ಸಭೆ

ಯುಜಿಡಿ ದರಕ್ಕೆ ಜನರ ವಿರೋಧ: ಹೊಸ ಸಂಪರ್ಕಕ್ಕೆ‌ ಮಾತ್ರ ಪಾವತಿಗೆ ಸಮ್ಮತಿ, ವಾರ್ಷಿಕ ನಿರ್ವಹಣಾ ವೆಚ್ಚಕ್ಕೆ ವಿರೋಧ

ಕುಶಾಲನಗರ ಜು 8: ಕುಶಾಲನಗರದ ಪುರಸಭೆ ವತಿಯಿಂದ ಯುಜಿಡಿ ಸಂಪರ್ಕಕ್ಕೆ ದರ ನಿಗದಿ ಮಾಡಿರುವುದು ಅವೈಜ್ಞಾನಿಕವಾಗಿದೆ. ತಕ್ಷಣ ಅದನ್ನ ವಾಪಸ್ ಪಡೆಯಲು ಕುಶಾಲನಗರ ನಿವಾಸಿಗಳ ಒತ್ತಾಯ.

ಕುಶಾಲನಗರದ ಕನ್ನಿಕಾ ಕನ್ವೇಷನ್ ಸೆಂಟರ್ ನಲ್ಲಿ ಬುಧವಾರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ನ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೇಲಿನ ತೀರ್ಮಾನವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ.
ಸರ್ಕಾರದಿಂದ ಯುಜಿಡಿ ಕಾಮಗಾರಿಗಾಗಿ ಕೋಟ್ಯಾಂತರ ರೂಪಾಯಿ ಹಣ ಬಂದಿದೆ. ಸರ್ಕಾರಕ್ಕೆ ಜನರು ಈಗಾಗಲೇ ಹಲವು ರೀತಿಯ ತೆರಿಗೆ ಕಟ್ಟಿ ಸಾಕಾಗಿರುವ ಈ ಸಂದರ್ಭದಲ್ಲಿ ಹೊಸ ತರಹದ ತೆರಿಗೆ ಕಟ್ಟಬೇಕೆನ್ನುವುದು ಗಾಯದ ಮೇಲೆ ಬರೆ ಎಳೆದಂತೆ ಎಂಬಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಈಗ ನಡೆದಿರುವ ಯುಜಿಡಿ ಕಾಮಗಾರಿ ಕಳಪೆಯಾಗಿದೆ. ಹಲವು ಬಡಾವಣೆಗಳಲ್ಲಿ ನಿರ್ಮಾಣವಾಗಿರುವ ಮ್ಯಾನ್ ಹೋಲ್ ಗಳು ಈಗಾಗಲೇ ಹಾಳಾಗಿದೆ. ಅದಕ್ಕೆ ಅಳವಡಿಸಿರುವ ಪೈಪ್ ಕೂಡ ಚಿಕ್ಕದಾಗಿದೆ, ಅದರಲ್ಲಿ ಸರಾಗವಾಗಿ ನೀರು ಹರಿಯಲು ಸಾಧ್ಯವಿಲ್ಲವೆಂದು ಹಲವರು ಆತಂಕ ವ್ಯಕ್ತಪಡಿಸಿದರು.
ಚೇಂಬರ್ ಆಫ್ ಕಾಮರ್ಸ್ ನ ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಅವರು ಮಾತನಾಡಿ, ಕುಶಾಲನಗರ ಪುರಸಭೆಯಲ್ಲಿ ಈಗಿರುವ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಜನರ ಆಶೋತ್ತರಗಳಿಗೆ ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಊರಿನ ಮೇಲಿನ ಕಾಳಜಿ, ಜನರಪರವಾದ ನಮ್ಮ ಬೇಡಿಕೆಯನ್ನು ಖಂಡಿತ ಈಡೇರಿಸುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿ, ಅದು ಸಾಧ್ಯವಾಗದೇ ಇದ್ದಲ್ಲಿ ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಬಳಿ ನಿಯೋಗ ತೆರಳಿ ನಮ್ಮ ಬೇಡಿಕೆಯನ್ನು ಸಲ್ಲಿಸೋಣ ಎಂದು ಸಲಹೆ ನೀಡಿದರು.
ಕುಶಾಲನಗರ ಪುರಸಭೆಯ ಆಡಳಿತಾಧಿಕಾರಿಯೊಂದಿಗೆ ಚರ್ಚಿಸಿ, ಜನರ ಆಶಯದಂತೆ ಯುಜಿಡಿ ಸಂಪರ್ಕಕ್ಕೆ ಮಾತ್ರ ಮನೆ, ವಾಣಿಜ್ಯ ಕಟ್ಟಡಗಳಿಗೆ ವಿವಿಧ ರೀತಿಯಲ್ಲಿ ಅಂದರೆ 500 ರೂಪಾಯಿಯಿಂದ 2000 ರೂಪಾಯಿ ತನಕ ಹಣ ನೀಡುತ್ತೇವೆ. ಪ್ರತಿ ವರ್ಷ ನಿರ್ವಹಣಾ ವೆಚ್ಚವನ್ನು ಕಟ್ಟಲು ವಿರೋಧವಿದೆ ಎನ್ನುವುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿ ಕೊಡುತ್ತೇವೆ ಎಂದು ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ನ ಅಧ್ಯಕ್ಷ ಕೆ.ಎಸ್.ನಾಗೇಶ್ ತಿಳಿಸಿದರು.
ಸಭೆಯ ತೀರ್ಮಾನದಂತೆ ಆಡಳಿತಾಧಿಕಾರಿ ನಿತಿನ್ ಚೆಕ್ಕಿ ಅವರಿಗೆ ಲಿಖಿತ ರೂಪದಲ್ಲಿ ನಮ್ಮ ಮನವಿಯನ್ನು ಸಲ್ಲಿಸಿ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರಿಗೂ ಮಾಹಿತಿ ನೀಡುತ್ತೇವೆ ಎಂದು ನಾಗೇಶ್ ತಿಳಿಸಿದರು.
ಚೇಂಬರ್ ಆಫ್ ಕಾಮರ್ಸ್ ನ ಕಾರ್ಯದರ್ಶಿ ಚಿತ್ರ ರಮೇಶ್ ಸ್ವಾಗತಿಸಿದರು.
ಖಜಾಂಚಿ ಎನ್.ವಿ.ಬಾಬು, ಸದಸ್ಯರಾದ ಬಶೀರ್, ನಾಸಿರ್, ಅರ್ಜುನ್ ಗುಪ್ತ, ಪ್ರಶಾಂತ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!