ಕುಶಾಲನಗರ, ಆ 11: ಹಬ್ಬ, ಹರಿದಿನ, ವಿಶೇಷ ಸಮಾರಂಭ ಸಂದರ್ಭ ಸ್ಥಳೀಯ ಅಂಗಡಿ ಮಾಲೀಕರಿಗೆ ಆರ್ಡರ್ ನೀಡಿ ಸಹಕರಿಸುವಂತೆ ಕುಶಾಲನಗರ ತಾಲೂಕು ಕಾವೇರಿ ಶಾಮಿಯಾನ ಮಾಲೀಕರ ಸಂಘ ಮನವಿ ಮಾಡಿದೆ.
ಸಂಘದ ಕಛೇರಿಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಸದಸ್ಯರಲ್ಲದವರು ಕಾರ್ಯಕ್ರಮದ ಗುತ್ತಿಗೆ ಪಡೆದು ವಂಚಿಸುತ್ತಿರುವ ಕೆಲವು ಪ್ರಕರಣದ ಬಗ್ಗೆ ಚರ್ಚಿಸಲಾಯಿತು. ಹೊರ ರಾಜ್ಯದ ಡಿಜೆಗಳು ಇಲ್ಲಿ ರಾರಾಜಿಸುತ್ತಿರುವ ಬಗ್ಗೆ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿದ ಸಂಘದ ಅಧ್ಯಕ್ಷ ಮಣಿ, ಕಾವೇರಿ ಶಾಮಿಯಾನ ಮಾಲೀಕರ ಸಂಘ ಈಗಾಗಲೆ ನೊಂದಾಯಿಸಿಕೊಂಡಿದ್ದು 45 ಮಂದಿ ಸದಸ್ಯರನ್ನು ಹೊಂದಿದೆ. ಮುಂದೆಯೂ ಕೂಡ ಹೆಚ್ಚಿನ ಸದಸ್ಯತ್ವದ ಗುರಿ ಹೊಂದಲಾಗಿದೆ. ಇತ್ತೀಚಿಗೆ ಸದಸ್ಯರಲ್ಲದವರು ಕೂಡ ಕಾರ್ಯಕ್ರಮಗಳ ಗುತ್ತಿಗೆ ಪಡೆದುಕೊಳ್ಳುವುದು ಕಂಡುಬಂದಿದೆ. ಅಂಗಡಿ ಇಲ್ಲದೆ, ಸದಸ್ಯತ್ವ ಪಡೆಯದೆ ಇವೆಂಟ್ ಮೇನೇಜ್ಮೆಂಟ್ ಹೆಸರಿನಲ್ಲಿ ನೇರವಾಗಿ ಗುತ್ತಿಗೆ ಪಡೆಯುವ ಕೆಲಸಕ್ಕೆ ಕೆಲವರು ಮುಂದಾಗಿದ್ದಾರೆ, ಈ ಪೈಕಿ ಕೆಲವರು ಮುಂಗಡ ಹಣ ಪಡೆದು ವಂಚಿಸಿದ ಪ್ರಕರಣಗಳಿವೆ. ನಮ್ಮ ಸಂಘದ ಪದಾಧಿಕಾರಿಗಳು ಹಗಲು ರಾತ್ರಿ ಎನ್ನದೆ ಸೇವೆ ಒದಗಿಸುತ್ತಿದ್ದು, ಸಂಘ ಸಂಸ್ಥೆಗಳು, ಇಲಾಖೆಗಳು ನೇರವಾಗಿ ಅಧಿಕೃತ ಮಾಲೀಕರಿಗೆ ಗುತ್ತಿಗೆ ನೀಡಬೇಕಿದೆ. ಇದರೊಂದಿಗೆ ರಾಷ್ಟ್ರೀಯ ಹಬ್ಬ ಆಚರಣೆ ಸೇರಿದಂತೆ ಸರಕಾರಿ ಕಾರ್ಯಕ್ರಮಗಳಿಗೆ ನಮ್ಮ ಸಂಘವನ್ನು ಕೂಡ ಆಹ್ವಾನಿಸುವ ಮನಸ್ಸು ಮಾಡುವಂತೆ ಅವರು ಕೋರಿದರು. ಶೀಘ್ರದಲ್ಲೇ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಕಾರ್ಯ ನಡೆಯಲಿದೆ ಎಂದು ಅವರು ತಿಳಿಸಿದರು.
ಸಂಘದ ಗೌರವಾಧ್ಯಕ್ಷ ನಾಗೇಂದ್ರ ಮಾತನಾಡಿ, ನೆರೆಯ ಕೇರಳದಿಂದ ಡಿಜೆಗಳನ್ನು ಇಲ್ಲಿಗೆ ತರಿಸಲಾಗುತ್ತಿದೆ. ಸ್ಥಳೀಯರನ್ನು ಕಡೆಗಣಿಸದೆ ಶುಭ ಸಮಾರಂಭ ಸೇರಿದಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ನಮ್ಮನ್ನು ಸಂಪರ್ಕಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದು ಆಗ್ರಹಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಕೆ.ಎನ್.ವಿಶ್ವನಾಥ್, ರವಿ ಟಿ.ಎಂ, ಪ್ರಧಾನ ಕಾರ್ಯದರ್ಶಿ ಕೆ.ಜಿ.ಸೈಫ್, ಕಾರ್ಯದರ್ಶಿ ನವೀನ್ ಕುಮಾರ್, ಸಂಘಟನಾ ಕಾರ್ಯದರ್ಶಿ ಎಂ.ಎಸ್.ಚನ್ನರಾಜು, ಖಜಾಂಚಿ ಸಂತೋಷ್, ನಿರ್ದೇಶಕರಾದ ಎ.ಎಸ್.ಕೃಷ್ಣ, ಕಾಂತರಾಜು ಇದ್ದರು.
Back to top button
error: Content is protected !!