ಪ್ರತಿಭಟನೆ

ಜನನ ಮರಣ ನೋಂದಣಿ‌ ಕಾಯ್ದೆ ತಿದ್ದುಪಡಿಗೆ ವಕೀಲರ ಸಂಘ ಆಕ್ಷೇಪ

ಕುಶಾಲನಗರ, ಜು 29: ಕರ್ನಾಟಕ ಜನನ ಮತ್ತು ಮರಣ ನೊಂದಣಿ ಕಾಯ್ದೆ ನಿಯಮಾವಳಿ ತಿದ್ದುಪಡಿ ಮಾಡಿರುವ ಬಗ್ಗೆ ಕುಶಾಲನಗರ ತಾಲೂಕು ವಕೀಲರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.‌ ಈ ಸಂಬಂಧ ಸಂಘದ ಸದಸ್ಯರು ನ್ಯಾಯಾಲಯ ಆವರಣದಿಂದ ಮೆರವಣಿಗೆಯಲ್ಲಿ ತಹಶೀಲ್ದಾರ್ ಕಛೇರಿಗೆ ತೆರಳಿ, ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಕುಶಾಲನಗರ ವಕೀಲರ ಸಂಘದ ಅಧ್ಯಕ್ಷರಾದ ಆರ್.ಕೆ. ನಾಗೇಂದ್ರಬಾಬು ಅವರ ನೇತೃತ್ವದಲ್ಲಿ ತೆರಳಿದ ಸದಸ್ಯರು ಪಟ್ಟಣದಲ್ಲಿ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಸಾಗಿ ತಿದ್ದುಪಡಿ ತಡೆಹಿಡಿಯಲು ಕೋರಿ ಸರಕಾರಕ್ಕೆ ತಹಶೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿದರು.
ಸರ್ಕಾರದ ಅಧಿಸೂಚನೆಯನ್ನು ವಾಪಸು ಪಡೆದು ಯಥಾಸ್ಥಿತಿಯನ್ನು ಕಾಪಾಡಿ ಮರು ಸುತ್ತೋಲೆಯನ್ನು ಹೊರಡಿಸುವಂತೆ ಮನವಿ ಪತ್ರದಲ್ಲಿ ಕೋರಲಾಗಿದೆ.
ಕರ್ನಾಟಕ ಜನನ ಮತ್ತು ಮರಣ ನೊಂದಾವಣಿಯ ಕ್ಷೇತ್ರ ವ್ಯಾಪ್ತಿಯನ್ನು ಇದೀಗ ಉಪ ವಿಭಾಗಾಧಿಕಾರಿಗಳ ವ್ಯಾಪ್ತಿಗೆ ಒಳಪಡಿಸಿ ಸರ್ಕಾರ ಆದೇಶ ಹೊರಡಿಸಿರುವುದರಿಂದ ನಾಗರೀಕರಿಗೆ ಮತ್ತು ವಕೀಲ ಸಮುದಾಯಕ್ಕೆ ತೀವ್ರ ರೀತಿಯ ತೊಂದರೆ ಉಂಟಾಗಿದೆ ಎಂದು ಸಂಘದ ಅಧ್ಯಕ್ಷರಾದ ಆರ್.ಕೆ. ನಾಗೇಂದ್ರಬಾಬು ತಿಳಿಸಿದ್ದಾರೆ.
ಈಗಾಗಲೆ ಉಪವಿಭಾಗಾಧಿಕಾರಿಗಳು ಕಛೇರಿ‌ ಕಾರ್ಯ ಒತ್ತಡ ಹೆಚ್ಚಿದ್ದು‌ ನೂತನ ತಿದ್ದಪಡಿ ಅವರ ವ್ಯಾಪ್ತಿಗೆ ಒಳಪಡುವ ಕಾರಣ ಜನಸಾಮಾನ್ಯರಿಗೆ ವಿಳಂಭ ಎದುರಾಗಲಿದೆ ಎಂದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಕೆ.ಎಸ್. ವೆಂಕಟರಮಣ ರಾವ್, ಕಾರ್ಯದರ್ಶಿ ಹೆಚ್.ಬಿ. ಮೋಹನ್, ಖಜಾಂಚಿ ಮಂಜುನಾಥ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!