ಕುಶಾಲನಗರ, ಏ 18 : ಇಲ್ಲಿನ ಶ್ರೀ ಯೋಗಿ ನಾರೇಯಣ ಬಲಿಜ ಸಂಘದ ವತಿಯಿಂದ ಕುಲಗುರುವಾದ ಕೈವಾರ ತಾತಯ್ಯ ಅವರ 300 ನೇ ಜಯಂತಿ ಮಹೋತ್ಸವ ಶನಿವಾರ ನಡೆಯಿತು.
ಬಲಿಜ ಸಮಾಜದವರು ಹೆಚ್ಚಾಗಿ ನೆಲೆಸಿರುವ ಬೈಲಕೊಪ್ಪ ಹಾಗೂ ಕುಶಾಲನಗರದಲ್ಲಿ ಬೆಳ್ಳಿ ರಥದಲ್ಲಿ ಕೈವಾರ ತಾತಯ್ಯ ಅವರ ಭಾವಚಿತ್ರ ಪ್ರತಿಷ್ಠಾಪಿಸಿ ಮುಖ್ಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಲಾಯಿತು.
ಬಳಿಕ ಕುಶಾಲನಗರದ ಗಣಪತಿ ದೇವಾಲಯ ದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭ ಮಾಲ್ದಾರೆಯ ಮುತ್ತಪ್ಪ ಚಂಡೇ ಮೇಳ ನೋಡುಗರ ಗಮನ ಸೆಳೆಯಿತು.
ಬಳಿಕ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮ ವನ್ನು ಅಖಿಲ ಭಾರತ ಬಲಿಜ ಸಂಘದ ಅಧ್ಯಕ್ಷ ರಾದ ಹೈದರಾಬಾದಿನ ಪಟೇಲ್ ಕುಂಡದೇವಯ್ಯ ಹಾಗೂ ಕರ್ನಾಟಕ ರಾಜ್ಯ ಬಲಿಜ ಸಂಘದ ಅಧ್ಯಕ್ಷ ಎನ್.ಪಿ.ಮುನಿಕೃಷ್ಣಪ್ಪ
ಉದ್ಘಾಟಿಸಿ ಮಾತನಾಡಿದರು.
ಕೈವಾರ ತಾತಯ್ಯ ಅವರ ಕುರಿತು ಪ್ರವಚನ ಮಾಡಿದ ಕೈವಾರ ಕ್ಷೇತ್ರದ ಮಂಕಾಲ ಶ್ರೀ ಹರಿಶರ್ಮ ಅವರು, ಪರಹಿತಕ್ಕಾಗಿ ಜೀವಿಸಿದ ಬುದ್ದ, ಬಸವ, ಕೈವಾರ ತಾತಯ್ಯ, ಮಹಾವೀರ ಮೊದಲಾದ ಮಹಾತ್ಮರನ್ನು ಪೀಳಿಗೆಯಿಂದ ಪೀಳಿಗೆಗೆ ಜನಸಮುದಾಯ ಅರಿಯಬೇಕು.
ಅವರು ಸಮಾಜಕ್ಕೆ ನೀಡಿದ ಸಂದೇಶಗಳನ್ನು ತಿಳಿಯಬೇಕು.
ಯಾರೊಬ್ಬರಿಗೂ ಕೆಡುಕು ನೀಡದ ಅಹಿಂಸೆಯ ಜೀವನ ಕಟ್ಟಬೇಕು ಎಂಬುದು ಪ್ರಾತಸ್ಮರಣೀಯರ ಆಶಯವಾಗಿತ್ತು ಎಂದು ಶ್ರೀಹರಿಶರ್ಮಾ ಹೇಳಿದರು.
ಕುಶಾಲನಗರ ತಾಲ್ಲೂಕು ಬಲಿಜ ಸಮಾಜದ ಅಧ್ಯಕ್ಷ ಆರ್.ಸೋಮಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಲಿಜ ಸಮಾಜದ ಮಂದಿ ಒಗ್ಗೂಡಿ ಸರ್ಕಾರದ ಸವಲತ್ತುಗಳನ್ನು ಪಡೆಯಬೇಕು.
ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡುವ ಮೂಲಕ ನಾಳೆಯ ಸತ್ಪ್ರಜೆಗಳಾಗಿ ಅವರನ್ನು ರೂಪಿಸಬೇಕು ಎಂದರು.
ಬಲಿಜ ಸಂಘದ ಗೌರವ ಅಧ್ಯಕ್ಷ ಆರ್.ಬಾಬಣ್ಣ ಮಾತನಾಡಿ, ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿನಲ್ಲಿ ಐದುನೂರಕ್ಕೂ ಹೆಚ್ಚಿನ ಬಲಿಜ ಕುಟುಂಬಗಳಿವೆ.
ಕುಶಾಲನಗರದಲ್ಲಿ ಪ್ರತ್ಯೇಕ ಜಾಗವನ್ನು ಖರೀದಿಸಿ ಕೈವಾರ ತಾತಯ್ಯ ಅವರ ಭವನ ನಿರ್ಮಿಸುವ ಗುರಿ ಇದೆ. ಈಗಾಗಲೇ ಮೂವರು ಹಿತೈಷಿಗಳು ತಾತಯ್ಯನ ಭವನಕ್ಕೆ ಧನಸಹಾಯ ನೀಡುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಕನಸು ಕೈಗೂಡಲಿದೆ ಎಂದರು. ಕೊಡಗು ಜಿಲ್ಲಾ ಬಲಿಜ ಸಮಾಜದ ಅಧ್ಯಕ್ಷ ಗಣೇಶ ನಾಯ್ಡು, ಕುಶಾಲನಗರದ ಅಮರನಾರಾಯಣ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ.ಸತೀಶ್,
ಶಿವಮೊಗ್ಗ ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ಶುಭಾ ಮರವಂತೆ ಇದ್ದರು.
ಬಲಿಜ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬಲಿಜ ಸಮಾಜದ ಪದಾಧಿಕಾರಿಗಳಾದ ಸಿ.ಎನ್.ಮದನ್, ಟಿ.ಆರ್.ಜಗದೀಶ್, ಟಿ.ಎಸ್.ನಿರಂಜನ್, ಟಿ.ಎನ್.ಜಯರಾಮು, ಸಿ.ಜಗದೀಶ್, ಸಂಧ್ಯಾಗಣೇಶ್, ಸವಿತಾ ದಯಾನಂದ, ಮಂಜುಳಾ, ಬಾಲಸುಬ್ರಹ್ಮಣ್ಯಂ, ಉಮೇಶ್, ಕಿರಣ್, ಕುಶ, ನೂತನ್, ಟಿ.ಡಿ.ದಯಾನಂದ, ಎಂ.ಆರ್.ಗಣೇಶ್ ಇದ್ದರು.
ಕಾರ್ಯಕ್ರಮದಲ್ಲಿ ನರೇಂದ್ರ ಪ್ರಾಸ್ತಾವಿಕ ನುಡಿಗಳಾಡಿದರು.
ಬಾಳೆಲೆ ಪ್ರತಿಭಾ ವಿದ್ಯಾಸಂಸ್ಥೆ ಪ್ರಾಂಶುಪಾಲೆ ಗೀತಾ ನಾಯ್ಡು ಸ್ವಾಗತಿಸಿದರು.
ಯಶ್ವಿನ್ ಬಾಲಕೃಷ್ಣ ನಾಯ್ಡು ಪ್ರಾರ್ಥಿಸಿದರು.
Back to top button
error: Content is protected !!