ಕಾರ್ಯಕ್ರಮ

ಕುಶಾಲನಗರ: ಕಾವೇರಿ ನದಿಗೆ 148ನೆಯ ಮಹಾ ಆರತಿ

ಕುಶಾಲನಗರ ಸೆ 4: ನದಿ ಪರಿಸರ ಉಳಿಸಿ ಸಂರಕ್ಷಣೆ ಮಾಡುವ ಬಗ್ಗೆ ಪ್ರತಿಯೊಬ್ಬರು ಪಣತೊಡಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ರೋಹಿತ್ ತಿಳಿಸಿದ್ದಾರೆ.
ಹುಣ್ಣಿಮೆ ಅಂಗವಾಗಿ ಕಾವೇರಿ ನದಿಗೆ ನಡೆದ 148ನೆಯ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಕೃತಿಯನ್ನು ಆರಾಧನೆಯೊಂದಿಗೆ ಉಳಿಸುವ ಪ್ರಯತ್ನ ಹಾಗೂ ಜನರಿಗೆ ಅರಿವು ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಸಂಚಾಲಕರಾದ ಚಂದ್ರಮೋಹನ್, ದಕ್ಷಿಣ ಭಾರತದ ಜೀವನದಿ ಎನಿಸಿರುವ ಕಾವೇರಿ ನದಿಯ ನೀರಿಗಾಗಿ ರಾಜ್ಯಗಳ ನಡುವೆ ಹೋರಾಟ ನಡೆಯುತ್ತಿದೆ. ಆದರೆ ನದಿ ಜಲಮೂಲಗಳ ಸಂರಕ್ಷಣೆಗೆ ಯಾವುದೇ ಶಾಶ್ವತ ಯೋಜನೆಗಳು ರೂಪುಗೊಂಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಈ ಸಂಬಂಧ ಕೇಂದ್ರ ರಾಜ್ಯ ಸರ್ಕಾರಗಳು ಕಾವೇರಿ ನದಿ ಸ್ವಚ್ಛತೆ ಹಾಗೂ ಸಂರಕ್ಷಣೆ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುವಂತಾಗಬೇಕು ಎಂದರು.
ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು ಕುಂಕುಮಾರ್ಚನೆ, ಅಷ್ಟೋತ್ತರ ನಂತರ ನದಿಗೆ ಮಹಾ ಆರತಿ ಬೆಳಗಿ, ನಾಡಿನಲ್ಲಿ ಬರಗಾಲ ಆವರಿಸದೆ ಉತ್ತಮ ಮಳೆ ಬೆಳೆ ಬರುವ ಮೂಲಕ ಸುಭಿಕ್ಷ ವಾಗಿರಲಿ ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷರಾದ ಮಂಡೆಪಂಡ ಬೋಸ್ ಮೊಣ್ಣಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಶಾಲನಗರ ವಲಯ ಮೇಲ್ವಿಚಾರಕರಾದ ಪೂರ್ಣಿಮಾ, ಸಂಘದ ಸೇವಾ ಪ್ರತಿನಿಧಿಗಳು, ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ಮತ್ತಿತರರು ಇದ್ದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!