ಕಾರ್ಯಕ್ರಮ

ಕುಶಾಲನಗರದಲ್ಲಿ ನಡೆದ ಪತ್ರಿಕಾ ದಿನಾಚರಣೆ: ಸಾಧಕರಿಗೆ ಕಾವೇರಿ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಕುಶಾಲನಗರ, ಜು 31: ಸಾಮಾಜಿಕ ಕಳಕಳಿಯೊಂದಿಗೆ ಪ್ರಾಮಾಣಿಕ ಸೇವಾ ಮನೋಭಾವದ ಮೂಲಕ ಪತ್ರಕರ್ತರು ವಸ್ತುನಿಷ್ಠ ವರದಿ ಮಾಡಿದಲ್ಲಿ ಮಾತ್ರ ಸಮಾಜ ಸುಧಾರಣೆ ಕಾಣಲು ಸಾಧ್ಯವಾಗಲಿದೆ ಎಂದು ಮಾಜಿ ಸಚಿವ ಎಂ ಪಿ ಅಪ್ಪಚ್ಚು ರಂಜನ್ ಅಭಿಪ್ರಾಯ ಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ,
ಕುಶಾಲನಗರ ಪ್ರೆಸ್ ಕ್ಲಬ್ ಟ್ರಸ್ಟ್, ಸಂಗಮ ಟಿ.ವಿ., ವಂಶಿ ನ್ಯೂಸ್ ಹಾಗೂ
ರಾಷ್ಟ್ರೀಯ ಅಪರಾದ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ ಬೆಂಗಳೂರು ಇವರ
ಸಹಯೋಗದೊಂದಿಗೆ ಎ ಪಿ ಸಿ ಎಂ ಎಸ್ ಸಭಾಂಗಣದಲ್ಲಿ
ನಡೆದ ಅಂತರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ನೀಡಲಾಗುವ
ಕಾವೇರಿ ರತ್ನ ಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ನಾವೆಲ್ಲರೂ ಸಂವಿಧಾನವನ್ನು ಪಾಲಿಸುವ ಮೂಲಕ
ಸಮಾಜವನ್ನು ಸದೃಢಗೊಳಿಸಬೇಕು. ಇಂದಿನ ಸಮಾಜದ ಪ್ರಗತಿಗೆ
ಪತ್ರಿಕಾ ರಂಗದ‌ ಪಾತ್ರ ಮಹತ್ವದ್ದಾಗಿದೆ.
ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಜೊತೆಗೆ ಪತ್ರಿಕಾ ರಂಗವೂ ಗುರುತಿಸಿಕೊಂಡಿದೆ. ಯಾವುದೇ ಕ್ಷೇತ್ರದಲ್ಲಿ ಲೋಪ ದೋಷಗಳು ಕಂಡುಬಂದಲ್ಲಿ ಪತ್ರಿಕಾ ರಂಗ ತನ್ನ ವರದಿಯ ಮೂಲಕ ತಿದ್ದುವಂತ ಕೆಲಸ ಮಾಡುತ್ತದೆ. ವಂಶಿ ನ್ಯೂಸ್ ನೇತ್ರತ್ವದಲ್ಲಿ ಕಳೆದ ಹಲವು ವರ್ಷಗಳಿಂದ ಅಂತರಾಷ್ಟ್ರೀಯ ಪತ್ರಿಕಾ ದಿನಾಚರಣೆಯೊಂದಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಮಾದರಿ ಕಾರ್ಯಕ್ರಮ ಮಾಡುತ್ತಿರುವ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದ್ದರು.
ಕೊಡ್ಲಿಪೇಟೆ ಶ್ರೀ ಕ್ಷೇತ್ರ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ,
ಸಮಾಜದಲ್ಲಿ ಶಿಕ್ಷಕ, ವಿಜ್ಞಾನಿ, ಪತ್ರಕರ್ತ, ಕೃಷಿಕ, ಸೈನಿಕ ಹಾಗೂ ವೈದ್ಯರ ಪಾತ್ರ ಬಹಳ ಮುಖ್ಯವಾದುದು. ಸಮಾಜದ ನಾಲ್ಕನೇ ಅಂಗವಾದ ಪತ್ರಿಕಾ ರಂಗಕ್ಕೆ ತನ್ನದೇ ಆದ ಸ್ಥಾನವಿದ್ದು, ಇದರ ಪಾವಿತ್ರ್ಯತೆಯನ್ನು ಕಾಪಾಡುವ ಮೂಲಕ ಸಮಾಜದಲ್ಲಿ ಸಾಮಾಜಿಕ ನ್ಯಾಯ ಕಾಪಾಡಬೇಕು.
