ಕುಶಾಲನಗರ, ಸೆ 12: ಕುಶಾಲನಗರದ ನಂ.19722 ಕೈಗಾರಿಕೋದ್ಯಮಿಗಳು ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ 2025-26ನೇ ಸಾಲಿನ
ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಅವರ ಅಧ್ಯಕ್ಷತೆಯಲ್ಲಿ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಅವರು, ಸಂಘವು
2025-26ನೇ ಸಾಲಿನಲ್ಲಿ ರೂ.2.89 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
2004ರಲ್ಲಿ ಪ್ರಾರಂಭವಾದ ಸಂಘವು 21 ವರ್ಷಗಳಿಂದ ನಿರಂತರ ಲಾಭದ ಹಾದಿಯಲ್ಲಿದೆ. ಕಳೆದ ಸಾಲಿನಲ್ಲಿ 1404 ಸದಸ್ಯರಿಂದ ರೂ.3.48 ಕೋಟಿ ಷೇರು ಬಂಡವಾಳ ಸಂಗ್ರಹವಾಗಿದೆ. ಪ್ರಸಕ್ತ ಸಾಲಿನಲ್ಲಿ ಸದಸ್ಯರ ಸಂಖ್ಯೆ 1449ಕ್ಕೆ ಏರಿದ್ದು, ರೂ.3.90 ಕೋಟಿ ಷೇರು ಬಂಡವಾಳ ಸಂಗ್ರಹವಾಗಿದೆ ಎಂದರು.
ಸಂಘದ ಸುಸ್ತಿ ಸಾಲದ ಪ್ರಮಾಣ ಕೇವಲ ಶೇ.4.21ರಷ್ಟಿದ್ದು, ವಸೂಲಾತಿ ಪ್ರಗತಿ ಶೇ.95.79ರಷ್ಟಿದೆ. ಲೆಕ್ಕಪರಿಶೋಧನಾ ವರದಿಯಲ್ಲಿ ಸಂಘವು ‘ಎ’ ಶ್ರೇಣಿಯನ್ನು ಪಡೆದುಕೊಂಡಿದೆ. ಒಬ್ಬ ಸದಸ್ಯನಿಗೆ ಗರಿಷ್ಠ ರೂ.2.60 ಕೋಟಿ ವರೆಗೆ ಸಾಲ ನೀಡಲಾಗುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ ಸಾಲದ ಮೊತ್ತವನ್ನು ರೂ.100 ಕೋಟಿಗೆ ಏರಿಸುವ ಗುರಿ ಹೊಂದಲಾಗಿದೆ. ಹೊಸ ಲಾರಿ, ಟಿಪ್ಪರ್ ಸೇರಿದಂತೆ ಎಲ್ಲಾ ರೀತಿಯ ಸರಕು ಸಾಗಾಣೆ ವಾಹನಗಳಿಗೆ ಗರಿಷ್ಠ ರೂ.50 ಲಕ್ಷದವರೆಗೆ ಶೇ.90ರಷ್ಟು ಸಾಲ ನೀಡಲಾಗುತ್ತಿದೆ.
ಸರ್ಕಾರಿ ಆಸ್ಪತ್ರೆಗೆ ಉಸಿರಾಟದ ತೊಂದರೆ ಹಾಗೂ ಡಯಾಲಿಸಿಸ್ ಸೌಲಭ್ಯ, ರಕ್ತದಾನ ಶಿಬಿರ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಲು ರೂ.8 ಲಕ್ಷ ಬಜೆಟ್ ಮೀಸಲಿಡಲು ತೀರ್ಮಾನಿಸಲಾಗಿದೆ.
ಮುಂದಿನ 3 ವರ್ಷಗಳಿಗೆ ಸಂಘವು ಪ್ರಾರಂಭವಾಗಿ 25 ವರ್ಷ ಪೂರೈಸುತ್ತಿದ್ದು ಬೆಳ್ಳಿ ಮಹೋತ್ಸವವನ್ನು ಆಚರಿಸಲು ಈಗಿನಿಂದಲೇ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಬೆಳ್ಳಿ ಮಹೋತ್ಸವದ ಸವಿ ನೆನಪಿಗಾಗಿ ಸೂಕ್ತ ಸ್ಮಾರಕ ಭವನವನ್ನು ನಿರ್ಮಾಣ ಮಾಡಿ, ಬೆಳ್ಳಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಿರುವ ಬಗ್ಗೆ ತಿಳಿಸಿದರು
ವರದಿ ಸಾಲಿನಲ್ಲಿ ರೂ.439 ಕೋಟಿ ವಾರ್ಷಿಕ ವ್ಯವಹಾರ ನಡೆಸಿದ್ದು, ಅನುತ್ವಾದಕ ಆಸ್ತಿಗಳಿಗೆ ರೂ 8.78 ಲಕ್ಷದಷ್ಟು, ಇತರೇ ಸವಕಳಿಗೆ ರೂ 9.29 ಲಕ್ಷಗಳನ್ನು ಕಾಯ್ದಿರಿಸಿದ ಒಟ್ಟು ರೂ.24.92 ಲಕ್ಷದಷ್ಟು ಮೊತ್ತವನ್ನು ಕಾಯ್ದಿರಿಸಲಾಗಿದೆ. ಸಂಘದ ಸದಸ್ಯರುಗಳು ನಮ್ಮಲ್ಲಿ ಹೂಡಿಕೆ ಮಾಡಿರುವ ಪಾಲು ಬಂಡವಾಳಕ್ಕೆ ಸಹಕಾರ ಸಂಘಗಳ ಕಾಯಿದೆಯಲ್ಲಿ ನಿಗದಿ ಪಡಿಸಿರುವ ಗರಿಷ್ಠ ಶೇ.25ರಷ್ಟು ಲಾಭಾಂಶವನ್ನು ನೀಡಲು ನಾವುಗಳು ಆಡಳಿತ ಮಂಡಳಿಯವರು ನಿರ್ಧರಿಸಿರುವುದಾಗಿ ತಿಳಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್,
ನಿರ್ದೇಶಕರಾದ ಎನ್.ಇ.ಶಿವಪ್ರಕಾಶ್, ಎಂ.ವಿ.ನಾರಾಯಣ, ಕೆ.ಎನ್.ಸುರೇಶ್ ಕುಮಾರ್, ಅಮೃತ್, ಕವಿತಾ, ರಾಮಕೃಷ್ಣ, ಶರತ್,ನವೀನ್, ಕೃತಿಕಾಪೊನ್ನಪ್ಪ, ಕೀರ್ತಿ ಲಕ್ಷ್ಮಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರಿಜೇಶ್, ವ್ಯವಸ್ಥಾಪಕ ಆರ್.ರಾಜು ಭಾಗವಹಿಸಿದ್ದರು.
Back to top button
error: Content is protected !!