ಕುಶಾಲನಗರ, ಅ 20:- ಇತ್ತೀಚೆಗೆ ಉತ್ತರಖಾಂಡ್ನ ಜೋಷಿಮತ್ನಲ್ಲಿ ಮಡಿದ ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದ ವೀರಯೋಧ ಸುಬೇದಾರ್ ಮಹೇಶ್ ಅವರ ಅಂತಿಮ ಸಂಸ್ಕಾರಕ್ಕೆ ಆಗಮಿಸಿದ್ದ ನಾಲ್ವರು ಯೋಧರಿಗೆ ಕಿರಗಂದೂರು ಗ್ರಾಮ ಪಂಚಾಯಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಕೆ.ರಘು ಮಾತನಾಡಿ, ವೀರ ಸೈನಿಕರು ತಮ್ಮ ಕುಟುಂಬವನ್ನು ಮರೆತು ಹಗಲಿರುಳು ಶ್ರಮಿಸುತ್ತಿರುವುದರಿಂದ ದೇಶದ ಜನತೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ದೇಶಸೇವೆಯನ್ನು ದೇವರ ಕೆಲಸದಂತೆ ಮಾಡುತ್ತಿರುವ ಯೋಧರನ್ನು ಸನ್ಮಾನಿಸುವ ಮೂಲಕ ಗೌರವ ಸಲ್ಲಿಸುತ್ತಿರುವುದಕ್ಕೆ ಹೆಮ್ಮೆಯೆನಿಸುತ್ತಿದೆ ಎಂದರು.
ನಾಲ್ವರು ಯೋಧರಾದ ಸುಬೇದಾರ್ ಮಣಿ, ಹವಲ್ದಾರ್ ಪ್ರಸಾದ್, ಹವಲ್ದಾರ್ ಕರುಂಬಯ್ಯ, ನಾಯಕ್ ರಾಹುಲ್ ಅವರುಗಳು ಪಂಚಾಯಿತಿ ಸಭಾಂಗಣಕ್ಕೆ ಆಗಮಿಸುತ್ತಿದ್ದಂತೆ ಎಲ್ಲರ ಹಣೆಗೆ ಜಿಪಂ ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮತ್ತು ಗ್ರಾಮಸ್ಥರು ತಿಲಕವನ್ನಿಟ್ಟು ಬರಮಾಡಿಕೊಂಡರು. ಸನ್ಮಾನ ಸ್ವೀಕರಿಸಿದ ನಂತರ ಗದ್ಗದಿತರಾಗಿದ್ದ ಸುಬೇದಾರ್ ಮಣಿ ಮಾತನಾಡಿ, ಯೋಧ ಪರಂಪರೆಯ ನಾಡಾದ ಕೊಡಗಿನಲ್ಲಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ದೊರಕುವ ಗೌರವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮತ್ತು ಎಂ.ಪಿ.ಗೋಪಾಲ್ ಅವರು ಸೈನಿಕರನ್ನು ವೈಯಕ್ತಿಕವಾಗಿ ಸನ್ಮಾನಿಸಿದರು.
ಕಿರಗಂದೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿ, ನಾಡಗೀತೆ ಹಾಡಿದರು. ತಾರಾ ಸುಧೀರ್ ನಿರೂಪಿಸಿ, ಅಂಗನವಾಡಿ ಶಿಕ್ಷಕಿ ಚಂದ್ರಿಕಾ ಸ್ವಾಗತಿಸಿದರು. ಈ ಸಂದರ್ಭ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರಳೀಧರ್ ಯೋಧರ ಗೀತೆಯನ್ನು ಹಾಡುವ ಮೂಲಕ ಗೌರವ ಸಮರ್ಪಣೆ ಮಾಡಿದರು.
ಕಾಯಕ್ರಮದಲ್ಲಿ ಕಿರಗಂದೂರು ಗ್ರಾಪಂ ಉಪಾಧ್ಯಕ್ಷೆ ಶುಭರಾಣಿ, ಸದಸ್ಯರುಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಜನಿ ಮತ್ತು ಸಿಬ್ಬಂದಿಗಳು, ಸುಬೇದಾರ್ ಮಹೇಶ್ ಅವರ ತಾಯಿ ಮಲ್ಲಿಗೆ, ಪತ್ನಿ ವಿನಂತಿ, ಮಕ್ಕಳಾದ ತೀಶ್ಮ, ಕವನ್, ತಾಕೇರಿ ಗ್ರಾಮ ಸಮಿತಿ ಅಧ್ಯಕ್ಷ ಎಂ.ಪಿ.ಜೋಯಪ್ಪ, ಕಿರಗಂದೂರು ಗ್ರಾಮ ಸಮಿತಿ ಅಧ್ಯಕ್ಷ ಚಿದಾನಂದ, ಬಿಳಿಗೇರಿ ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್, ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಗ್ರಾಮಸ್ಥರು ಇದ್ದರು. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡಲಾಯಿತು.
Back to top button
error: Content is protected !!