ಇಂದು ವಿಜ್ಞಾನ ಕ್ಷೇತ್ರ ಸಾಕಷ್ಟು ಬೆಳೆದಿದ್ದರೂ ಇಂದು ಸಮಾಜದಲ್ಲಿ
ಮೇಲು- ಕೀಳು, ಬಡವ – ಶ್ರೀಮಂತ ಎಂಬ ಬೇಧ- ಭಾವ ಇನ್ನೂ ಜೀವಂತವಾಗಿರುವುದು ದುರದೃಷ್ಟಕರ. ಸಮಾಜದಲ್ಲಿರುವ ಇಂತಹ ಸಾಮಾಜಿಕ ಅನಿಷ್ಟ ಪದ್ಧತಿಗಳು ಬದಲಾವಣೆ ಆಗದ ಹೊರತು ಸಮಾಜದ ಬದಲಾವಣೆ ಸಾಧ್ಯವಿಲ್ಲ ಎಂದರು.
ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ
ಎಲೆಮರೆಕಾಯಿಯಂತೆ ತಮ್ಮದೇ ಆದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು ಗುರುತಿಸಿಕೊಳ್ಳಲು ಮುಂದೆ ಬರುವುದಿಲ್ಲ ಅಂಥವರನ್ನ ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿರುವ ವಂಶಿ ನ್ಯೂಸ್ ಬಳಗದ ಸಂಸ್ಥೆಯವರ ಅಪಾರ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಶಿಕ್ಷಣ ಆರೋಗ್ಯ ಕ್ರೀಡೆ ಸೇರಿದಂತೆ ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡು ಮುನ್ನಡೆದಲ್ಲಿ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದರು.
ಸಾಹಿತಿ ಹಾಗೂ ನಿವೃತ್ತ ಪ್ರಾಂಶುಪಾಲ ಡಾ ಜೆ.ಸೋಮಣ್ಣ ಮಾತನಾಡಿ,
ಪತ್ರಿಕೆಗಳು ಇಂದು ಪ್ರಚಲಿತ ವಿದ್ಯಮಾನಗಳು ಹಾಗೂ ಸಮಸ್ಯೆಗಳ ಬಗ್ಗೆ
ವಿರೋಧ ಪಕ್ಷದ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಜನರ ಸಮಸ್ಯೆಗಳ ಬೆಳಕು ಚೆಲ್ಲಿ
ಸಾಮಾಜಿಕ ನ್ಯಾಯವನ್ನು ಒದಗಿಸಬೇಕು ಎಂದರು.
ಮಹಾತ್ಮ ಗಾಂಧಿ ಹಾಗೂ ಡಾ ಬಿ.ಆರ್.ಅಂಬೇಡ್ಕರ್ ಅವರು
ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕೆಗಳನ್ನು ಅತ್ಯಂತ ಪ್ರಾಮಾಣಿಕತೆ ಹಾಗೂ ವಸ್ತುನಿಷ್ಠವಾಗಿ
ನಡೆಸುವ ಮೂಲಕ ಜನರ ಧ್ವನಿಯಾಗಿ ಛಾಪು ಮೂಡಿಸಿದ್ದರು ಎಂದರು.
ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಿಕೆಗಳ ಪಾತ್ರ ಮಹತ್ತರವಾದುದು. ಈ ದಿಸೆಯಲ್ಲಿ ಪತ್ರಕರ್ತರ ಜವಾಬ್ದಾರಿ ಕೂಡ ಹೆಚ್ಚಿದ್ದು, ಸಮಾಜದಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡಬೇಕಿದೆ ಎಂದು ಹೇಳಿದ ಅವರು.
