ಕುಶಾಲನಗರ, ನ 17: ಕೂಡಿಗೆಯ ಕೃಷಿ ಕ್ಷೇತ್ರದ 47 ಎಕರೆ ಕಾಯ್ದಿರಿಸಲಾಗಿರುವ ಜಾಗದಲ್ಲಿ ಏರ್ ಸ್ಟಿಪ್ ನೊಂದಿಗೆ ಹೆಲಿಪೋರ್ಟ್ ನಿರ್ಮಾಣ ಮಾಡುವ ಯೋಜನೆ ಸಂಬಂಧ ದೆಹಲಿ ತಂಡ ಕೂಡಿಗೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿಯನ್ನು ಪಡೆದುಕೊಂಡಿದೆ.
ಕೂಡಿಗೆ ಸಮೀಪದ ಕೃಷಿ ಕ್ಷೇತ್ರದ ಜಾಗದಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ದೆಹಲಿ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಒಳಪಡುವ ಪವನ್ ಲಿಮಿಟೆಡ್ ಸಂಸ್ಥೆ ತಂಡದ ಅಧಿಕಾರಿಗಳು ಜಿಲ್ಲೆಯ ವಿವಿಧ ಅಧಿಕಾರಿ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿತು.
ದೆಹಲಿ ಸಂಸ್ಥೆಯ ವಿಭಾಗಿಯ ನಿರ್ದೇಶಕರಾದ ಕ್ಯಾಪ್ಟನ್ ಸಲೀಲ್ ಪಾರ್ಸರ್ ಮತ್ತು ಪಿ.ಕೆ. ಮೊರ್ಗರ್ ಮತ್ತು ರಾಜ್ಯ ಸರ್ಕಾರದ ಕೈಗಾರಿಕಾ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಕ್ರಿಯಾ ಯೋಜನೆ ಇಂಜಿನಿಯರ್ ಅಕ್ಷಯ ಹೊಂಡಗಾರ್, ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಟಿ.ಎಂ. ಪ್ರಕಾಶ್ ಮತ್ತಿತರರ ಅಧಿಕಾರಿಗಳು ಕಾಯ್ದಿರಿಸಿದ ಜಾಗ ಪರಿಶೀಲಿಸಿದರು.
ಸಮೀಪದಲ್ಲಿ ಹರಿಯುವ ಹಾರಂಗಿ ನದಿ ಪ್ರದೇಶ ಸೇರಿದಂತೆ ತಾಂತ್ರಿಕ ಯಂತ್ರದ ಮೂಲಕ ಈಗಾಗಲೇ ಭೂ ಮಾಪನ ಇಲಾಖೆಯಿಂದ ಗುರುತಿಸಲ್ಪಟ್ಟಿರುವ ಜಾಗದ ಪರಿಶೀಲನೆಯನ್ನು ತಂಡ ನಡೆಸಿತು.
ಈಗಾಗಲೇ ರಾಜ್ಯ ಸರ್ಕಾರ ಈ ಬಾರಿ ಕೊಡಗು ಸೇರಿದಂತೆ ಎರಡು ಜಿಲ್ಲೆಗಳಿಗೆ 10 ಕೋಟಿ ರೂ ಹಣವನ್ನು ಬಜೆಟ್ ನಲ್ಲಿ ಕಾಯ್ದಿರಿಸಲಾಗಿದೆ . ಅದರನ್ವಯ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕಳೆದ ತಿಂಗಳಲ್ಲಿ ಸಂಬಂಧಿಸಿದ ಇಲಾಖೆಯವರಿಗೆ ಕಾರ್ಯಚಟುವಟಿಕೆಗಳನ್ನು ಅರಂಭಿಸಲು ಒತ್ತಾಯ ಮಾಡಿದ್ದರು. ಅದರಂತೆಯೇ ರಾಜ್ಯ ಮತ್ತು ದೆಹಲಿ ತಂಡದವರು ಹೆಲಿಪೋರ್ಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾರ್ಯಯೋಜನೆಯನ್ನು ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಪ್ರಾಧಿಕಾರದ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧಿಸಿದ ಪ್ರಾಧಿಕಾರಕ್ಕೆ ವರದಿಯನ್ನು ನೀಡಲಿದೆ.
ಈ ಸಂದರ್ಭ ಕುಶಾಲನಗರ ಉಪ ತಹಸೀಲ್ದಾರ್ ಮಧುಸೂದನ್, ತಾಲ್ಲೂಕು ಭೂಮಾಪನ ಅಧಿಕಾರಿ ವಿರೂಪಾಕ್ಷ, ಚೆಸ್ಕಾಂ ಕಾರ್ಯಪಾಲಕ ಅಭಿಯಂತರ ಅನಿತಾ ಬಾಯ್, ಒಳಚರಂಡಿ ಇಲಾಖೆಯ ಅಧಿಕಾರಿ ಹರ್ಷಿತ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ವರ್ಗದವರು ಹಾಜರಿದ್ದರು.
Back to top button
error: Content is protected !!