ಕ್ರೈಂ

ಬಾಲಕಿ ರುಂಡ ಚೆಂಡಾಡಿದ್ದ ಆರೋಪಿಗೆ ಮರಣದಂಡನೆ ಶಿಕ್ಷೆ ಪ್ರಕಟ

ಕುಶಾಲನಗರ, ನ 21: ಎರಡು ವರ್ಷ ಆರು ತಿಂಗಳ ಹಿಂದೆ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಕೊಡಗಿನ ಸೋಮವಾರಪೇಟೆ ಕುಂಬಾರಗಡಿಗೆ ಗ್ರಾಮದ ಅಪ್ರಾಪ್ತ ಬಾಲಕಿಯ ಹತ್ಯೆ ಪ್ರಕರಣದಲ್ಲಿ ಆರೋಪಿಯು ಎಸಗಿದ ಅಪರಾಧದ ದುಷ್ಕೃತ್ಯ ಸಾಬೀತು ಆದ ಹಿನ್ನೆಲೆ,ಜಿಲ್ಲಾ ಸತ್ರ ಸ್ಪೆಷನ್ಸ್ ನ್ಯಾಯಾಲಯವು ಆರೋಪಿ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಅಲಿಯಾಸ್ ಓಂಕಾರಪ್ಪ (32) ನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

*ಪ್ರಕರಣದ ಹಿನ್ನೆಲೆ :*
ಕುಂಬಾರಗಡಿಗೆ ಗ್ರಾಮದ ಉದಿಯಂಡ ಸುಬ್ರಮಣಿರವರ 16 ವರ್ಷ ಪ್ರಾಯದ ಪುತ್ರಿ ಸೂರ್ಲಬ್ಬಿ ಸರಕಾರಿ ಶಾಲೆಯ ಏಕೈಕ SSLC ವಿದ್ಯಾರ್ಥಿನಿಯಾಗಿ ದ್ದಳಲ್ಲದೆ 2024 ರ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಳು. ಇವಳನ್ನು ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಅಲಿಯಾಸ್ ಓಂಕಾರಪ್ಪ (32) ಎಂಬಾತ ಪ್ರೀತಿಸುತ್ತಿದ್ದನಲ್ಲದೆ SSLC ಪರೀಕ್ಷೆಯ ಫಲಿತಾಂಶ ಬಂದ ಸಂದರ್ಭದಲ್ಲಿ ಇವರಿಬ್ಬರ ವಿವಾಹದ ನಿಶ್ಚಿತಾರ್ಥ ನಡೆದಿತ್ತು.
ಈಕೆ ಅಪ್ರಾಪ್ತಳಾಗಿದ್ದರಿಂದ ವಿವಾಹ ನಿಶ್ಚಿತಾರ್ಥವಾದ ವಿಷಯ ಅರಿತ ಸಂಬಂಧಪಟ್ಟ ಇಲಾಖೆಯವರು, ಅಪ್ರಾಪ್ತ ವಯಸ್ಸಿನಲ್ಲಿ ಮದುವೆ ಮಾಡುವುದು ಕಾನೂನು ಪ್ರಕಾರ ಅಪರಾಧ. ಈಗಲೇ ಮದುವೆ ಮಾಡುವುದು ಬೇಡ ಎಂದು ಈಕೆಯ ಪೋಷಕರಿಗೆ ತಿಳಿಹೇಳಿದ್ದರು. ಹೀಗಾಗಿ ಸಧ್ಯಕ್ಕೆ ಮದುವೆ ಬೇಡ, ಮುಂದೆ ನೋಡುವ ಎಂದು ಮನೆಯವರು ಓಂಕಾರಪ್ಪನಿಗೆ ತಿಳಿಸಿದ್ದಾರೆ.

*ಬಾಲಕಿಯ ರುಂಡ – ಮುಂಡ ಕಡಿದು ಕೊಲೆ ಮಾಡಿದ ಪಾತಕಿ*
ಯಾವಾಗ ಮನೆಯವರು ಮದುವೆಯ ಬಗ್ಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರೋ ಅವಾಗಲೇ ಓಂಕಾರಪ್ಪ ರೌದ್ರಾವತಾರ ತಾಳಿದ್ದ. ದಿನಾಂಕ 09-05 2024 ರ ರಾತ್ರಿ ಬಾಲಕಿಯ ತಾಯಿಯೊಂದಿಗೆ ವಾಗ್ವಾದಕ್ಕಿಳಿದ ಓಂಕಾರಪ್ಪ ಆಕೆಯ ಮೇಲೆ ಹಲ್ಲೆ ಮಾಡಿ ಬಾಲಕಿಯನ್ನು ಮನೆಯಿಂದ 200 ಮೀ. ದೂರಕ್ಕೆ ಎಳೆದೊಯ್ದು ಕತ್ತಿಯಿಂದ ರುಂಡ ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿದ್ದ. ನಂತರ ಬಾಲಕಿಯ ತಲೆಯನ್ನು ಹೊತ್ತೊಯ್ದು ಸಮೀಪದ ಕಾಡಿನಲ್ಲಿ ಬಚ್ಚಿಟ್ಟು ಪರಾರಿ ಆಗಿದ್ದ.

ಕೃತ್ಯ ನಡೆದ ಎರಡು ದಿನಗಳ ನಂತರ ಓಕಾರಪ್ಪನನ್ನು ಬಂಧಿಸಿದ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.

ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂದಿನ ಸರ್ಕಲ್ ಇನ್ಸ್ ಪೆಕ್ಟರ್ ವಸಂತ ಕುಮಾರ್ ಅವರು ಪ್ರಕರಣದ ತನಿಖಾಧಿಕಾರಿಯಾಗಿ ನಿಯುಕ್ತಿಗೊಂಡು ತನಿಖೆ ನಡೆಸಿ ಸಾಕ್ಷ್ಯಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿ ಓಕಾರಪ್ಪ ಎಸಗಿದ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ದಿನಾಂಕ 13-11-2026 ರಂದು ಅಪರಾಧಿ ಎಂದು ಘೋಷಿಸಿತ್ತು.
ಅಂತಿಮ ತೀರ್ಪು ಪ್ರಕಟಿಸಿದ ನ್ಯಾಯಾಲಯ ಅಪರಾಧಿ ಓಕಾರಪ್ಪನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!