ಕುಶಾಲನಗರ, ಸೆ 28: ಕುಶಾಲನಗರದ ಗೌಡ ಸಮಾಜದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕುಶಾಲನಗರ ತಾಲ್ಲೂಕು ಮಾಜಿ ಸೈನಿಕರ ಸಂಘದ ಬೆಳ್ಳಿ ಹಬ್ಬ ಆಚರಣೆ ವಿಜೃಂಭಣೆಯಿಂದ ನಡೆಯಿತು.
ಸಮಾರಂಭದಲ್ಲಿ ಮಾಜಿ ಸೈನಿಕರು ಹಾಗೂ ಕುಟುಂಬ ವರ್ಗ ಪಾಲ್ಗೊಂಡು ಸಂಭ್ರಮಿಸಿದರು.
ಸಮಾರಂಭ ಉದ್ಘಾಟಿಸಿದ ಕೊಡಗು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಿ.ಎ.ಕಾರ್ಯಪ್ಪ ಮಾತನಾಡಿ,ದೇಶ ಸೇವೆ ಮಾಡಿ ನಿವೃತ್ತರಾದ ಮಾಜಿ ಸೈನಿಕರ ಶ್ರೇಯೋಭಿವೃದ್ಧಿಗೆ ಸರ್ಕಾರ ವಿಶೇಷ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ತಮ್ಮ ಜೀವನ ಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದರು.
ಕುಶಾಲನಗರ ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಕರ್ನಲ್ ನಾರಾಯಣ ಮೂರ್ತಿ ಮಾತನಾಡಿ, ಸಂಘದ ವತಿಯಿಂದ ಸೇನೆಗೆ ಸೇರಲು ಯುವಜನಾಂಗವನ್ನು ಹೆಚ್ಚು ಪ್ರೋತ್ಸಾಹಿಸಬೇಕು.ಸಂಘದಿಂದ ರಚನಾತ್ಮಕ ಚಟುವಟಿಕೆ ಕೈಗೊಳ್ಳಬೇಕು ಎಂದರು.
ಕೊಡಗು ಮಾಜಿ ಸೈನಿಕರ ಸಂಘದ ಕಾರ್ಯದರ್ಶಿಯೂ ಆದ ವಕೀಲ ಮೇಜರ್ ಚಿಂಗಪ್ಪ ಮಾತನಾಡಿ,ಮಾಜಿ ಸೈನಿಕರು ಸಂಘಟಿತರಾಗಬೇಕು.ಮಾಜಿ ಸೈನಿಕರ ಯೋಗಕ್ಷೇಮಕ್ಕಾಗಿ ರಚನೆಗೊಂಡಿರುವ ಜಿಲ್ಲಾ ಸಂಘದ ಸದಸ್ಯತ್ವವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಮಾಜಿ ಸೈನಿಕರಿಗೆ ಕಾನೂನು ಬಗ್ಗೆ ಸಲಹೆ ಅಗತ್ಯವಿದ್ದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು.
ಕುಶಾಲನಗರ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕ್ಯಾಪ್ಟನ್ ಬಿ.ಕೆ.ಚಿಣ್ಣಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ,ಸಂಘದ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ಸಂಘದ ಸಂಸ್ಥಾಪಕರು ಹಾಗೂ ಪದಾಧಿಕಾರಿಗಳ ಸೇವೆ ಶ್ಲಾಘನೀಯ ಎಂದು ಬಣ್ಣಿಸಿದರು.
ಕೊಡಗು ಜಿಲ್ಲೆಯಲ್ಲಿ ದೊಡ್ಡ ಸಂಘ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ನಮ್ಮ ಸಂಘಕ್ಕೆ ಇಪ್ಪತ್ತೈದು ವರ್ಷ ತುಂಬಿ ಬೆಳ್ಳಿ ಹಬ್ಬ ಆಚರಿಸುತ್ತಿರುವುದು ನಮ್ಮೆಲ್ಲರಿಗೂ ತುಂಬ ಸಂತೋಷ ತಂದಿದೆ.ಸಂಘದ ಏಳಿಗೆಗೆ ಶ್ರಮಿಸಿದ ಎಲ್ಲರಿಗೂ ತುಂಬು ಹೃದಯ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.
ಇದೇ ಸಂದರ್ಭ ಸಂಘಕ್ಕೆ ಐದು ಸೆಂಟ್ ಜಾಗವನ್ನು ದಾನವಾಗಿ ನೀಡಿದ ನಾಯಕ್ ಕೇದಂಬಾಡಿ ಸಣ್ಣಪ್ಪ ಹಾಗೂ ಸಂಘದ ಸಂಸ್ಥಾಪಕ ಅಧ್ಯಕ್ಷ ಸೋಮಣ್ಣ,ಉಪಾಧ್ಯಕ್ಷ ಬೋಜಪ್ಪ,ಪದಾಧಿಕಾರಿಗಳಾದ ಪೂವಯ್ಯ ಹಾಗೂ ಸೂರಪ್ಪ ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭ ನಿವೃತ್ತ ಅರಣ್ಯಾಧಿಕಾರಿ ಮಂಡೇಪಂಡ ಬೋಸ್ ಮೊಣ್ಷಪ್ಪ,ಮಡಿಕೇರಿ ಗ್ರೂಪ್ ಕ್ಯಾಪ್ಟನ್ ಕೆ.ಎ.ಕಾರ್ಯಪ್ಪ, ಕುಶಾಲನಗರ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಮನು ನಂಜುಂಡ ಕಾರ್ಯದರ್ಶಿ ಎಸ್.ಆರ್.ಮಾದಪ್ಪ,ಖಜಾಂಜಿ ನರೇಶ್ ಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಾಜಿ ಸೈನಿಕರು ಹಾಗೂ ದಿವಂಗತ ಸೈನಿಕರ ಪತ್ನಿಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಬೆಳ್ಳಿ ಹಬ್ಬದ ಅಂಗವಾಗಿ ಮಾಜಿ ಸೈನಿಕರು, ಪತ್ಬಿಯರು ಹಾಗೂ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.ಶಿಕ್ಷಕರಾದ ಗಾಯತ್ರಿ ಹಾಗೂ ಸಿ.ಎಂ.ಸುಲೋಚನಾ ನಿರೂಪಿಸಿದರು.
Back to top button
error: Content is protected !!