ಕಾರ್ಯಕ್ರಮ
ಕುಶಾಲನಗರದಲ್ಲಿ ಕನಕದಾಸ ಜಯಂತಿ: ವಿದ್ಯಾರ್ಥಿಗಳಿಗೆ ಸನ್ಮಾನ
ಕುಶಾಲನಗರ. ನ 30: ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಆಡಳಿತ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ದಾಸಶ್ರೇಷ್ಠ ಶ್ರೀ ಕನಕದಾಸ ಜಯಂತಿ ಸಮಾರಂಭ ಮುಳ್ಳುಸೋಗೆ ವಾಲ್ಮೀಕಿ ಭವನದಲ್ಲಿ ನಡೆಯಿತು.
ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಕಾರ್ಯಕ್ರಮ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಸಮಾನತೆ ಸಂದೇಶ ಸಾರಿದ ಕನಕದಾಸರ ದೈವಭಕ್ತಿಗೆ ಸಾಕ್ಷಿ ಇಂದಿಗೂ ಉಡುಪಿಯಲ್ಲಿನ ಶ್ರೀಕೃಷ್ಣ ದೇವಾಲಯದಲ್ಲಿ ಕಾಣಬಹುದು. ದಾಸರ ಸಾಮಾಜಿಕ ಚಿಂತನೆಗಳನ್ನು ಅರಿತು ಅದರಂತೆ ಜೀವನ ನಡೆಸುವ ಅಗತ್ಯವಿದೆ ಎಂದರು.
ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಡಿ.ಆರ್.ಪ್ರಭಾಕರ್ ಮಾತನಾಡಿ, ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆ ವತಿಯಿಂದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪ್ರೋತ್ಸಾಹ ನೀಡುತ್ತಾ ಬಂದಿದೆ. ನಮ್ಮ ಸಮುದಾಯ ಅತ್ಯಂತ ಕೆಳಮಟ್ಟದಲ್ಲಿ ಜೀವನ ಸಾಗಿಸುತ್ತಿದ್ದು ಸರಕಾರದ ಸೌಲಭ್ಯಗಳ ಬಗ್ಗೆ ಅರಿತುಕೊಂಡು ಸಧೃಢರಾಗಬೇಕಿದೆ. ವಿದ್ಯಾಭ್ಯಾಸದ ಮೂಲಕ ಸಮಾಜದ ಉನ್ನತ ಸ್ಥಾನ ಅಲಂಕರಿಸಬೇಕಿದೆ ಎಂದು ಕರೆ ನೀಡಿದರು.
ಉಪನ್ಯಾಸಕ ಮೆ.ನಾ.ವೆಂಕಟನಾಯಕ್ ವಿಶೇಷ ಉಪನ್ಯಾಸ ನೀಡಿದರು. ಕನಕದಾಸರ ಜೀವನ ಚರಿತ್ರೆ ಬಗ್ಗೆ ಮಾಹಿತಿ ಒದಗಿಸಿದರು.
ಸೋಮವಾರಪೇಟೆ ತಾಲೂಕು ತಹಸೀಲ್ದಾರ್ ನರಗುಂದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆ ವತಿಯಿಂದ
ಶೌರ್ಯ ಪ್ರಶಸ್ತಿ ವಿಜೇತ ಬಾಲಕ ದೀಕ್ಷಿತ್ ಸೇರಿದಂತೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳು, ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಉದಯಕುಮಾರ್,ನಿರ್ದೇಶಕರಾದ ಪ್ರಸನ್ನ, ಮಲ್ಲೇಶ್, ಟಿ.ಕೆ.ಕುಮಾರ್, ದಿನೇಶ್, ಕೆ.ಆರ್.ರವಿ, ರಮೇಶ್, ಕರ್ನಾಟಕ ಕುರುಬ ಸಂಘದ ನಿರ್ದೇಶಕಿ ಹೇಮಲತಾ ಮಂಜುನಾಥ್, ಡಿಎಸ್ಎಸ್ ನ ಪ್ರಮುಖ ಹೊನ್ನಪ್ಪ ಮತ್ತಿತರರು ಇದ್ದರು.