ಕುಶಾಲನಗರ, ಡಿ 02: 2023-24ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದ್ದ ನಂಜರಾಯಪಟ್ಟಣ ಗ್ರಾಪಂಗೆ ಸೋಮವಾರ ಪ್ರಶಸ್ತಿ ಪ್ರದಾನ ನಡೆಯಿತು. ಪ್ರಶಸ್ತಿ ಸ್ವೀಕರಿಸಿ ಬೆಂಗಳೂರಿನಿಂದ ಆಗಮಿಸಿದ ಅಧ್ಯಕ್ಷರಿಗೆ ಸೇರಿದಂತೆ ಆಡಳಿತ ಮಂಡಳಿ ಸದಸ್ಯರಿಗೆ ಗ್ರಾಮಸ್ಥರು ಮೆರವಣಿಗೆ ಮೂಲಕ ಅಭಿನಂದನೆ ಸಮರ್ಪಿಸಿ ಸಂಭ್ರಮ ವ್ಯಕ್ತಪಡಿಸಿದರು.
ದುಬಾರೆ ಜಂಕ್ಷನ್ ಬಳಿಯಿಂದ ಗ್ರಾಪಂ ಜನಪ್ರತಿನಿಧಿಗಳು, ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಜನಪ್ರತಿನಿಧಿಗಳನ್ನು ಮೆರವಣಿಗೆಯಲ್ಲಿ ಗ್ರಾಪಂ ಕಛೇರಿವರೆಗೆ ಕರೆತಂದರು. ಬಳಿಕ ಗ್ರಾಪಂ ಆವರಣದಲ್ಲಿ ಆರತಿ ಬೆಳಗಿ ಮಾಲಾರ್ಪಣೆ ಮಾಡಿ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭ ಮಾತನಾಡಿದ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಆಡಳಿತ ಮಂಡಳಿಯ ಭ್ರಷ್ಟಾಚಾರ ರಹಿತ ಆಡಳಿತ, ಪಿಡಿಒ, ಸಿಬ್ಬಂದಿಗಳ ಪ್ರಾಮಾಣಿಕ ಸೇವೆಗೆ ಸಂದ ಗೌರವ ಇದಾಗಿದೆ. ನಮ್ಮ ಆಡಳಿತ ಅವಧಿಯಲ್ಲಿ ಎಲ್ಲಾ ವರ್ಗ, ಜಾತಿ, ಧರ್ಮದವರಿಗೆ ಸಮಾನವಾಗಿ ಸರಕಾರದ ಯೋಜನೆ, ಸೌಲಭ್ಯಗಳನ್ನು ಒದಗಿಸಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು ಎಲ್ಲರ ಆಶೀರ್ವಾದದಿಂದ ಇಂದು ನಮಗೆ ಈ ಪ್ರಶಸ್ತಿ ಒಲಿದುಬಂದಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ನಮಗೆ ದೊರೆಯುವಂತಹ ಅಭಿಲಾಷೆಯೊಂದಿಗೆ ಆಡಳಿತ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಸಮೀರಾ, ಜಾಜಿ ತಮ್ಮಯ್ಯ, ಗಿರಿಜಮ್ಮ, ಗೆಳೆಯರ ಬಳಗದ ಅಡ್ನಳ್ಳಿ ಸತೀಶ್, ಪ್ರಸನ್ನ ಕಲ್ಲೇಗೌಡನ ಸುರೇಶ್, ರವಿ ಬೆಳ್ಯಪ್ಪ, ಅಯ್ಯಂಡ ಬಾಲಕೃಷ್ಣ, ರಾಮು, ಯುವಕ ಸಂಘದ ಅಧ್ಯಕ್ಷ ಮ್ಯಾಥ್ಯು, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಂ.ಎಂ.ಹಾರಿಸ್, ನಂಜರಾಯಪಟ್ಟಣ ಜಿಎಂಪಿ ಶಾಲಾಭಿವೃದ್ದಿಸಮಿತಿ ಅಧ್ಯಕ್ಷೆ ಶೃತಿ, ಮುಖ್ಯ ಶಿಕ್ಷಕಿ ಸರಳ ರಾಣಿ, ಸಹ ಶಿಕ್ಷಕರಾದ ನಾಗಮ್ಮ, ಮೀನಾಕ್ಷಿ, ರೇಖಾ, ನಂಜರಾಯಪಟ್ಟಣ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರಸಾದ್, ಹಿಂದಿ ಶಿಕ್ಷಕ ಸಿದ್ದಾರೂಢ ತಳವಾರ್, ಸಂಜೀವಿನಿ ಒಕ್ಕೂಟದ ಸರಿತಾ, ವಿದ್ಯಾ, ಉದ್ಯಮಿ ರತೀಶ್, ರಾಫ್ಟ್ ಸಿಬ್ಬಂದಿ ಯೋಗೇಶ್, ಕಿಶೋರ್, ರಕ್ಷಿತ್ ಮತ್ತಿತರರು ಇದ್ದರು.
Back to top button
error: Content is protected !!