ಸಾಹಿತ್ಯ
ಲೀಲಾಕುಮಾರಿ ತೊಡಿಕಾನ ಅವರ ‘ಹನಿಹನಿ ಇಬ್ಬನಿ’ ಹನಿಗವನ ಸಂಕಲನ ಬಿಡುಗಡೆ
ಕುಶಾಲನಗರ, ಜೂ 12: : ಪಟ್ಟಣದ ಅನುಗ್ರಹ ಕಾಲೇಜಿನ ಕನ್ನಡ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನರವರ ‘ ಹನಿಹನಿ ಇಬ್ಬನಿ’ ಹನಿಗವನ ಸಂಕಲನ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಸಾಹಿತ್ಯ ನೆಲೆಗಟ್ಟನ್ನು ಗಟ್ಟಿಗೊಳಿಸಲು ಕಥೆ,ಕಾವ್ಯ,ಕವನ ರಚನೆಗಳು ಪೂರಕವಾಗಿವೆ.ವಿದ್ಯಾರ್ಥಿ ಗಳು ಸಾಹಿತ್ಯ ಅಭಿರುಚಿ ಬೆಳೆಸಿಕೊಂಡು ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಚೆಂಬು ಗ್ರಾಮದ ಲೀಲಾಕುಮಾರಿಯವರ ಸಾಹಿತ್ಯ ಚಟುವಟಿಕೆಗಳನ್ನು ಕಳೆದ ಹತ್ತು ವರ್ಷದಿಂದ ಗಮನಿಸುತ್ತಾ ಬಂದಿದ್ದೇನೆ.ಕೊಡಗಿನ ಅತ್ಯಂತ ಚಿಕ್ಕ ಗ್ರಾಮ ಚೆಂಬುವಿನಿಂದ ಅತಿ ಹೆಚ್ಚು ಕವಿಗಳನ್ನು ಕೊಟ್ಟ ಗ್ರಾಮ. ಉದಯೋನ್ಮುಖ ಲೇಖಕಿ ಲೀಲಾಕುಮಾರಿ ಸಾಹಿತ್ಯ ಲೋಕದಲ್ಲಿ ಹೆಜ್ಜೆ ಗುರುತು ಮೂಡಿಸುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಕೊಡಗು ಜಿಲ್ಲಾ ಕಸಾಪದ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ , ಕವನ ಸಂಕಲನ ಪುಸ್ತಕ ಬಿಡುಗಡೆ ಮಾಡಿ, ಲೀಲಾಕುಮಾರಿ ಕೊಡಗಿನ ಸಾಹಿತ್ಯ ಚಟುವಟಿಕೆಗಳಲ್ಲಿ ಹಲವಾರು ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹನಹನಿ ಇಬ್ಬನಿ ಪುಸ್ತಕ ಪರಿಚಯ ಮಾಡಿದ ಚಿತ್ರಕಲಾ ಶಿಕ್ಷಕ ಉ.ರಾ ನಾಗೇಶ್, ಡುಂಡಿರಾಜ್ ರವರ ಚುಟುಕುಗಳನ್ನು ಪ್ರಸ್ತಾಪಿಸಿ, ಡುಂಡಿರಾಜ್ ರವರ ಮುನ್ನುಡಿ ಹೊಂದಿದೆ ಎಂದರೆ ಕೃತಿಯ ಗುಣಮಟ್ಟ ಶ್ರೇಷ್ಠವಾಗಿದೆ ಎಂದರ್ಥ.ಕೃತಿಯಲ್ಲಿರುವ ಹಲವು ಹನಿಗವಿತೆಗಳು ನಾಲ್ಕು ಸಾಲನ್ನಷ್ಟೇ ಹೊಂದಿದ್ದರೂ ಹಲವು ಪುಟ ಬರೆಯುವಷ್ಟು ವಿಚಾರವನ್ನು ಸೃಷ್ಟಿಸುತ್ತದೆ ಎಂದು ಶಾಘ್ಲನೆ ವ್ಯಕ್ತಪಡಿಸಿದರು.
ಲೇಖಕಿ ಫ್ಯಾನ್ಸಿ ಮುತ್ತಣ್ಣ ಮಾತನಾಡಿ ಲೀಲಾಕುಮಾರಿ ತೊಡಿಕಾನರು ಕವಿತೆಗೆ ಆಯ್ದುಕೊಳ್ಳುವ ವಸ್ತು ದಿನನಿತ್ಯ ಜೀವನದ ಭಾಗವೇ ಆಗಿದ್ದು, ಅಭಿವ್ಯಕ್ತಿಸುವ ರೀತಿ ಅತ್ಯದ್ಭುತವಾಗಿದೆ ಎಂದರು.
ಸಾಹಿತಿ ಸುನೀತಾ ಮಾತನಾಡಿ, ಕಡಿಮೆ ಪದಗಳಲ್ಲಿ ಹೆಚ್ಚಿನ ವಿಷಯವನ್ನು ಹೇಳಿದಾಗ ಕವಿತೆ ಗೆಲ್ಲುತ್ತದೆ.ಈ ನಿಟ್ಟಿನಲ್ಲಿ ಲೀಲಾಕುಮಾರಿಯವರ ಹನಿಗವಿತೆಗಳು ಯಶಸ್ಸು ಕಂಡಿವೆ ಎಂದರು.
ಈ ಸಂದರ್ಭ ಅನುಗ್ರಹ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟಿ ನಾಗೇಂದ್ರ ಬಾಬು, ಕಾಲೇಜಿನ ಪ್ರಾಂಶುಪಾಲ ಪಂಡರಿನಾಥ ನಾಯ್ಡು, ಎಜುಕೇಶನಲ್ ಟ್ರಸ್ಟ್ ನ ಸಹಕಾರ್ಯದರ್ಶಿ ಚಂದ್ರಶೇಖರ್ ಉಪಸ್ಥಿತರಿದ್ದರು. ಉಪನ್ಯಾಸಕಿ ಸೀಮಾ ಲೇಖಕಿಯ ಪರಿಚಯ ಮಾಡಿದರು.ವಿದ್ಯಾರ್ಥಿ ವಿನಯಪ್ರಕಾಶ್ ಪ್ರಾರ್ಥಿಸಿದರು.ಉಪನ್ಯಾಸಕ ನೌಷದ್ ನಿರೂಪಿಸಿದರು.ಲೇಖಕಿ ಲೀಲಾಕುಮಾರಿ ತೊಡಿಕಾನ ವಂದಿಸಿದರು.ನಂತರ ಸುಳ್ಯದ ಮಿಮಿಕ್ರಿ ಕಲಾವಿದ ಶ್ರೀ ಪಟ್ಟಾಭಿರಾಮರವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.