ಧಾರ್ಮಿಕ

ಕುಶಾಲನಗರದಲ್ಲಿ ಹುಣ್ಣಿಮೆ ಅಂಗವಾಗಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಡೆದ 179 ನೆಯ ಮಹಾ ಆರತಿ ಕಾರ್ಯಕ್ರಮ

ಕುಶಾಲನಗರ,ನ 07:ಜೀವನದಿ ಕಾವೇರಿ ಸೇರಿದಂತೆ ರಾಜ್ಯದ ಬಹುತೇಕ ನದಿಗಳು ನೇರವಾಗಿ ಕಲುಷಿತಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಳಗದ ಜಿಲ್ಲಾಧ್ಯಕ್ಷರಾದ ದೀಪಕ್ ಕನ್ನಡಿಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಕುಶಾಲನಗರದಲ್ಲಿ ಹುಣ್ಣಿಮೆ ಅಂಗವಾಗಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಡೆದ 179 ನೆಯ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಲವು ಕಾರಣಗಳಿಂದ ನದಿ ಕಲುಷಿತ ಗೊಳ್ಳುವ ಮೂಲಕ ಅದನ್ನು ನೇರವಾಗಿ ಬಳಕೆ ಮಾಡುವ ಮಾನವನಿಗೆ ಹಾನಿ ಉಂಟಾಗುವುದರ ನಡುವೆ ಪ್ರಾಣಿ ಪಕ್ಷಿಗಳ ಸಂಕುಲದ ನಾಶಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿದೆ ಎಂದರು.
ಈ ಸಂಬಂಧ ಕಳೆದ 16 ವರ್ಷಗಳಿಂದ ನಿರಂತರವಾಗಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಜನರಿಗೆ ನದಿ ಸಂರಕ್ಷಣೆಯ ಅರಿವು ಮೂಡಿಸುತ್ತಿರುವ ಕಾವೇರಿ ನದಿ ಸ್ವಚ್ಛತಾ ಅಭಿಯಾನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಾಡಿನ ಎಲ್ಲಾ ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ರಮಗಳಿಗೆ ಕೈಜೋಡಿಸಿ ಸ್ವಚ್ಛ ಕಾವೇರಿಯ ಕನಸು ನನಸಾಗಲು ಪಣ ತೊಡಬೇಕಾಗಿದೆ ಎಂದರು.
ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ ನಡೆದ ಆರತಿ ಕಾರ್ಯಕ್ರಮ ಅಂಗವಾಗಿ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರ ನೇತೃತ್ವದಲ್ಲಿ ಅಷ್ಟೋತ್ತರ ಮತ್ತು ನದಿಗೆ ಮಹಾ ಆರತಿ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭ ಪ್ರಾಸ್ತಾವಿಕವಾಗಿ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಅಭಿಯಾನದ ರಾಜ್ಯ ಸಂಚಾಲಕ ಎಂ ಎನ್ ಚಂದ್ರಮೋಹನ್, ಸ್ವಚ್ಛ ಕಾವೇರಿಗಾಗಿ ಜನರಿಗೆ ಅರಿವು ಮೂಡಿಸುವ ಸಂಬಂಧ ಅಖಿಲ ಭಾರತ ಸನ್ಯಾಸಿಗಳ ಸಂಘದ ನೇತೃತ್ವದ ತಂಡ ತಲಕಾವೇರಿಯಿಂದ ತಮಿಳುನಾಡಿನ ಪೂಂಪ್ ಹಾರ್ ತನಕ 15ನೇ ವರ್ಷದ ಕಾವೇರಿ ನದಿ ಜಾಗೃತಿ ಯಾತ್ರೆ ಅಕ್ಟೋಬರ್ 24 ರಿಂದ ಚಾಲನೆಗೊಂಡು ನದಿ ತಟಗಳಲ್ಲಿ ಸಾಗಿ ಜನರಲ್ಲಿ ನದಿ ಸಂರಕ್ಷಣೆಯ ಜಾಗೃತಿ ಮೂಡಿಸುತ್ತಿದೆ.
ನವೆಂಬರ್ 16 ರಂದು ಕಾವೇರಿ ಬಂಗಾಳ ಕೊಲ್ಲಿ ಸಮುದ್ರ ಸಂಗಮದಲ್ಲಿ ಪವಿತ್ರ ಕಾವೇರಿ ತೀರ್ಥ ವಿಸರ್ಜಿಸುವುದರೊಂದಿಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಸ್ವಚ್ಛ ಕಾವೇರಿ ಕನಸು ನನಸಾಗಿಸಲು ನಿರಂತರ ಕಾರ್ಯಕ್ರಮ ಹೋರಾಟ ಮುಂದುವರೆಯಲಿದೆ ಎಂದರು.
ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಸಂಧ್ಯಾ ಗಣೇಶ್, ಯುವ ಘಟಕದ ಜಿಲ್ಲಾಧ್ಯಕ್ಷ ವಸಂತ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಶೃತಿ, ಯುವ ಘಟಕದ ಜಿಲ್ಲಾ ಪ್ರಮುಖರಾದ ಪರಮೇಶ್, ನಗರಾಧ್ಯಕ್ಷರಾದ ರೇಣುಕಾ, ಯುವ ಘಟಕದ ಉಪಾಧ್ಯಕ್ಷ ಪುನೀತ್, ತುಳಸಿ, ದೀಪು,
ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಪ್ರಮುಖರಾದ ಮಂಡೆಪಂಡ ಬೋಸ್ ಮೊಣ್ಣಪ್ಪ, ಅಣ್ಣಯ್ಯ, ಧರಣಿ, ಫಯಾಜ್, ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಸುಬೇದಾರ್ ಮೇಜರ್ ಎಸ್ ಆರ್ ಮಾದಪ್ಪ ಉಪಾಧ್ಯಕ್ಷರಾದ ಸುಬೇದಾರ್ ಎಳ್ತಂಡ ರಂಜಿತ್, ಕರುಂಬಯ್ಯ, ಮತ್ತು ಬಳಗದ ಸದಸ್ಯರು ಇದ್ದರು.
ಇದೇ ಸಂದರ್ಭ ಭಾಗಮಂಡಲದಿಂದ ರಾಮನಾಥಪುರ ತನಕ ವಿವಿದೆಡೆ ನದಿ ತಟಗಳಲ್ಲಿ ನಮಾಮಿ ಕಾವೇರಿ ಬಳಗದಿಂದ ಏಕಕಾಲದಲ್ಲಿ ಜೀವನದಿಗೆ ಮಹಾ ಆರತಿ ಕಾರ್ಯಕ್ರಮಗಳು ನಡೆದವು.

Related Articles

Leave a Reply

Your email address will not be published. Required fields are marked *

Back to top button
error: Content is protected !!