ಕುಶಾಲನಗರ, ಸೆ 21: ಬಸವನಹಳ್ಳಿ ಗ್ರಾಮದಲ್ಲಿರುವ ಸೋಮವಾರಪೇಟೆ ತಾಲ್ಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎಸ್.ಆರ್.ಅರುಣ್ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು
ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾದ ಚರ್ಚೆಗಳು ನಡೆಯಿತು. ಸಂಘದ ಸದಸ್ಯರಾದ ಮೋಹನ್, ಕಳಿಂಗ, ರಾಜು, ಕಿರಣ್ ಮತ್ತಿತರರು ತಮ್ಮ ಅಭಿಪ್ರಾಯ, ಸಲಹೆಗಳನ್ನು ವ್ಯಕ್ತಪಡಿಸಿದರು. 2022-23 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಸಂಬಂಧಿಸಿದಂತೆ, ಸಾಲ ಸೌಲಭ್ಯ ವಿತರಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.
ಕಳೆದ ಮೂರು ವರ್ಷಗಳ ಹಿಂದೆ ಕೈಗೊಳ್ಳಲಾದ ಕಟ್ಟಡ ಕಾಮಗಾರಿಯು ಪೂರ್ಣಗೊಂಡರೂ ಸಹ ಅದರ ಕ್ರಿಯಾ ಯೋಜನೆ ಮತ್ತು ಅನುಮೋದನೆ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಗಂಭೀರ ಚರ್ಚೆ ನಡೆಯಿತು. ಸಭೆಯಲ್ಲಿ ಮುಂದಿನ ದಿನಗಳಲ್ಲಿ 50 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಮಹಾಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್.ಆರ್.ಅರುಣ್ ರಾವ್ ಮಾತನಾಡಿ, ಸಂಘವು 2021-22 ನೇ ಸಾಲಿನಲ್ಲಿ ಕಿರು ಅರಣ್ಯ ಉತ್ಪನ್ನಗಳ ಖರೀದಿ ಮತ್ತು ಗ್ರಾಹಕ ಶಾಖೆಗಳಲ್ಲಿ ವ್ಯಾಪಾರ ವಹಿವಾಟುಗಳನ್ನು ನಡೆಸಿ ರೂ 15 ಲಕ್ಷದ 16 ಸಾವಿರದ 785 ರೂ ಗಳ ನಿವ್ವಳ ಲಾಭವನ್ನು ಗಳಿಸಿದೆ. ಇದರಲ್ಲಿ ಸಂಘದ ಸದಸ್ಯರಿಗೆ ಅನುಕೂಲವಾಗುವಂತೆ ಕಿರು ಅರಣ್ಯ ಉತ್ಪನ್ನಗಳಾದ ಸೀಗೆಕಾಯಿ, ಮರದಪಾಚಿ, ಜೇನು ಸಂಗ್ರಹಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸಂಘದ ಸದಸ್ಯರ ಕುಟುಂಬದವರಿಗೆ ಯಶಸ್ವಿನಿ ಯೋಜನೆಯನ್ನು ಸಹಕಾರ ಇಲಾಖೆಯ ಮೂಲಕ ಒದಗಿಸುವ ಬಗ್ಗೆ ತಿಳಿಸಿದರು.
ಸಂಘದ ಅಭಿವೃದ್ಧಿಗೆ ಪೂರಕವಾದ ಯೋಜನೆ ಅಡಿಯಲ್ಲಿ ಹುದುಗೂರು ಮತ್ತು ಆಡಿನಾಡೂರು ಗ್ರಾಮದಲ್ಲಿ ಸ್ವಂತ ನ್ಯಾಯಬೆಲೆ ಕಟ್ಟಡ ಹೊಂದಲು ಪ್ರಸ್ತಾವನೆ ಸಲ್ಲಿಸಿದ್ದು ಅನುದಾನ ಬಂದ ಬಳಿಕ ಕಾಮಗಾರಿ ಪ್ರಾರಂಭಿಸಲಾಗುವುದು.
ಈ ಸಾಲಿನಲ್ಲಿ ಉತ್ತಮ ಲಾಭಾಂಶ ಬಂದಿದ್ದು, ಇದೇ ಮಾದರಿಯಲ್ಲಿ ಸದಸ್ಯರ ಸಲಹೆ ಸಹಕಾರದೊಂದಿಗೆ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಬಳಸಿ ಪೂರಕವಾದ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದ ಅವರು, ಸಂಘದ ವಾರ್ಷಿಕ ವರದಿಯನ್ನು ವಾಚಿಸಿದರು.
ಈ ಸಂದರ್ಭ ಸಭೆಯಲ್ಲಿ ಉಪಾಧ್ಯಕ್ಷ. ಬಿ.ಎನ್.ಮನು, ನಿರ್ದೇಶಕರಾದ ಆರ್. ಕೆ.ಚಂದ್ರು, ಸಿ. ಕೆ.ಉದಯಕುಮಾರ್, ಬಿ.ಎಂ.ಯಶೋಧರ, ಬಿ.ಆರ್.ಸುರೇಶ್, ಅಣ್ಣಯ್ಯ, ಎಸ್. ಆರ್. ಕಮಲ, ಕಾವೇರಿ, ಕರ್ನಾಟಕ ರಾಜ್ಯ ಲ್ಯಾಂಪ್ಸ್ ಮಹಾಮಂಡಳದ ಪ್ರತಿನಿಧಿ ಮಿಟ್ಟು ಚಂಗಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಬಿ.ಜಿ.ಹನಿಕುಮಾರ್, ಲೆಕ್ಕಣಿಗ ಪಿ.ಎ. ಯಶವಂತ ಸೇರಿದಂತೆ ಸದಸ್ಯರು ಹಾಜರಿದ್ದರು.
Back to top button
error: Content is protected !!