ಕುಶಾಲನಗರ, ನ 12: ಕಾಫಿ ತೋಟದಲ್ಲಿ ಪುರಾತನ ಕಾಲ ನಿಧಿ ಪತ್ತೆಯಾದ ಘಟನೆ ಸಿದ್ದಾಪುರದಲ್ಲಿ ನಡೆದಿದೆ. ಟಾಟಾ ಸಂಸ್ಥೆ ಗೆ ಸೇರಿದ ಆನಂದಪುರ ಕಾಫಿ ತೋಟದಲ್ಲಿರುವ ಈಶ್ವರ ದೇವಾಲಯದ ಬಳಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕ ಸುಬ್ರಮಣಿ ಎಂಬುವವರಿಗೆ ಮಣ್ಣಿನ ಅಡಿಯಿಂದ ಸಣ್ಣ ಕುಡಿಕೆ ದೊರಕಿದ್ದು ಅದರ ಒಳಭಾಗದಲ್ಲಿ ಚಿನ್ನವನ್ನು ಹೋಲುವ ವಸ್ತು ಗೋಚರಿಸಿದೆ ಎನ್ನಲಾಗಿದೆ. ಕಾರ್ಮಿಕನು ದೊರಕಿದ ವಸ್ತುವಿನ ಕುರಿತು ತೋಟದ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ ಮೇರೆಗೆ ವ್ಯವಸ್ಥಾಪಕರು ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ,ಕಾರ್ಮಿಕನಿಗೆ ಲಭಿಸಿದೆ ಎನ್ನಲಾದ ಕುಡಿಕೆಯನ್ನು ಪರಿಶೀಲಿಸಿದಾಗ ಪುರಾತನ ಬೆಳ್ಳಿ ಹಾಗೂ ಚಿನ್ನಾಭರಣ ಎಂದು ಖಚಿತಪಡಿಸಲಾಗಿದೆ.
ಕಾರ್ಮಿಕನಿಂದ ಮಾಹಿತಿ ಪಡೆದ ನಂತರ ದೊರಕಿದ ವಸ್ತುಗಳನ್ನು ವಿರಾಜಪೇಟೆಯ ಖಜಾನೆ ಕಚೇರಿಗೆ ರವಾನಿಸಲಾಯಿತು. ಈ ಸಂದರ್ಭದಲ್ಲಿ ವಿರಾಜಪೇಟೆಯ ಉಪತಹಶೀಲ್ದಾರ್ ಪ್ರದೀಪ್ ,ಕಂದಾಯ ಪರಿವಿಕ್ಷಕ ಅನಿಲ್ ಕುಮಾರ್, ಗ್ರಾಮ ಆಡಳಿತ ಅಧಿಕಾರಿ ಹೋಮಪ್ಪ ,ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಹಾಜರಿದ್ದರು.