ ಆಶ್ರಮದ ಶ್ರೀ ಅನಂತಾನಂದ ಸ್ವಾಮೀಜಿ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಎನ್ ಚಂದ್ರಮೋಹನ್, ನಮಾಮಿ ಕಾವೇರಿ ಜಿಲ್ಲಾ ಸಂಚಾಲಕರಾದ ವನಿತಾ ಚಂದ್ರಮೋಹನ್, ವಿಶ್ವ ಹಿಂದೂ ಪರಿಷತ್ ರಾಜ್ಯ ಪ್ರಮುಖರಾದ ಸೂರ್ಯನಾರಾಯಣ, ಸೇವ್ ಕಾವೇರಿ ಆಯೋಜಕರಾದ ಗೋವಿಂದಸ್ವಾಮಿ, ಅಖಿಲ ಭಾರತ ಸನ್ಯಾಸಿಗಳ ಸಂಘದ ಪ್ರಮುಖರಾದ ಸ್ವಾಮಿ ವಿರೂಪಾಕ್ಷ , ಸ್ವಾಮಿ ಬಾಲ ಮುರುಗಾನಂದ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಂಚಾಲಕರಾದ ಡಾ. ಮೋಹನ್ ಪ್ರಸಾದ್, ನಮಾಮಿ ಕಾವೇರಿ ಮಾರ್ಗದರ್ಶಕರಾದ ಸುಮನ ಮಳಲಗದ್ದೆ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಪ್ರಮುಖರಾದ ಸುನಿಲ್ ಶುಕ್ಲ, ಕರಣ್ ಚೋಪ್ರಾ, ಡಾ. ಕಾವೇರಿ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!