ಕಾರ್ಯಕ್ರಮ

ಕನ್ನಡ ಸಾಹಿತ್ಯದಲ್ಲಿ ಕನ್ನಡಿಗರ ವಿಶಿಷ್ಟ ಗುರುತುಗಳು ” ವಿಚಾರ ಸಂಕಿರಣ

ಕುಶಾಲನಗರ, ಅ 12: ಎಲ್ಲವೂ ಆಧುನೀಕರಣಗೊಂಡ ಈ ಹೊತ್ತಿನಲ್ಲಿ ಇಂದಿನ ಮಕ್ಕಳಿಗೆ ಅಂಕ ಆಧಾರಿತ ಶಿಕ್ಷಣಕ್ಕಿಂತ ಮೌಲ್ಯಗಳನ್ನು ತುಂಬುವ ಶಿಕ್ಷಣ ಅತೀ ಅಗತ್ಯ ಎಂದು ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ನಿಪ್ಟಿ ರುದ್ರಪ್ಪ ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪಟ್ಟಣದ ದೇವರಾಜ ಅರಸು ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಹಮ್ಮಿಕೊಂಡಿದ್ದ ” ಕನ್ನಡ ಸಾಹಿತ್ಯದಲ್ಲಿ ಕನ್ನಡಿಗರ ವಿಶಿಷ್ಟ ಗುರುತುಗಳು ” ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿದ್ಯಾರ್ಥಿಗಳು ಸಾಹಿತ್ಯವನ್ನು ಕೇವಲ ಪರೀಕ್ಷೆಗಾಗಿ ಓದಬೇಡಿ. ತಮ್ಮ ಜೀವನವನ್ನು ಸುಮಧುರಗೊಳಿಸಲು ಎಂಜಾಯ್ ಮಾಡುತ್ತಾ ಓದಬೇಕು. ಕೇವಲ ಪಠ್ಯ ಪುಸ್ತಕಗಳಿಗೆ ಸೀಮಿತರಾಗದೇ ಕಥೆ, ಕವನ, ಹರಿಕಥೆ, ಕಾದಂಬರಿಗಳನ್ನು ಓದಿ ಗ್ರಹಿಸಿಕೊಳ್ಳುವ ಮೂಲಕ ಲೋಕಜ್ಞಾನಿಗಳಾಗಲು ಕರೆ ಕೊಟ್ಟರು.
ಮೂರ್ನಾಲ್ಕು ದಶಕಗಳ ಹಿಂದೆ ಇದ್ದ ಪೂರ್ವಜರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು.
ಅಂದರೆ ಅವರ ದೈನಂದಿನ ಬದುಕಿನಲ್ಲಿ ಕನ್ನಡ ಸಾಹಿತ್ಯದ ಸೊಗಡಿನೊಂದಿಗೆ ಜೀವನ ಕಟ್ಟಿದ್ದರಿಂದ ಅಂದಿನ ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳಿದ್ದವು.
ಅಂದಿನ ಕವಿ ಹಾಗು ಸಾಹಿತಿಗಳು ಜನರ ಸುಖ ಸಂತೋಷಕ್ಕೆ ತಕ್ಕುದಾದ ಸಾಹಿತ್ಯ ರಚಿಸಿದ್ದರಿಂದ ಅಂದು ಅದನ್ನರಿತ ಜನರು ರಾಜ ಮಾರ್ಗದಲ್ಲಿ ತಮ್ಮ ನಡೆ ನುಡಿಗಳು ಮೇಳೈಸಿದ್ದವು.
ನಾಡಿನ ತಾಯಂದಿರೆಲ್ಲಾ ಅಂದು ತಮ್ಮ ಮಕ್ಕಳಿಗೆ ಎದೆ ಹಾಲು ಕುಡಿಸುವಾಗ ಜೋಗುಳ ಹಾಡುತ್ತಾ ಬೆಳೆಸಿದರು. ಕೆರೆಯನ್ನು ಕಟ್ಟಿಸು, ಗಿಡ ಮರಗಳನ್ನು ನೆಟ್ಟು ಬೆಳೆಸು, ಹಸಿದವರಿಗೆ ಅನ್ನವ ನೀಡು ಎಂದು ಮಕ್ಕಳಿಗೆ ಜೀವನ ನೀತಿಯನ್ನು ಕಲಿಸಿಕೊಡುತ್ತಿದ್ದರು. ಆದ್ದರಿಂದಲೇ ಅಂದು ರಾಜ್ಯ ಹಾಗು ದೇಶಗಳು ಸುಭೀಕ್ಷವಾಗಿದ್ದವು.
ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಮೊದಲಾದ ವೀರ ವನಿತೆಯರು ಸೇರಿದಂತೆ ಅಂದು ನಾಡನ್ನಾಳಿದ ರಾಜರಲ್ಲಿ ಪರೋಪಕಾರಿ ಗುಣಗಳಿದ್ದವು. ಅಂದು ಎಲ್ಲಾ ತಾಯಂದಿರು ಮಕ್ಕಳಿಗೆ ಮೌಲ್ಯಗಳನ್ನು ಕಲಿಸುತ್ತಿದ್ದರು. ಆದರೆ ಇಂದು ಸಮಾಜದಲ್ಲಿ ಮೌಲ್ಯಗಳ ಅಧಃಪತನವಾಗುತ್ತಿದೆ ಎಂದು ಡಾ.ರುದ್ರಪ್ಪ ವಿಷಾದಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಶಾಲಾ ಕಾಲೇಜುಗಳ ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಅಭಿರುಚಿಯನ್ನು ಮೂಡಿಸುವ ಮೂಲಕ ಎಲ್ಲೆಡೆ ಸಾಹಿತ್ಯ ಪೂರಕ ಚಟುವಟಿಕೆಗಳನ್ನು ನಡೆಸುವ ಉದ್ದೇಶ ಪರಿಷತ್ತಿನದಾಗಿದೆ ಎಂದರು.
ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮುನೀರ್ ಅಹಮದ್ ಮಾತನಾಡಿದರು.
ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಸೆಬಾಸ್ಟಿನ್,
ಕಸಾಪ ಪದಾಧಿಕಾರಿಗಳಾದ ಟಿ.ಜಿ.ಪ್ರೇಮಕುಮಾರ್, ಗೋಣಿಕೊಪ್ಪದ ಮಂಜುನಾಥ, ಹೆಬ್ಬಾಲೆ ಉಮೇಶ, ಎಸ್.ನಾಗರಾಜು, ಟಿ.ವಿ.ಶೈಲಾ, ಹೇಮಲತಾ, ವಸತಿ ನಿಲಯದ ಮೇಲ್ವಿಚಾರಕಿ ಶಕುಂತಲಾ, ಏಳನೇ ಹೊಸಕೋಟೆ ಗ್ರಾಪಂ ಮಾಜಿ ಅಧ್ಯಕ್ಷೆ ಗೀತಾ ಧರ್ಮಪ್ಪ ಇದ್ದರು.
ಇದೇ ಸಂದರ್ಭ ಬಳ್ಳಾರಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ರುದ್ರಪ್ಪ ಅವರನ್ನು ಕೊಡಗು ಜಿಲ್ಲಾ ಕಸಾಪ ವತಿಯಿಂದ ಗೌರವಿಸಲಾಯಿತು.
ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಕೆ.ಟಿ.ಸ್ನೇಹಾ ನಿರೂಪಿಸಿದರು.
ಬಿ.ವೈ.ರಚನಾ ಸ್ಬಾಗತಿಸಿದರು. ಎನ್.ಪೂಜಾ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!