ಕುಶಾಲನಗರ, ಅ15: ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಪಟ್ಟಣ ಗ್ರಾಮದ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಕೊಡಗು ಪ್ರಭಾರ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರದ ಆದೇಶದನ್ವಯ ಹಳ್ಳಿಗಳ ಕಡೆಗೆ ಸರ್ಕಾರವೇ ಬಂದು ಜನ ಸಾಮಾನ್ಯರ ಸಮಸ್ಯೆ ಆಲಿಸಿ, ಆ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಇದಾಗಿದೆ. ಆದ್ದರಿಂದ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಇದು ಉತ್ತಮ ವೇದಿಕೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ, ಕಾಡಾನೆಗಳನ್ನು ನಿಗ್ರಹಿಸಲು ಅರಣ್ಯ ಇಲಾಖೆ ನಿರ್ವಹಿಸಿರುವ ರೈಲು ಕಂಬಿಗಳ ತಡೆಗೋಡೆ ಕಾಮಗಾರಿ ಅವೈಜ್ಞಾನಿಕವಾಗಿ ಕೂಡಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಬೇಕು. ಏಕೆಂದರೆ ನಂಜರಾಯಪಟ್ಟಣ ವ್ಯಾಪ್ತಿಯ ಅರಣ್ಯದಂಚಿನಲ್ಲಿ ನಿತ್ಯವೂ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಸಾಕಷ್ಡು ಜೀವ ಹಾನಿ ಹಾಗು ಬೆಳೆ ಹಾನಿ ಸಂಭವಿಸುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಿಂದೆ ನಿರ್ಮಿಸಿದ್ದ ಆನೆ ಕಂದಕದಲ್ಲಿ ತುಂಬಿರುವ ಹೂಳು ತೆಗೆಯಬೇಕು.
ನಂಜರಾಯಪಟ್ಟಣ, ವಿರೂಪಾಕ್ಷಪುರ ವ್ಯಾಪ್ತಿಯಲ್ಲಿ ಕಳೆದ 30 ವರ್ಷಗಳಿಂದ ವಾಸ ಇರುವ ಫಲಾನುಭವಿ ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಪಡಿತರ ಚೀಟಿಗಳ ಹಂಚಿಕೆ ಸಮರ್ಪಕವಾಗಿಲ್ಲ. ಈ ಹಿಂದೆ ಕೊಟ್ಟಿರುವ ಬಿಪಿಎಲ್ ಕಾರ್ಡುಗಳು ರದ್ದಾಗಿದ್ದು ಸರ್ಕಾರದ ಸೌಲಭ್ಯ ಪಡೆಯಲಾಗುತ್ತಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು.
ಅಲ್ಲದೇ ದುಬಾರೆ ಪ್ರವಾಸೀ ತೀರದಲ್ಲಿ ಪ್ರವಾಸಿಗರು ಹಾಗು ಸ್ಥಳೀಯ ನಿವಾಸಿಗಳಿಗೆ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಿಸಬೇಕು.
ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಅತೀ ಅಗತ್ಯವಿರುವ ಸ್ಮಶಾನಕ್ಕೆ ಜಾಗವನ್ನು ಒದಗಿಸಿಕೊಡಬೇಕೆಂದು ವಿಶ್ವ ಆಗ್ರಹಿಸಿದರು.
ಬಸವನಹಳ್ಳಿಯ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರು ಮಾತನಾಡಿ, ಕಾಡಾನೆ ತಡೆಗೆ ಅಳವಡಿಸಿರುವ ಸೋಲಾರ್ ಬೇಲಿ ನಿಷ್ಪ್ರಯೋಜಕವಾಗಿದೆ. ರೈಲ್ವೆ ಕಂಬಿಗಳ ಅಳವಡಿಕೆ ಕಾಮಗಾರಿಯಲ್ಲಿ ಕೋಟ್ಯಾಂತರ ರೂಗಳ ಅವ್ಯವಹಾರ ನಡೆದಿರುವ ಬಗ್ಗೆ ನೇರ ಆರೋಪ ಮಾಡಿದರಲ್ಲದೆ,
ಸಂಜೆಯಾಯಿತೆಂದರೆ ಊರಿನೊಳಗೆ ಕಾಡಾನೆಗಳು ಧಾವಿಸುತ್ತಿವೆ. ಇದರಿಂದಾಗಿ ನಿತ್ಯವೂ ಸಂಭವಿಸುತ್ತಿರುವ ಜೀವ ಹಾನಿ ತಡೆಗಟ್ಟಲು ಶಾಶ್ವತ ಕ್ರಮವಾಗಬೇಕು. ದುಬಾರೆಯ ಗಿರಿಜನ ಶಿಬಿರಲ್ಲಿನ ಗಿರಿಜನರಿಗೆ ಮಳೆಗಾಲದಲ್ಲಿ ಸಂಚರಿಸಲು ಅನುಕೂಲವಾಗಲು ಕಾವೇರಿ ನದಿಗೆ ಅಡ್ಡಲಾಗಿ ಶೀಘ್ರವಾಗಿ ತೂಗುಸೇತುವೆ ನಿರ್ಮಿಸಲು ಅಗ್ರಹಿಸಿದರು.
ನಾನು ಕಳೆದ 70 ವರ್ಷಗಳಿಂದ ಮಣ್ಣಿನ ಗೋಡೆಯ ಹಳೇ ಮನೆಯಲ್ಲಿ ವಾಸವಿದ್ದೇನೆ. ಆ ಮನೆ ಶಿಥಿಗೊಂಡಿದ್ದು ಯಾವಾಗ ಬೇಕಾದರೂ ಕುಸಿಯಬಹುದು. ದಯಮಾಡಿ ನನಗೆ ಮನೆ ಕಟ್ಟಿಕೊಡಿ ಎಂದು
ನಂಜರಾಯಪಟ್ಟಣ ನಿವಾಸಿ ವೃದ್ದೆ ಮಹದೇವಮ್ಮ ಜಿಲ್ಲಾಧಿಕಾರಿಗಳ ಬಳಿ ನಿವೇದಿಸಿಕೊಂಡರು.
