ಕುಶಾಲನಗರ, ಸೆ 18: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಮೊದಲಿಗೆ ಸಂಘದ ಸದಸ್ಯರ ಮಕ್ಕಳು ಪ್ರೌಢಶಾಲೆ, ಪದವಿಪೂರ್ವ ಕಾಲೇಜಿನಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಲಾಯಿತು. ಸಭೆಯಲ್ಲಿ 2025-26 ಸಾಲಿನ ವಾರ್ಷಿಕ ವರದಿಯ ದಾಖಲು ಮಾಡುವುದು, ಹಿಂದಿನ ಸಾಲಿನ ಆಡಳಿತ ಮಂಡಳಿಯ ವರದಿ, ಲೆಕ್ಕ ಪರಿಶೋಧನಾ ವರದಿ,2026-27 ಸಾಲಿನ ಅಂದಾಜು ಆಯವ್ಯಯ ಸೇರಿದಂತೆ ನಿವ್ವಳ ಲಾಭದ ವಿಲೇವಾರಿ, ಸೇರಿದಂತೆ ಸಂಘದ ಅಭಿವೃದ್ಧಿಗೆ ಪೂರಕವಾದ ವಿಷಯಗಳ ಬಗ್ಗೆ ಹಾಜರಿದ್ದ ಸಂಘದ ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದರ ಜೊತೆಯಲ್ಲಿ ಸಂಘದ ಬೆಳವಣಿಗೆಗೆ ಸಹಕಾರಿಯಾಗುವ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಹಾಜರಿದ್ದ ಅನೇಕ ರೈತ ಸದಸ್ಯರು ಸಂಘವು ಕೃಷಿ ಪತ್ತಿನ ಸಹಕಾರ ಸಂಘವಾಗಿರುವ ಹಿನ್ನೆಲೆಯಲ್ಲಿ ಸಂಘದ ಮೂಲಕ ರೈತರು ವಿವಿಧ ಬಗೆಯ ಕೃಷಿ ಸಾಲವನ್ನು ಪಡೆದು ಬೇಸಾಯ ಮಾಡಲಾಗಿದೆ ಅದರೆ ಮಳೆಯ ಪ್ರಮಾಣವು ತೀರ ಕಡಿಮೆಯಾಗಿ ಬಿತ್ತನೆ ಮಾಡಿದ ಬೆಳೆ ಮೆಕ್ಕೆಜೋಳ ಸೇರಿದಂತೆ ಉಪ ಬೆಳೆಗಳು ಒಣಗಿ ಹಾಳಾಗಿರುತ್ತವೆ. ಅದರಿಂದಾಗಿ ಕುಶಾಲನಗರ ತಾಲ್ಲೂಕು ಅನ್ನು ಬರಗಾಲ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಲು ಸಂಬಂಧಿಸಿದ ಕಂದಾಯ ಇಲಾಖೆ, ಮತ್ತು ಜಿಲ್ಲಾಧಿಕಾರಿ, ಮತ್ತು ರಾಜ್ಯ ಸರ್ಕಾರಕ್ಕೆ ಸಂಘದ ಮೂಲಕ ಪತ್ರಬರೆಯುವಂತೆ ಹಾಜರಿದ್ದ ನೂರಾರು ಸದಸ್ಯರು ಒತ್ತಾಯ ಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಮಾತಾನಾಡುತ್ತಾ ಅವರು ಸಂಘದ ಪ್ರಗತಿಗೆ ಸದಸ್ಯರ ಸಹಕಾರ ಬಹು ಮುಖ್ಯ, ಸಾಲ ಪಡೆದ ಸದಸ್ಯರು ಮರುಪಾವತಿಗೆ ಸಹಕರಿಸಬೇಕು, ತಮ್ಮೇಲ್ಲರ ಸಹಕಾರದಿಂದಾಗಿ ಸಂಘವು ಕಳೆದ ಸಾಲಿಕ್ಕಿಂತ ಈ ಸಾಲಿನಲ್ಲಿ 10.