ಕುಶಾಲನಗರ, ಆ 29: ಕುಶಾಲನಗರದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು 2023-24ನೇ ನಲ್ಲಿ ರೂ.89.43 ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ರೂ. 37.44 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಎನ್.ಕುಮಾರಪ್ಪ ಹೇಳಿದರು.
ಕುಶಾಲನಗರದ ರೈತ ಸಹಕಾರ ಭವನದಲ್ಲಿ ಏರ್ಪಡಿಸಿದ್ದ 73ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘವು ಕುಶಾಲನಗರ ಹಾಗೂ ಸುಂಟಿಕೊಪ್ಪ ಹೋಬಳಿ ಕಾರ್ಯವ್ಯಾಪ್ತಿ ಹೊಂದಿದೆ.ಸಂಘದಲ್ಲಿ 1972 ಬಿಡು ಸದಸ್ಯರನ್ನು ಹೊಂದಿದ್ದು, ರೂ.18.41 ಲಕ್ಷ ಪಾಲು ಬಂಡವಾಳ ಹೊಂದಿದೆ.ಸಂಘವು ವಿವಿಧ ವಾಣಿಜ್ಯ ಸಂಕೀರ್ಣಗಳ ಮೂಲಕ ಸದಸ್ಯರಿಗೆ ಹಾಗೂ ಸದಸ್ಯರೇತರಿಗೆ ನಿಯಂತ್ರಿತ ಮತ್ತು ಅನಿಯಂತ್ರಿತ ಸಾಮಾಗ್ರಿ, ಗ್ರಾಹಕ ವಸ್ತು, ಗೊಬ್ಬರ,ಕ್ರಿಮಿನಾಶಕ,ಕೃಷಿ ಉಪಕರಣ,ಬಿತ್ತನೆ ಬೀಜ,ಕೋವಿತೋಟಾ,ಮೆಡಿಕಲ್ಸ್ ವಿಭಾಗ ಹಾಗೂ ಎರಡು ಸುಸಜ್ಜಿತ ಸಭಾಂಗಣಗಳ ಮೂಲಕ ವಾರ್ಷಿಕವಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಸಂಘವು ಪ್ರಮುಖವಾಗಿ ವ್ಯಾಪಾರಾಭಿವೃದ್ಧಿ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.ಬ್ಯಾಂಕಿಂಗ್ ವ್ಯವಹಾರದೊಂದಿಗೆ 2 ಸುಸಜ್ಜಿತ ಸಭಾಂಗಣಗಳನ್ನು ಹೊಂದಿದ್ದು, ಸದಸ್ಯರಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ರೈತ ಸಭಾಂಗಣಕ್ಕೆ ಹೊಂದಿಕೊಂಡಂತೆ 42 ಕೆವಿ ಸಾಮರ್ಥ್ಯದ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಮಹಾಸಭೆಯಲ್ಲಿ ಬಿತ್ತನೆ ಬೀಜ, ಕಳೆನಾಶಕ, ಕೀಟನಾಶಕಗಳನ್ನು ಸಾಲದ ರೂಪದಲ್ಲಿ ರೈತರಿಗೆ ವಿತರಿಸಬೇಕು, ಸಂಘದ ಮಳಿಗೆಗಳು ಬಹುತೇಕ ನಷ್ಟದಲ್ಲಿರುವ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಖಾಸಗಿ ಕಲ್ಯಾಣ ಮಂಟಪಗಳಿಂದ ಪೈಪೋಟಿ ಹೆಚ್ಚುತ್ತಿದ್ದು ಸಂಘದ ಕಲ್ಯಾಣ ಮಂಟಪಗಳ ಬಾಡಿಗೆ ದರ ಕೊಂಚ ತಗ್ಗಿಸಿ, ಹೆಚ್ಚಿನ ಪ್ರಚಾರ ಕೈಗೊಂಡಲ್ಲಿ ಜನರನ್ನು ಸೆಳೆಯಲು, ಲಾಭ ಗಳಿಸಲು ಸಾಧ್ಯ ಎಂದು ಸದಸ್ಯರು ಸಲಹೆ ನೀಡಿದರು.
ಸಹಕಾರ ಸಂಘದಿಂದ ವಿತರಿಸುತ್ತಿರುವ ರಸಗೊಬ್ಬರ ಚೀಲದಲ್ಲಿ ನಮೂದಿಸಿರುವ ಹೆಸರು ಬಿಜೆಪಿ ಹೋಲುತ್ತಿರುವ ಬಗ್ಗೆ ತೀವ್ರ ಚರ್ಚೆ, ವಾಗ್ವಾದ ನಡೆಯಿತು.
ಸಂಘದ ವತಿಯಿಂದ ಪೂರೈಸಿದ ರಸಗೊಬ್ಬರ ಚೀಲದಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನುರ್ವಾರಕ್ ಪರಿಯೋಜನಾ ಎಂಬ ಹೆಸರು ಪರೋಕ್ಷವಾಗಿ ಬಿಜೆಪಿ ಎಂದು ಬಿಂಬಿಸುತ್ತಿದ್ದ ಪಕ್ಷದ ಹೆಸರಿನಲ್ಲಿ ರೈತರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಕೆ.ಪಿ.ಚಂದ್ರಕಲಾ, ವಿ.ಪಿ.ಶಶಿಧರ್ ಮತ್ತಿತರರು ಆರೋಪಿಸಿ ಆಡಳಿತ ಮಂಡಳಿ ವಿರುದ್ದ ಹರಿಹಾಯ್ದರು. ಈ ಸಂಬಂಧ ಕೆಲಕಾಲ ತೀವ್ರ ವಾಗ್ವಾದ ನಡೆಯಿತು.
ಇದೇ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು.ತೊರೆನೂರು ಸರ್ಕಾರಿ ಪ್ರೌಢಶಾಲೆಗೆ ಎರಡು ಟ್ಯಾಬ್ ವಿತರಿಸಲಾಯಿತು.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಚ್.ಜೆ.ದೊಡ್ಡಯ್ಯ, ನಿರ್ದೇಶಕರಾದ ಕೆ.ಎಂ.ಪ್ರಸನ್ನ,ಎ.ಪಿ.ನೀಲಮ್ಮ,ಆರ್.ಕೆ.ಚಂದ್ರು, ಕೆ.ಎಸ್.ರತೀಶ್,ಎಚ್.ಟಿ.ಮೋಹನ್, ಪಿ.ಪಿ.ತಿಲಕ್ ಕುಮಾರ್, ಎಚ್.ಟಿ.ನಾಗೇಶ್, ಸಿ.ಜೆ.ಲತಾ, ಮೊಹಮ್ಮದ್ ಸಾಲೇಹ್, ಸಿ.ಎನ್.ಲೋಕೇಶ್, ಕೆಡಿಸಿಸಿ ಬ್ಯಾಂಕ್ ನ ಪ್ರತಿನಿಧಿ ಜಲಜಾ ಶೇಖರ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಜಗದೀಶ್ ಪಾಲ್ಗೊಂಡಿದ್ದರು.
Back to top button
error: Content is protected !!