ಕುಶಾಲನಗರ, ಮಾ 29:ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಕೊಡಗಿನ 230 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚತ್ತಿರುವುದನ್ನು ವಿರೋಧಿಸಿ AIDSO ವಿದ್ಯಾರ್ಥಿ ಸಂಘಟನೆಯ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಕೊಡಗಿನ ಮಹಿಳಾ ಸಮಾಜ ಭವನದಲ್ಲಿ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಲಾಗಿತ್ತು. ಕೊಡಗು ಜಿಲ್ಲೆಯ ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಸಮಾವೇಶದಲ್ಲಿ AIDSO ರಾಜ್ಯ ಉಪಾಧ್ಯಕ್ಷರಾದ ಅಭಯ ದಿವಾಕರ್ ಅವರು ಮಾತನಾಡಿ ‘ ಜ್ಯೋತಿರಾವ್ ಫುಲೆ, ಸಾವಿತ್ರಿಬಾಯಿ ಫುಲೆ ತಮ್ಮ ಜೀವನವನ್ನೇ ಶಾಲೆಗಳಿಗಾಗಿ ಅರ್ಪಿಸಿದರು. ಕಳೆದ ಬಿಜೆಪಿ ಸರ್ಕಾರ ಸಂಯೋಜನೆ ಹೆಸರಿನಲ್ಲಿ 13800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದ್ದರು. ಆಗ ಇಡೀ ರಾಜ್ಯದಾದ್ಯಂತ ಹೋರಾಟ ಮಾಡಿ ಸರ್ಕಾರಿ ಶಾಲೆಗಳನ್ನು ಉಳಿಸಿದ್ದೆವು. ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ 40,000 ಶಾಲೆಗಳನ್ನು ಮುಚ್ಚಲು ಹೊರಟಿದೆ. ಒಟ್ಟಾರೆ ಎಲ್ಲಾ ಸರ್ಕಾರಗಳ ಅಂತಿಮ ಗುರಿ ಸರ್ಕಾರಿ ಶಾಲೆಗಳನ್ನು ಮುಚ್ಚಿ ಬಡ ವಿದ್ಯಾರ್ಥಿಗಳಿಂದ ಶಿಕ್ಷಣವನ್ನು ಕಸಿದುಕೊಳ್ಳುವುದೇ ಆಗಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸರ್ಕಾರವು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನಿಂದ 2500 ಕೋಟಿ ಸಾಲ ಮಾಡಿ ತೆರೆಯುತ್ತಿದೆ. ಖಾಸಗಿ ಬ್ಯಾಂಕಿನಿಂದ ಸಾಲ ಪಡೆದು ಸರ್ಕಾರಿ ಶಾಲೆಗಳನ್ನು ನಡೆಸುವಂತಹ ಕೆಟ್ಟ ಪರಿಸ್ಥಿತಿಗೆ ಸರ್ಕಾರ ಬಂದಿದೆಯೇ? ನಾವು ಕಟ್ಟುತ್ತಿರುವ ತೆರಿಗೆಯು ಸಾಲದೇ? ಎಂದು ಪ್ರಶ್ನಿಸಿದರು.
ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಹೊರಗುತ್ತಿಗೆ ನೀಡಿ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳನ್ನಾಗಿ ಪರಿವರ್ತಿಸುವ ಉನ್ನಾರವನ್ನು ಸರ್ಕಾರ ಮಾಡುತ್ತಿದೆ. ಪ್ರತಿಯೊಂದು ಕಿಲೋಮೀಟರ್ ವ್ಯಾಪ್ತಿಯ ಒಳಗೆ ಪ್ರಾಥಮಿಕ ಶಾಲೆ ಇರಬೇಕೆನ್ನುವ ಶಿಕ್ಷಣ ಹಕ್ಕು ಕಾಯ್ದೆಯನ್ನು ಕಾಯ್ದೆಯನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಉಲ್ಲಂಘಿಸುತ್ತದೆ ಎಂದರು.
ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಮತ್ತು ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಆಶಯ ‘ ಅನ್ಯಾಯ ಕಂಡಾಗ ಜನರು ಪ್ರಶ್ನೆ ಮಾಡಬೇಕೆಂಬುದು’ ಆದರೆ ಇವತ್ತಿನ ಸರ್ಕಾರಗಳು ಪ್ರಶ್ನೆ ಮಾಡುವ ಮನೋಭಾವನೆ ಕಲಿಸುವ ಶಿಕ್ಷಣವನ್ನು ಕಸಿದುಕೊಳ್ಳುತ್ತಿದ್ದಾರೆ.
ರಾಜ್ಯ ಖಜಾಂಚಿಗಳಾದ ಸುಭಾಷ್ ಬೆಟ್ಟದ ಕೊಪ್ಪ ಅವರು ಮಾತನಾಡಿ ‘ ಕೊಡಗು ಜಿಲ್ಲೆಯಲ್ಲಿ ಕುಶಾಲನಗರ ತಾಲೂಕಿನಲ್ಲಿ ಕುಶಾಲನಗರದ ಸರ್ಕಾರಿ ಶಾಲೆ, ಕೂಡಿಗೆ ಶಾಲೆ ,ಶಿರಂಗಾಲ ಶಾಲೆ ಹಾಗೆ ವಿರಾಜಪೇಟೆ ತಾಲೂಕಿನಲ್ಲಿ ಗೋಣಿಕೊಪ್ಪ ಶಾಲೆ ,ಕುಟ್ಟ ಶಾಲೆ ಸೇರಿ 5 ಮ್ಯಾಗ್ನೆಟ್ ಶಾಲೆಗಳನ್ನು ಆಯ್ಕೆ ಮಾಡಿ 135 ಶಾಲೆಗಳನ್ನು ವಿಲೀನಮಾಡುವ ನೆಪದಲ್ಲಿ ಮುಚ್ಚಲಾಗುತ್ತಿದೆ. ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶ. ಎಷ್ಟೂ ಗ್ರಾಮಗಳಿಗೆ ಬಸ್ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಿ ನಾಲ್ಕು ತಿಂಗಳು ಸುರಿಯುವ ಮಳೆಯಲ್ಲಿ ಒಂದನೇ ತರಗತಿ ಎರಡನೇ ತರಗತಿ ಓದುವ ಚಿಕ್ಕ ಮಕ್ಕಳು ಐದು ಆರು ಕಿಲೋ ಮೀಟರ್ ನಡೆದುಕೊಂಡು ಹೋಗುವುದು ಅಸಾಧ್ಯವಾದ ಮಾತು, ಬೆಟ್ಟಗುಡ್ಡಗಾಡು ಪ್ರದೇಶಗಳಿರುವ ಕೊಡಗು ಜಿಲ್ಲೆಯಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿಯಾದರೆ ಕಾಫಿ ಎಸ್ಟೇಟ್ ಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳು, ಆದಿ ಕಾಡಿನ ಅಂಚಿನಲ್ಲಿ ವಾಸಿಸುತ್ತಿರುವ ಆದಿವಾಸಿ ಮಕ್ಕಳು ಹಾಗೂ ರೈತರ ಬಡವರ ಮಕ್ಕಳು, ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಹಾಗಾಗಿ ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಈಗಾಗಲೇ ರಾಜ್ಯದಲ್ಲಿ 62 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ , 7,000ಕ್ಕೂ ಹೆಚ್ಚು ಏಕೋಪದ್ಯಾಯ ಶಾಲೆಗಳಿವೆ. 23 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆ ಕಟ್ಟಡಗಳು ದುರಸ್ತಿಯಾಗಬೇಕಾಗಿದೆ. