ವಿಶೇಷ

ಕಪ್ಪೆ‌ ನುಂಗಲು ಬಂದು ಮೀನಿನ‌ ಗಾಣಕ್ಕೆ ಸಿಲುಕಿದ ನಾಗರಹಾವು: ಚಿಕಿತ್ಸೆಗೆ ಮೈಸೂರಿಗೆ ರವಾನೆ

ಕುಶಾಲನಗರ, ಸೆ 30: ಕಪ್ಪೆ‌ ನುಂಗಲು ಬಂದ ನಾಗರಹಾವು ಗಾಣಕ್ಕೆ ಸಿಲುಕಿ ನರಳಾಡಿದ ಘಟನೆ ಕುಶಾಲನಗರದ ಹಾರಂಗಿಯಲ್ಲಿ‌ ನಡೆದಿದೆ.
ಹಾರಂಗಿ ಅಯ್ಯಪ್ಪ ದೇವಾಲಯ ಬಳಿಯ ನಿವಾಸಿಯೊಬ್ಬರು ಮೀನು ಹಿಡಿಯಲೆಂದು ಗಾಣಕ್ಕೆ‌ ಕಪ್ಪೆಯನ್ನು ಸಿಕ್ಕಿಸಿ ನದಿಗೆ ಹಾಕಿದ್ದರು.‌ ಆದರೆ ಮೀನು ಸಿಲುಕದ ಕಾರಣ ಕಪ್ಪೆ ಸಹಿತ ಗಾಣವನ್ನು ತಂದು ಮನೆಯಂಗಳದಲ್ಲಿ ಇಡಲಾಗಿತ್ತು. ಮನೆಯ ಪ್ರದೇಶದಲ್ಲಿ ಕೆಲ ದಿನಗಳಿಂದ ಅಡ್ಡಾಡುತ್ತಿದ್ದ ನಾಗರಹಾವೊಂದು ಕಪ್ಪೆ ನುಂಗಲು‌ ಬಂದಿದೆ.‌ ಅಪಾಯ ಅರಿಯದೆ ಕಪ್ಪೆ ನುಂಗಿದ ನಾಗರಹಾವಿನ‌ ಗಂಟಲಿಗೆ ಗಾಣ ಸಿಲುಕಿಕೊಂಡಿದೆ. ನಾಗರಹಾವು ಒದ್ದಾಡಿತ್ತಿರುವುದನ್ನು ಗಮನಿಸಿದ‌ ಮನೆ‌ ಮಾಲೀಕ ಸ್ನೇಕ್ ಗಫೂರ್ ಅವರನ್ನು ಸಂಪರ್ಕಿಸಿದ್ದಾರೆ. ಸ್ಥಳಕ್ಕೆ ತೆರಳಿದ ಸ್ನೇಕ್ ಗಫೂರ್ ಕೂಡ ಹಾವಿನ‌ ಬಾಯಿಯಿಂದ ಗಾಣ ತೆಗೆಯಲು ಶ್ರಮಿಸಿ ಸಾಧ್ಯವಾಗಲಿಲ್ಲ. ಸ್ನೇಕ್ ವಾವ ಸೇರಿದಂತೆ ಕೊಡಗಿನ ವೈದ್ಯರುಗಳನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನೀಡಲಾಗಿ ಹಾವಿಗೆ ಚಿಕಿತ್ಸೆ‌ ನೀಡಲು ಕೊಡಗಿನಲ್ಲಿ ಸೂಕ್ತ ಸೌಲಭ್ಯ ಇಲ್ಲದಿರುವ ಬಗ್ಗೆ ಅಸಹಾಯಕತೆ ವ್ಯಕ್ತಗೊಂಡಿದೆ.‌ಬಳಿಕ‌ ಮೈಸೂರಿನ ಸ್ನೇಕ್ ಶ್ಯಾಂ ಅವರನ್ನು ಸಂಪರ್ಕಿಸಿ ಅವರ ಪುತ್ರ ಸೂರ್ಯಕೀರ್ತಿ ಅವರಿಗೆ ವಿಷಯ ತಿಳಿಸಿದ ಬಳಿಕ‌ ಮೈಸೂರಿನಲ್ಲಿ ಚಿಕಿತ್ಸೆಗೆ ಅವಕಾಶವಿರುವುದು ತಿಳಿದುಬಂದಿದೆ. ಹೀಗಾಗಿ 4 ವರ್ಷ ಪ್ರಾಯದ 5 ಅಡಿ ಉದ್ದದ ಈ ನಾಗರಹಾವನ್ನು ಐರಾವತ ಬಸ್ ನಲ್ಲಿ‌ ಮೈಸೂರಿಗೆ ಸ್ನೇಕ್ ಗಫೂರ್ ಕಳುಹಿಸಿಕೊಟ್ಟಿದ್ದಾರೆ. ಅಲ್ಲಿ ಸೂರ್ಯಕೀರ್ತಿ ಅವರು ಇದಕ್ಕೆ‌ ಚಿಕಿತ್ಸೆ ಒದಗಿಸಲಿರುವ ಬಗ್ಗೆ ಗಫೂರ್ ಮಾಹಿತಿ‌ ನೀಡಿದ್ದಾರೆ. ಚಿಕಿತ್ಸೆ ಬಳಿಕ‌ ಹಾವು ಚೇತರಿಸಿಕೊಳ್ಳುವುದೇ‌ ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!