ಈ ಬಗ್ಗೆ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಸ್ಥಳೀಯ ಪಂಚಾಯಿತಿ ಪಿಡಿಒ ಅವರಿಗೆ ಸೂಚಿಸಿ ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಿದರು.
ಗಿರಿಜನ ವಾಸಿಗಳಿಗೆ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ದೊರಕುವ ನಿಟ್ಟಿನಲ್ಲಿ ಮೂಲ ದಾಖಲಾತಿಗಳನ್ನು ಜಿಲ್ಲಾ ಗಿರಿಜನ ಇಲಾಖೆ ಅಧಿಕಾರಿಗಳು ಒದಗಿಸಲು ಸೂಚಿಸಬೇಕೆಂದು ಜಿಲ್ಲಾಧಿಕಾರಿಗಳ ಬಳಿ ಮಾವಿನಹಳ್ಳ ಗಿರಿಜನ ವಾಸಿ ಜೆ.ಟಿ.ಕಾಳಿಂಗ ಆಗ್ರಹಿಸಿದರು.
ನಾನು ಈ ಮೊದಲು ನಾಪೋಕ್ಲು ಗ್ರಾಮದಲ್ಲಿದ್ದೆ. ಈಗ ದಾಸವಾಳದಲ್ಲಿದ್ದೇನೆ. ನನಗೆ ವೃದ್ದಾಪ್ಯ ವೇತನ ವರ್ಗಾಯಿಸಿ ಕೊಡಿ ಎಂದು ಜಿಲ್ಲಾಧಿಕಾರಿಗಳಲ್ಲಿ ಎಪ್ಪತ್ತರ ವೃದ್ದೆ ಜಾನಕಿ ವಿನಂತಿಸಿದಾಗ ಸ್ಥಳದಲ್ಲೇ ಗ್ರಾಮಲೆಕ್ಕಿಗರಿಗೆ ಸೂಚಿಸಿ ಸ್ಥಳದಲ್ಲೇ ಸಮಸ್ಯೆ ನೀಗಿಸಿದರು. ಅರಣ್ಯದಂಚಿನಲ್ಲಿ ವಾಸವಿರುವ ಗಿರಿಜನ ವಾಸಿಗಳಿಗೆ ಹಕ್ಕುಪತ್ರ ಒದಗಿಸಲು ಮೂಲ ದಾಖಲೆಗಳನ್ನು ಸಲ್ಲಿಸುವಂತೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಮುಗ್ಧ ಗಿರಿಜನ ವಾಸಿಗಳು ಮೂಲ ದಾಖಲೆಗಳನ್ನು ಎಲ್ಲಿ ಹುಡುಕಬೇಕು. ಈ ಬಗ್ಗೆ ಅಧಿಕಾರಿಗಳೇ ಸಮಸ್ಯೆ ಬಗೆಹಹರಿಸಬೇಕು ಎಂದು ಸಮಗ್ರ ಗಿರಿಜನ ಅಧಿಕಾರಿಗಳಲ್ಲಿ ಪಂಚಾಯಿತಿ ಅಧ್ಯಕ್ಷ ವಿಶ್ವ ಒತ್ತಾಯಿಸಿದರು.
ಕೊಡಗು ಜಿಲ್ಲಾ ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಕುಶಾಲನಗರ ತಾಲ್ಲೂಕು ತಹಸೀಲ್ದಾರ್ ಟಿ.ಎಂ.ಪ್ರಕಾಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಗಣಿ ಇಲಾಖೆ ಅಧಿಕಾರಿ ಶ್ರೀನಿವಾಸ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನಾ, ಸಮಗ್ರ ಗಿರಿಜನ ಅಭಿವೃದ್ದಿ ಅಧಿಕಾರಿ ಹೊನ್ನೇಗೌಡ, ಲೋಕೋಪಯೋಗಿ ಇಲಾಖೆ ಇಇ ನಾಗರಾಜು, ಜಿಪಂ ಇಇ ನಾಗೇಂದ್ರಪ್ಪ, ನಂಜರಾಯಪಟ್ಟಣ ಗ್ರಾಪಂ ಉಪಾಧ್ಯಕ್ಷೆ ಸಮೀರಾ, ಕುಶಾಲನಗರ ಉಪತಹಸೀಲ್ದಾರ್ ಮಧುಸೂದನ್, ಕಂದಾಯಾಧಿಕಾರಿ ಹೆಚ್.ಎಸ್. ಸಂತೋಷ್, ಜಿಲ್ಲಾ ಹಾಗು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಗ್ರಾಮಸ್ಥರ ಸಮಸ್ಯೆಗಳಿಗೆ ಧ್ವನಿಯಾದರು.
ನಂಜರಾಯಪಟ್ಟಣ ಪ್ರೌಢಶಾಲೆಯ ಶಿಕ್ಷಕ ಎಸ್. ನಾಗರಾಜು ನಿರೂಪಿಸಿದರು. ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ರಾಕೇಶ್ ಸ್ವಾಗತಿಸಿದರು. ಕುಶಾಲನಗರ ನಾಢ ಕಛೇರಿ ಉಪತಹಸೀಲ್ದಾರ್ ಮಧುಸೂದನ್ ವಂದಿಸಿದರು.
Back to top button
error: Content is protected !!