ಅರಣ್ಯ ವನ್ಯಜೀವಿ

ಮರಿಯಾನೆಗಾಗಿ ಅರಣ್ಯ ಇಲಾಖೆ ಶೋಧ: ಸಾರ್ವಜನಿಕರ ಟೀಕೆಗೆ ಎಚ್ಚೆತ್ತ ಅಧಿಕಾರಿಗಳು

ಸಿದ್ದಾಪುರ, ಜು 29: ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನಂದಪುರ ಸಮೀಪದ ಕೌರಿಕಾಡು ಎಸ್ಟೇಟ್‌ನ ಕಾಫಿ ತೋಟದಲ್ಲಿ ಸೆರೆ ಸಿಕ್ಕ ಒಂದು ವರ್ಷ ಪ್ರಾಯದ ಹೆಣ್ಣಾನೆ ತಪ್ಪಿಸಿಕೊಂಡಿದೆ ಎಂಬ ಅರಣ್ಯ ಇಲಾಖೆ ಹೇಳಿಕೆ ಸಾರ್ವಜನಿಕ ವಲಯದಲ್ಲಿ ನಗೆಪಾಟಲೀಗೆ ಗುರಿಯಾಗಿದೆ.
ಭಾನುವಾರ ಇಂಜಿಲಗೆರೆ ಸಮೀಪದ ಕೌರಿಕಾಡು ಕಾಫಿ ತೋಟದಲ್ಲಿ 30 ವರ್ಷದ ಹೆಣ್ಣಾನೆ ಸಂಶಯಾಸ್ಪದವಾಗಿ ಮೃತಪಟ್ಟಿತ್ತು. ಈ ವೇಳೆ ಹೆಣ್ಣಾನೆ ಮೃತದೇಹ ಸಮೀಪದಲ್ಲೇ ಒಂದು ವರ್ಷ ಪ್ರಾಯದ ಹೆಣ್ಣು ಮರಿಯಾನೆಯೊಂದು ಘೀಳಿಡುತ್ತ ಮೂಕ ವೇದನೆ ಅನುಭವಿಸುತ್ತಿತ್ತು. ಜತೆಗೆ ಕಾಡಾನೆ ಮೃತದೇಹದ ಮರಣೋತ್ತರ ಪರೀಕ್ಷೆಗೂ ಅಡ್ಡಿಯಾಗಿತ್ತು. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಸಣ್ಣ ಹಗ್ಗದ ಸಹಾಯದಿಂದ ಮರಿಯಾನೆಯನ್ನು ಕಾಫಿ ಗಿಡಕ್ಕೆ ಕಟ್ಟಿ ಹಾಕಿದ್ದರು. ನಂತರ ಮೃತ ಕಾಡಾನೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.
ಸ್ಥಳಕ್ಕೆ ಡಿಸಿಎಫ್‌ ಸಹಿತ ಅರಣ್ಯ ಇಲಾಖೆ ಅಧಿ ಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಮರಿಯಾನೆಯನ್ನು ಸಂರಕ್ಷಿಸಿ ಶಿಬಿರಕ್ಕೆ ಕರೆದೊಯ್ಯುವಂತೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಮರಿಯಾನೆಯನ್ನು ಸಂರಕ್ಷಿಸಿ ಕರೆ ತರುವ ಸಂದರ್ಭದಲ್ಲಿ ತಪ್ಪಿಸಿಕೊಂಡಿದೆ ಎಂದು ಅರಣ್ಯ ಇಲಾಖೆ ಅಧಿ ಕಾರಿಗಳು ಹೇಳಿಕೆ ನೀಡಿದ್ದು, ತೀವ್ರ ಚರ್ಚೆಗೆ ಗುರಿಯಾಗಿದೆ.
ನಗೆ ಪಾಟಲಿಗೆ ಗುರಿಯಾದ ಅರಣ್ಯ ಇಲಾಖೆ : ಒಂದು ವರ್ಷ ಪ್ರಾಯದ ಮರಿಯಾನೆಯನ್ನು ಸಂರಕ್ಷಿಸಿ ಕರೆ ತರಲು ಸಾಧ್ಯವಾಗದ ಅರಣ್ಯ ಇಲಾಖೆ ಇನ್ನು ಕಾಡುಪ್ರಾಣಿಗಳಿಂದ ಸಾರ್ವಜನಿಕರ ಜೀವವನ್ನು ಹೇಗೆ ಕಾಪಾಡಲು ಸಾಧ್ಯವೆಂದು ನಾಗರಿಕರು ಟೀಕಿಸುತ್ತಿದ್ದಾರೆ. ಅಲ್ಲದೆ ಸಣ್ಣ ಆನೆ ಮರಿಯನ್ನು ಹಿಡಿಯಲು ಹರಸಾಹಸಪಡುತ್ತಿರುವ ಅರಣ್ಯ ಇಲಾಖೆ, ಜನರಿಗೆ ತೊಂದರೆ ನೀಡುವ ಸಲಗವನ್ನು ಹಿಡಿಯಲು ಇನ್ನೆಷ್ಟು ಸಾಹಸ ಪಡಬೇಕು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಮರಿಯಾನೆ ಸೆರೆಗೆ ಸತತ ಕಾರ್ಯಾಚರಣೆ : ಸಾರ್ವಜನಿಕರ ಟೀಕೆಗೆ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಮರಿಯಾನೆ ಶೋಧ ಕಾರ್ಯಾಚರಣೆ ಆರಂಭಿಸಿದೆ. ಮರಿಯಾನೆ ಪತ್ತೆಗೆ ಹತ್ತು ಸಿಬ್ಬಂದಿ, ಡ್ರೋನ್‌ ಮೂಲಕ ಕಾರ್ಯಾಚರಣೆ ನಡೆಸಿದೆ. ಆದರೆ ಮರಿಯಾನೆ ಸುಳಿವು ಪತ್ತೆಯಾಗಿಲ್ಲ.

ಕರೆಗೆ ಸ್ವೀಕರಿಸಿದ ಅಧಿ ಕಾರಿಗಳು
ಮರಿಯಾನೆ ಸಂರಕ್ಷಿಸುವ ವಿಚಾರಕ್ಕೆ ಸಂಬಂಸಿದಂತೆ ಮಾಹಿತಿ ಪಡೆಯಲು ಅರಣ್ಯ ಇಲಾಖೆ ಅಧಿ ಕಾರಿಗಳಿಗೆ ಕರೆ ಮಾಡಿದರೂ ಸ್ವೀಕರಿಸಿಲ್ಲ.

ಮರಿಯಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಬಿಟ್ಟು ತೆರಳಲು ನಿರ್ಧರಿಸಿದ್ದರು. ಆದರೆ ಸಣ್ಣ ಮರಿಯು ನಾಯಿಗಳ ದಾಳಿಗೆ ತುತ್ತಾಗಬಹುದು. ಆದ್ದರಿಂದ ಸಂರಕ್ಷಿಸಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಮರಿಯಾನೆ ಸೆರೆ ಹಿಡಿಯಲು ಮುಂದಾಗಿದ್ದಾರೆ ಎಂದು
ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!