ಸಮಾಜದಲ್ಲಿ ಬೇರೂರಿರುವ
ಜಾತಿ ವ್ಯವಸ್ಥೆ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಡಾ ಸೋಮಣ್ಣ ಹೇಳಿದರು.
ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ್ ಪರಿಷತ್ ರಾಷ್ಟ್ರೀಯ ಸಂಯೋಜಕ ಜೆ ಅಲ್ಬರ್ಟ್ ಮನೋರಾಜ್ ಮಾತನಾಡಿ
ಇತ್ತೀಚಿನ ದಿನಗಳಲ್ಲಿ ಅಪರಾಧ, ಮಾನವ ಹಕ್ಕುಗಳ ಉಲ್ಲಂಘನೆ, ಭ್ರಷ್ಟಾಚಾರ ಸೇರಿದಂತೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ರಾಜಕೀಯ ಹಾಗೂ ವಿವಿಧ ಚಟುವಟಿಕೆಗಳಿಗೆ ಯುವ ಸಮೂಹವನ್ನು ಕರತಂದು ದಾರಿ ತಪ್ಪಿಸುವ ಕೆಲಸವಾಗುತ್ತಿದೆ.
ದುಶ್ಚಟಗಳಿಂದ ದೂರ ಮಾಡಲು ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಲು ಮುಂದಾಗ ಬೇಕೆಂದು ಸಲಹೆ ನೀಡಿದ ಅವರು ಭ್ರಷ್ಟಾಚಾರ ಮುಕ್ತ ದೇಶವನ್ನಾಗಿಸಲು ನಮ್ಮೊಂದಿಗೆ ಕೈಜೋಡಿಸಬೇಕೆಂದರು.
ವಂಶಿ ನ್ಯೂಸ್ ಸಂಸ್ಥೆಯ ಪ್ರಮುಖ ಡಾ ಎಚ್ ಎಂ ರಘುಕೋಟಿ ಮಾತನಾಡಿ,
ವಿವಿಧ ಸಂಘ ಸಂಸ್ಥೆಗಳೊಂದಿಗೆ ಕೈಜೋಡಿಸಿ
ಹಲವು ವರ್ಷಗಳಿಂದ ಅಂತರಾಷ್ಟ್ರೀಯ ಪತ್ರಿಕಾ ದಿನಾಚರಣೆಯೊಂದಿಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಇದೇ ಸಂದರ್ಭ ಜಿಲ್ಲೆ ಹಾಗೂ ರಾಜ್ಯದ ನಾನಾ ಭಾಗಗಳ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕಾವೇರಿ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭ ಕುಶಾಲನಗರ ತಹಸೀಲ್ದಾರ್ ಕಿರಣ್ ಜೆ ಗೌರಯ್ಯ, ಮಾನವ ಹಕ್ಕುಗಳ ಭಾರತ್ ಪರಿಷತ್ ನ ಸಂಸ್ಥಾಪಕ ಅಧ್ಯಕ್ಷ ಡಾ ಜಾನ್ ಜೆ ಸಮುವೆಲ್ ಕಿಮ್, ಸಮಾಜ ಸೇವಕರಾದ ಕೆ ಕೆ ಮಂಜುನಾಥ್, ಹೆಬ್ಬಾಲೆ ನಟೇಶ್ ಗೌಡ, ಕುಶಾಲ ನಗರ ಪ್ರಸ್ ಕ್ಲಬ್ ಗೌರವಾಧ್ಯಕ್ಷ ಬರಮಣ್ಣ ಟಿ ಬೆಟಗೇರಿ, ಮಾನವ ಹಕ್ಕುಗಳ ಭಾರತ್ ಪರಿಷತ್ತಿನ ರಾಜ್ಯ ಮಹಿಳಾ ಅಧ್ಯಕ್ಷ ಅನಿತಾ ಅಕ್ಷರ, ಮಹಿಳಾ ಸಂಘಟನೆಯ ಹೋರಾಟಗಾರ್ತಿ ರೋಹಿಣಿ ಎಸ್ ದೀಕ್ಷಿತ್, ಕುರುಬ ರೈತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಡಿ ಆರ್ ಪ್ರಭಾಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಜಂಕರ್ ಮೆಲೋಡಿಸ್‌ನ ರವಿ ನೇತೃತ್ವದ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!