ಕುಶಾಲನಗರ, ಜು 23: ಕುಶಾಲನಗರ ಮಾದಾಪಟ್ಟಣ ಗ್ರಾಮ ನಿವಾಸಿಯಾದ ಅಣ್ಣಾಜಿ ಎಂಬುವವರಿಗೆ ದಿನಾಂಕ: 11-10-2022 ರಂದು ಸುಮಾರು 12.30 ಗಂಟೆ ಸಮಯದಲ್ಲಿ ಅದೇ ಗ್ರಾಮದ ನಿವಾಸಿ ನಂದೀಶ ಎಂಬಾತನು ಪೂರ್ವ ದ್ವೇಷದಿಂದ ಅಣ್ಣಾಜಿ ರವರಿಗೆ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ್ದು ಹಾಗೂ ಕೊಲೆ ಮಾಡುವ ಉದ್ದೇಶದಿಂದ ಕತ್ತಿಯಿಂದ ತಲೆ & ಎಡಭಾಗದ ಕಿವಿಯ ಬಳಿ ಕಡಿದಿದ್ದು, ಕಿವಿಯ ಭಾಗ ತುಂಡಾಗಿರುತ್ತದೆ ಹಾಗೂ ದವಡೆಯ ಮೂಳೆ ಮುರಿದು ತೀವ್ರ ಸ್ವರೂಪದ ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ನಂದೀಶನ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಕುರಿತು ದಿನಾಂಕ: 11-10-2022 ರಂದು ದೂರು ಸ್ವೀಕರಿಸಿದ್ದು, ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 307 ಐಪಿಸಿ & ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ದಿ: 12-10-2022 ರಂದು ಆರೋಪಿ ನಂದೀಶನನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಸದರಿ ಪ್ರಕರಣದ ತನಿಖಾಧಿಕಾರಿಯಾದ ಆರ್.ವಿ ಗಂಗಾಧರಪ್ಪ, ಡಿಎಸ್ ಪಿ, ಸೋಮವಾರಪೇಟೆ ಉಪವಿಭಾಗ ಮತ್ತು ಸಿಬ್ಬಂದಿಯವರು ಪ್ರಕರಣದ ಸಂಪೂರ್ಣ ತನಿಖೆಯನ್ನು ಕೈಗೊಂಡು ಆರೋಪಿ ನಂದೀಶನ ವಿರುದ್ಧ ದೋಷಾರೋಪಣ ಪತ್ರವನ್ನು ದಿ: 24-11-2022 ರಂದು ಘನ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಡಿಕೇರಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಘನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ನಡೆಸಿ ದಿನಾಂಕ: 23/07/2024 ರಂದು ಸದರಿ ಪ್ರಕರಣದ ಆರೋಪಿ ನಂದೀಶನಿಗೆ ಐಪಿಸಿ & ಎಸ್ಸಿ/ಎಸ್ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಒಟ್ಟು 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ರೂ. 15,000/- ಗಳ ದಂಡವನ್ನು ವಿಧಿಸಿ ಘನ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಜಿ.ಪ್ರಶಾಂತಿ ರವರು ತೀರ್ಪು ನೀಡಿರುತ್ತಾರೆ.
ಸದರಿ ಪ್ರಕರಣದ ತನಿಖಾಧಿಕಾರಿಗಳಾದ ಶ್ರೀ ಆರ್.ವಿಗಂಗಾಧರಪ್ಪ, ಡಿಎಸ್ ಪಿ, ಸೋಮವಾರಪೇಟೆ ಉಪವಿಭಾಗ ಹಾಗೂ ಸಿಬ್ಬಂದಿಗಳು ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆ ಮತ್ತು ಸರ್ಕಾರಿ ಅಭಿಯೋಜಕರಾದ ಶ್ರೀ. ದೇವೇಂದ್ರ.ಎನ್.ಪಿ ರವರು ಸದರಿ ಮೇಲ್ಕಂಡ ಆರೋಪಿಯ ವಿರುದ್ಧ ಘನ ನ್ಯಾಯಾಲಯದಲ್ಲಿ ಉತ್ತಮವಾಗಿವಾದ ಮಂಡಿಸಿ ಶಿಕ್ಷೆಯನ್ನು ವಿಧಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆ.
ಶ್ರೀ ಆರ್.ವಿ.ಗಂಗಾಧರಪ್ಪ, ಡಿಎಸ್ಪಿ, ಸೋಮವಾರಪೇಟೆ ಉಪವಿಭಾಗ ಹಾಗೂ ಸಿಬ್ಬಂದಿಗಳು ಮತ್ತು ಸರ್ಕಾರಿ ಅಭಿಯೋಜಕರಾದ ಶ್ರೀ. ದೇವೇಂದ್ರಎನ್.ಪಿ ರವರಿಗೆ ಹಾಗೂ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಜಿ.ಪ್ರಶಾಂತಿ, ಘನ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮಡಿಕೇರಿ ರವರಿಗೆ ಶ್ರೀ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.
Back to top button
error: Content is protected !!