ಲಕ್ಷ ಹೆಚ್ಚಾಗಿ ಲಾಭಾಂಶ ಗಳಿಸುವ ಮೂಲಕ ಈ ಸಾಲಿನಲ್ಲಿ 90 ಲಕ್ಷದ 22 ಸಾವಿರದಷ್ಟು ನಿವ್ವಳ ಲಾಭ ಗಳಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಹೊಸ ಹೊಸ ಯೋಜನೆಗಳ ಮೂಲಕ ಸಂಘದ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು, ಈಗಾಗಲೇ ಸೀಗೆಹೊಸೂರು ಗ್ರಾಮದಲ್ಲಿ ರೈತರ ಸದುಪಯೋಗಕ್ಕೆ 29. ಲಕ್ಷ ವೆಚ್ಚದಲ್ಲಿ ನೂತನ ಗೋದಾಮು,ವಾಣಿಜ್ಯ ಮಳಿಗೆಗಳನ್ನು ಉದ್ಘಾಟನೆ ನೆರವೇರಿಸಿ ತೆರೆಯಲಾಗಿದೆ, ಸಂಘದ ಅಭಿವೃದ್ಧಿಗೆ ಸದಸ್ಯರು, ರೈತರು, ಠೇವಣಿದಾರು ಸಹಕಾರ ಅತಿ ಮುಖ್ಯವಾಗಿರುತ್ತದೆ. ರೈತರ ಅಭಿಪ್ರಾಯದಂತೆ ಕುಶಾಲನಗರ ತಾಲ್ಲೂಕು ಬರ ಪೀಡಿತ ತಾಲ್ಲೂಕು ಘೋಷಣೆಗೆ ಸಂಬಂಧಿಸಿದಂತೆ ಪತ್ರವ್ಯವಹಾರ ಮಾಡಲಾಗುವುದು ಜೊತೆಯಲ್ಲಿ ಲಾಭಾಂಶ ವಿಂಗಡಿಸುವ ಸಂದರ್ಭದಲ್ಲಿ ಸೈನಿಕ ನಿಧಿಗೆ ಮೀಸಲು ಇಡುವ ಬಗ್ಗೆ ಸಭೆಯ ತೀರ್ಮಾನದಂತೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ವಿ. ಬಸಪ್ಪ, ಜಿಲ್ಲಾ ಯೂನಿಯನ್ ಬ್ಯಾಂಕ್ ನ ನಿರ್ದೇಶಕರಾದ ಎಸ್. ಆರ್. ಸುನಿಲ್ ರಾವ್, ನಿರ್ದೇಶಕರುಗಳಾದ ಕೆ.ಟಿ. ಅರುಣ್ ಕುಮಾರ್, ಕೃಷ್ಣ ಗೌಡ, ಕೆ.ಕೆ.ಪವಿತ್ರ, ರಮೇಶ್, ಕೆ.ಜೆ. ಕುಮಾರ್, ನಾಗರಾಜ್, ಎಸ್. ಆರ್. ಅರುಣ್ ರಾವ್, ಕೆ.ಬಿ.ರಾಮಚಂದ್ರ, ಎಸ್. ಎಸ್. ಕೃಷ್ಣ, ಜಯಶ್ರೀ, ವೃತ್ತಿ ಪರ ನಿರ್ದೇಶಕ ಆರ್.ಕೆ. ನಾಗೇಂದ್ರ ,ಡಿ.ಎನ್. ಚಂದ್ರಶೇಖರ್, ಕುಶಾಲನಗರ ವೃತ್ತ ಸಹಕಾರ ಸಂಘದ ಮೇಲ್ವಿಚಾರಕ , ಅರುಣ್ ಕುಮಾರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಪಿ. ಹರ್ಷ ಸೇರಿದಂತೆ ಸಿಬ್ಬಂದಿ ವರ್ಗದವರು , 14 ಗ್ರಾಮ ವ್ಯಾಪ್ತಿಯ ರೈತ ಸದಸ್ಯರು ಹಾಜರಿದ್ದರು.
ಸಂಘದ ವರದಿಯನ್ನು ಕಾರ್ಯದರ್ಶಿ ಕೆ.ಪಿ. ಹರ್ಷ ಮಂಡಿಸಿದರು.
ಆರ್.ಕೆ. ನಾಗೇಂದ್ರ ಸ್ವಾಗತಿಸಿ , ಕೃಷ್ಣ ವಂದಿಸಿದರು.
Back to top button
error: Content is protected !!