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಸರ್ಕಾರಿ ಶಾಲೆಗಳು ಸೊರಗುವಂತೆ ಮಾಡಿ ಸರ್ಕಾರ ಹಿಂಭಾಗಲಿನಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅತಿಥಿಗಳಾಗಿ ಆಗಮಿಸಿದ್ದ, ಕುಶಾಲನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಗೇಶ್ ಕೆ. ಎಸ್ ಅವರು ಮಾತನಾಡಿ ‘ ಕೊಡಗಿನಲ್ಲಿ ಬಡಜನರ ಪರವಾಗಿ ನಡೆಯುವ ಹೋರಾಟದ ಕೊರತೆ ಇದೆ . ಈ ರೀತಿಯಾದ ಹೋರಾಟಗಳು ಇನ್ನು ಹೆಚ್ಚು ಬೆಳೆಯಬೇಕು. ಶಾಲೆಗಳು ಪ್ರತಿಯೊಂದು ಗ್ರಾಮದಲ್ಲಿ ಇರಬೇಕು. ಐದರಿಂದ ಆರು ಕಿಲೋಮೀಟರ್ ದೂರದ ಶಾಲೆಗೆ ಚಿಕ್ಕ ಮಕ್ಕಳು, ಹೆಣ್ಣು ಮಕ್ಕಳು ಹೇಗೆ ಹೋಗಿ ಗುಡ್ಡಗಾಡು ಪ್ರದೇಶದಲ್ಲಿ ಶಿಕ್ಷಣ ತೆಗೆದುಕೊಳ್ಳಲು ಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಮಿಕ ಮುಖಂಡರಾದ ಹರೀಶ್ ಈ ಯೋಜನೆಯಿಂದ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಹೇಳಿ ಸಭೆಯಲ್ಲಿ ಮಾತನಾಡಿದರು
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯಿಂದ ವಿಜಯನಗರದ ಸುರೇಶ್, ಚಿಕ್ಕತ್ತೂರು ಹರೀಶ್ , ತೊರೆನೂರು ಸಾಗರ್ ಅವರು ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಉಳಿಸಲು ಮುಂದಿನ ದಿನಗಳಲ್ಲಿ ಬಲಿಷ್ಠ ಹೋರಾಟವನ್ನು ಕಟ್ಟಲು ಕೊಡಗು ಜಿಲ್ಲಾ ಮಟ್ಟದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು. ಸಮಿತಿಯ ಸಲಹೆಗಾರರಾಗಿ ಕೊಡಗಿನ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಟಿ.ಪಿ ರಮೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲೆಯ ಅಧ್ಯಕ್ಷರಾದ ಕೇಶವ್ ಕಾಮತ್, ತಾಲೂಕು ಅಧ್ಯಕ್ಷರಾದ ನಾಗೇಶ್ ಕೆ. ಎಸ್ ಆಯ್ಕೆಯಾಗಿದ್ದಾರೆ. ಸಮಿತಿಯ ಅಧ್ಯಕ್ಷರಾಗಿ ವಿಜಯನಗರದ ಸುರೇಶ, ಕಾರ್ಯದರ್ಶಿಯಾಗಿ AIDSO ಸ್ವಾತಿ ಹಾಗೂ ಉಪಾಧ್ಯಕ್ಷರಾಗಿ ವಿಜಯನಗರದ ಅಕ್ಷಯ್ ,ಚಿಕ್ಕತ್ತೂರಿನ ಹರೀಶ್, ತೊರೆನೂರಿನ ಸಾಗರ್, ಬ್ಯಾಡಗೂಟ್ಟ ಹಾಡಿಯ ಚಿಮ್ಮಿ, AIUTUC ಕಾರ್ಮಿಕ ಸಂಘಟನೆಯ ಶಾಂತಿ ,AIDYO ಯುವಜನ ಸಂಘಟನೆಯ ಪೂರ್ಣಿಮಾ ಹಾಗೂ ವಿವಿಧ ಹಳ್ಳಿಗಳಿಂದ 100ಕ್ಕೂ ಹೆಚ್ಚು ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಸಮಾವೇಶದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲೆಯ ಸಂಘಟನೆಯ ಸಂಘಟನಾಕಾರಾದ ಸ್ವಾತಿ ವಹಿಸಿದ್ದರು. ಯುವಜನ ಪದಾಧಿಕಾರಿಗಳಾದ ಪೂರ್ಣಿಮಾ, ನೀತು , ಮಂಜು ಹಾಗೂ ವಿವಿಧ ಹಳ್ಳಿಗಳ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
Back to top button
error: Content is protected !!