ಕುಶಾಲನಗರ, ಸೆ. 16: ನಂ 305ನೇ ಸೋಮವಾರಪೇಟೆ, ಕುಶಾಲನಗರ ತಾಲ್ಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಸ್. ಆರ್. ಅರುಣ್ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 2025-26 ಸಾಲಿನ ಆಡಳಿತ ಮಂಡಳಿಯ ವರದಿ, ಲೆಕ್ಕ ಪರಿಶೀಲನಾ ವರದಿ, 2026-27 ನೇ ಸಾಲಿನ ಅಂದಾಜು ಆಯವ್ಯಯ ಮಂಡನೆ ಸೇರಿದಂತೆ ಸಂಘದ ಅಭಿವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ಹಾಜರಿದ್ದ ಸದಸ್ಯರು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕುಶಾಲನಗರ ತಾಲೂಕನ್ನು ಬರಪೀಡಿತ ಎಂದು ಘೋಷಿಸುವ ಅಗತ್ಯವಿದೆ ಎಂದು ಮಾಜಿ ಅಧ್ಯಕ್ಷ ಆರ್.ಕೆ.ಚಂದ್ರ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಕಸ್ತೂರಿ ರಂಗನ್ ವರದಿಗೆ ವಿರೋಧ ವ್ಯಕ್ತಪಡಿಸಿ ಸಂಬಂಧಿಸಿದ ಇಲಾಖೆಗೆ ಸಭೆಯ ನಿರ್ಣಯ ಕಳಿಸಿಕೊಡಬೇಕಿದೆ. ರೈತರು, ಬೆಳೆಗಾರರ ಸಮಸ್ಯೆ ಬಗ್ಗೆ ಮಾತ್ರ ಬೆಳಕು ಚೆಲ್ಲಲಾಗುತ್ತಿದೆ. ಆದರೆ ವರದಿಯಿಂದ ಅರಣ್ಯವಾಸಿಗಳಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ದನಿ ಎತ್ತಬೇಕಿದೆ. ಮಹಾಸಭೆಗೆ ಐಟಿಡಿಪಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕಿದೆ ಎಂದು ಆಗ್ರಹಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್. ಆರ್. ಅರುಣ್ ರಾವ್ ಮಾತನಾಡಿ, ಸಂಘದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬಸವನಹಳ್ಳಿಯಲ್ಲಿ ಈಗಾಗಲೆ 25 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು ಎಲ್ಲಾ ಉತ್ಪನ್ನಗಳು ಒಂದೇ ಸೂರನಡಿ ಮಾರಾಟ ಮಾಡಲು ಅನುಕೂಲ ಒದಗಿಸಲಾಗಿದೆ. ಅಲ್ಲದೆ ಪೀಠೋಪಕರಣ ತಯಾರಿಕೆ ತರಬೇತಿ ನೀಡುವ ನಿಟ್ಟಿನಲ್ಲಿ ಆಧುನಿಕ ಮರ ಘಟಕಕ್ಕೆ ಯಂತ್ರೋಪಕರಣಗಳು ಅಳವಡಿಕೆಗೆ ಸಂಬಂಧಿಸಿದ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷೆ ಕಾವೇರಿ, ನಿರ್ದೇಶಕರುಗಳಾದ ಸಿ.ಕೆ.ಉದಯಕುಮಾರ್, ಬಿ.ಎ. ಗಂಗಾಧರ್, ಎಸ್. ಆರ್. ಕಮಲ, ಬಿ.ಸಿ. ಕಾಳಯ್ಯ, ದೇವಿರಮ್ಮ, ಬಿ.ಎಸ್. ಚಂದ್ರ, ಜೆ.ಕೆ. ರಾಜು, ಶ್ಯಾಮ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಜೆ. ಹನಿಕುಮಾರ್, ಲೆಕ್ಕಣಿಗ ಪಿ.ಎ. ಯಶವಂತ್ ಸೇರಿದಂತೆ ಸೋಮವಾರಪೇಟೆ, ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಸದಸ್ಯರು ಭಾಗವಹಿಸಿದ್ದರು.
Back to top button
error: Content is protected !!