ಅವ್ಯವಸ್ಥೆ

ಚರಂಡಿ‌ ಅವ್ಯವಸ್ಥೆ ವಿರುದ್ದ ಕರವೇ ಆಕ್ರೋಶ: ಪುರಸಭೆ, ಒಳಚರಂಡಿ ಮಂಡಳಿಗೆ ಮುತ್ತಿಗೆ ಎಚ್ಚರಿಕೆ

ಕುಶಾಲನಗರ, ಜ 18: ಕುಶಾಲನಗರ ಪುರಸಭಾ ವ್ಯಾಪ್ತಿಯ ಯೋಗಾನಂದ ಬಡಾವಣೆಯಲ್ಲಿನ ಶ್ರೀ ಮುತ್ತಪ್ಪ ದೇವಾಲಯ ಬಳಿ ಚರಂಡಿ ಅವ್ಯವಸ್ಥೆ ವಿರುದ್ಸಯ ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. ತ್ಯಾಜ್ಯ ನೀರು‌ ಮಡುಗಟ್ಟಿ ನಿಂತು ಚರಂಡಿ ಗಬ್ಬು‌ ನಾರುತ್ತಿದ್ದರೂ ಕೂಡ ಗಮನ ಹರಿಸದೆ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕರವೇ ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇವಾಲಯಕ್ಕೆ ಪ್ರತಿನಿತ್ಯ ಭಕ್ತರು ಆಗಮಿಸುತ್ತಾರೆ. ಸುತ್ತ ಮುತ್ತಲಿನ ಮನೆಗಳ ನಿವಾಸಿಗಳಿಗೂ ಈ ಚರಂಡಿ ಅವ್ಯವಸ್ಥೆಯಿಂದ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ತೆರೆದ ಸ್ಥಿತಿಯಲ್ಲಿರುವ ಚರಂಡಿಗೆ ಆಯತಪ್ಪಿ‌ ಬಿದ್ದರೆ ಜೀವ ಹಾನಿಯಾಗುವ ಸಂಭವವಿದೆ. ವರ್ಷಗಳಿಂದಲೂ ಇದೇ ಪರಿಸ್ಥಿತಿಯಲ್ಲಿರುವ ಚರಂಡಿ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿ ವರ್ಗ ವಿಫಲರಾಗಿದ್ದಾರೆ ಎಂದು ಆರೋಪಿಸಿದ ಅವರು, ಕೂಡಲೆ ಸೂಕ್ತ ಕ್ರಮವಹಿಸದಿದ್ದಲ್ಲಿ ಪುರಸಭೆ ಹಾಗೂ ಒಳಚರಂಡಿ ಮಂಡಳಿ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ನಗರ ಘಟಕ ಅಧ್ಯಕ್ಷ ಎಂ.ಎಸ್.ಮಣಿಕಂಠ ಮಾತನಾಡಿ, ದೇವಾಲಯ ಪರಿಸರ ನೈರ್ಮಲ್ಯದಿಂದ ಕೂಡಿರಬೇಕಿದೆ. ಆದರೆ ಇಲ್ಲಿನ ಪರಿಸ್ಥಿತಿ ಶೋಚನೀಯವಾಗಿದೆ. ಒಳಚರಂಡಿ ಯೋಜನೆಯಿಂದಲೂ ಯಾವುದೇ ಅನುಕೂಲ ಉಂಟಾಗಿಲ್ಲ. ನದಿ ತಟದಲ್ಲೇ ಇಂತಹ ದುಸ್ಥಿತಿ ಕಂಡು ಕಾಣದಂತೆ ಇರುವ ಅಧಿಕಾರಿಗಳು ಕೂಡಲೆ ಎಚ್ಚೆತ್ತುಕೊಂಡು ಈ‌ ಸಮಸ್ಯೆ ಬಗೆಹರಿಸಬೇಕಿದೆ ಎಂದು ಆಗ್ರಹಿಸಿದರು.
ಈ ಸಂದರ್ಭ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!