ಕಾರ್ಯಕ್ರಮ
ಸೈನಿಕ ಶಾಲೆ ಕೊಡಗಿನಲ್ಲಿ 16ನೇ ಶಾಲಾ ಸಂಸ್ಥಾಪನಾ ದಿನಾಚರಣೆ

ಕುಶಾಲನಗರ, ಅ 19 – ಕೂಡಿಗೆ ಸೈನಿಕ ಶಾಲೆಯಲ್ಲಿ 16ನೇ ಶಾಲಾ ಸಂಸ್ಥಾಪನಾ ದಿನ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಎ. ಅಯ್ಯಪ್ಪ ಮಾತನಾಡಿ, ವಿದ್ಯಾಥಿಗಳಿಗೆ ಯಾವುದೇ ಕಠಿಣ ಸಂದರ್ಭಗಳಲ್ಲಿಯೂ ತಾವು ಕೈಗೊಂಡ ಉತ್ತಮ ನಿರ್ಧಾರಗಳನ್ನು ಸ್ಥಗಿತಗೊಳಿಸದೆ ಅವಿರತ ಹೋರಾಟದ ಮೂಲಕ ಮುಂದುವರೆಯಬೇಕು. ಧೈಹಿಕವಾಗಿ ಸಧೃಡವಾಗಿರುವ ಮೂಲಕ ತಾವು ನಿರ್ವಹಿಸುವ ಕಾರ್ಯಗಳನ್ನು ಆನಂದದಿಂದ ಪೂರ್ಣಗೊಳಿಸಬೇಕು ಎಂದು ತಿಳಿಸಿದರು. ಬೇರಾವುದೇ ಸಾಮಾನ್ಯ ಶಾಲೆಯಲ್ಲಿ ಲಭ್ಯವಿರದ ಸೌಲಭ್ಯಗಳು ಪ್ರಸ್ತುತ ಶಾಲೆಯಲ್ಲಿ ಲಭ್ಯವಿದ್ದು, ಅವುಗಳನ್ನು ಯೋಜಿತ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ‘ಕೋಡಾಕ್’ನ ಲಾಂಛನವನ್ನು ಅನಾವರಣಗೊಳಿಸಲಾಯಿತು.
ಇದೇ ಸಂದರ್ಭ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕಾರ್ಯಕ್ರಮದ ನಂತರ ಶಾಲೆಯು ಪೋಷಕ-ಶಿಕ್ಷಕ ಸಭೆಯನ್ನು ಆಯೋಜಿಸಿದ್ದು, ಶಾಲೆಯ ಅರ್ಧವಾರ್ಷಿಕ ವರದಿಯನ್ನು ಹಾಗೂ ವಿದ್ಯಾರ್ಥಿಗಳ ಸಾಧನೆಯನ್ನು ಪೋಷಕರೆದುರಿಗೆ ಪ್ರದರ್ಶಿಸಲಾಯಿತು.
ಇದೇ ಸಂದರ್ಭ ಶಾಲೆಯು ಚಳಿಗಾಲದ ರಜೆಯನ್ನು ಪ್ರಸ್ತುತ ಕಾರ್ಯಕ್ರಮದೊಂದಿಗೆ ಘೋಷಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಜಿ ಕಣ್ಣನ್, ಆಡಳಿತಾಧಿಕಾರಿಗಳಾದ ಲೆಫ್ಟಿನೆಂಟ್ ಕರ್ನಲ್ ಅಜಿತ್ ಸಿಂಗ್, ಉಪಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಮನ್‌ಪ್ರೀತ್ ಸಿಂಗ್, ಶಾಲೆಯ ಹಳೆ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.



