ಸಾಮಾಜಿಕ
ನೀರಿನ ಸದ್ಬಳಕೆ ಹಾಗೂ ಮಿತವ್ಯಯಕ್ಕೆ ವಾಟರ್ ಯೂನಿವರ್ಸಿಟಿ ಸ್ಥಾಪನೆ ಅಗತ್ಯ
ಹಾರಂಗಿ ಅಣೆಕಟ್ಟೆಗೆ ನಿವೃತ್ತ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಭೇಟಿ ನೀಡಿ ಪರಿಶೀಲಿಸಿದರು

ಕುಶಾಲನಗರ, ಮಾ 06: ಭವಿಷ್ಯದಲ್ಲಿ ನೀರಿನ ಕ್ಷಾಮ ತಲೆದೋರದಂತೆ ನೀರಿನ ಸದ್ಬಳಕೆ ಹಾಗೂ ಮಿತವ್ಯಯ ಕಡ್ಡಾಯವಾಗಿ ಆಗಬೇಕಿದೆ. ಇದಕ್ಕೆ ಪೂರಕವಾಗಿ ವಾಟರ್ ಯೂನಿವರ್ಸಿಟಿ ಆರಂಭಿಸುವ ಬಗ್ಗೆ ಸರಕಾರ ಚಿಂತನೆ ಹರಿಸಬೇಕಿದೆ ಎಂದು ನಿವೃತ್ತ ಪೊಲೀಸ್ ಕಮಿಷನರ್, ಬಿಜೆಪಿ ಮುಖಂಡ ಭಾಸ್ಕರ್ ರಾವ್ ಅಭಿಪ್ರಾಯಿಸಿದರು.
ಅವರು ಕೊಡಗಿನ ಹಾರಂಗಿ ಅಣೆಕಟ್ಟೆಗೆ ಭೇಟಿ ನೀಡಿ ನೀರಿನ ಸಂಗ್ರಹ, ಅಣೆಕಟ್ಟೆ ಅಭಿವೃದ್ಧಿ ಬಗ್ಗೆ ವೀಕ್ಷಿಸಿದರು.
ಈ ಬಾರಿಯ ಬೇಸಿಗೆ ಆರಂಭದಲ್ಲಿ ಎಲ್ಲೆಡೆ ನೀರಿನ ಹಾಹಾಕಾರ ಎದುರಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ನೀರಿನ ಸಮರ್ಪಕ ನಿರ್ವಹಣೆಗೆ ಎಲ್ಲರೂ ಆದ್ಯತೆ ನೀಡಿದಾಗ ಮಾತ್ರ ಇರುವ ನೀರಿನ ಪ್ರಮಾಣ ಸದ್ಬಳಕೆ ಸಾಧ್ಯ ಎಂದು ಅವರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕೊಡಗಿನಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಹಲವು ಬಾರಿ ಹಾರಂಗಿಗೆ ಭೇಟಿ ನೀಡಿದ ನೆನಪಿದೆ. ಪ್ರವಾಸೋದ್ಯಮ ದೃಷ್ಟಿಯಿಂದ ಹಾರಂಗಿ ಮತ್ತಷ್ಟು ಅಭಿವೃದ್ಧಿ ಹೊಂದುವ ಅಗತ್ಯವಿದೆ.
ಭವಿಷ್ಯದ ದೃಷ್ಠಿಯಿಂದ ರಾಜ್ಯದ ವಿವಿಧ ಅಣೆಕಟ್ಟೆಗಳಲ್ಲಿ ಹೂಳೆತ್ತುವ ಕೆಲಸ ಆಗಬೇಕಿದೆ. ಹೂಳೆತ್ತಿದಾಗ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಅಣೆಕಟ್ಟೆಗಳಲ್ಲಿ ನೀರು ಸಂಗ್ರಹಿಸಲು ಸಾಧ್ಯ. ಈ ಬಗ್ಗೆ ಸರಕಾರ ಕಾಳಜಿ ವಹಿಸಬೇಕಿದೆ ಎಂದರು.
ಈ ಸಂದರ್ಭ ವಕೀಲ ರವೀಂದ್ರ ಇದ್ದರು.



