ಪ್ರತಿಭಟನೆ

4 ದಶಕ ಕಳೆದರೂ ಬದಲಾಗದ ನಾಮಫಲಕ: ಅಧಿಕಾರಿ, ಜನಪ್ರತಿನಿಧಿಗಳ ವಿರುದ್ದ ಕರವೇ ಪ್ರತಿಭಟನೆ

ಕುಶಾಲನಗರ, ಜೂ 18: ಕುಶಾಲನಗರದ ಬೈಚನಹಳ್ಳಿಯ ಶ್ರೀ ಮಾರಮ್ಮ ದೇವಾಲಯ ಬಳಿಯಿರುವ ಬಸ್ ತಂಗುದಾಣದ ಬೋರ್ಡ್ 40 ವರ್ಷ ಕಳೆದರೂ ಬದಲಾಗದೆ ಇರುವ ಹಿನ್ನೆಲೆಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಪ್ರತಿಭಟನೆ ನಡೆಯಿತು.

ಕುಶಾಲನಗರ ಮಂಡಲ ಪಂಚಾಯಿತಿ ಇದ್ದಾಗ ನಿರ್ಮಿಸಿ ನಾಮಕರಣಗೊಳಿಸಿದ ಬಸ್ ತಂಗುದಾಣ ಬೋರ್ಡ್ ನಲ್ಲಿ ಇಂದಿಗೂ ಮಂಡಲ ಪಂಚಾಯಿತಿ ಕುಶಾಲನಗರ ಎಂಬುದು‌ ಬದಲಾಗದೆ ಇರುವುದು ನಿರ್ಲಕ್ಷ್ಯತನದ ಪರಮಾವಧಿ ಎಂದು ಆರೋಪಿಸಿ ಕರವೇ ಜಿಲ್ಲಾಧ್ಯಕ್ಷ ದೀಪಕ್ ಮಾರ್ಗದರ್ಶನದಲ್ಲಿ ಕಾರ್ಯಕರ್ತರು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧ್ಯಕ್ಷ ದೀಪಕ್,
ಕೊಡಗು‌ ಜಿಲ್ಲೆಯಲ್ಲಿ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕುಶಾಲನಗರ ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಅಗತ್ಯಕ್ಕೆ ತಕ್ಕಂತೆ ವೇಗ ಪಡೆದುಕೊಂಡಿಲ್ಲ. ಅದಕ್ಕೆ ಈ‌ ಬಸ್ ತಂಗುದಾಣವೇ ಉದಾಹರಣೆ. ಕಳೆದ 40 ವರ್ಷಗಳ ಹಿಂದೆ ಮಂಡಲ‌ ಪಂಚಾಯಿಯಾಗಿದ್ದ ಸಂದರ್ಭ ಉದ್ಘಾಟನೆಯಾಗಿ ಅಳವಡಿಸಿದ ತಂಗುದಾಣದ‌ ನಾಮಫಲಕವನ್ನು‌ ಪುರಸಭೆಯಾಗಿ ಮೇಲ್ದರ್ಜೆಗೇರಿದರೂ ಇಂದಿಗೂ ಬದಲಾಯಿಸಿಲ್ಲ. ಅಲ್ಲದೆ ಈ ತಂಗುದಾಣ ಶಿಥಿಲಗೊಂಡಿದ್ದು ಪುಂಡಪೋಕರಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು. ಕೂಡಲೆ ನಾಮಫಲಕ ಬದಲಾಯಿಸಿ ಸುಣ್ಣ ಬಣ್ಣ ಬಳಿಯುವ ವ್ಯವಸ್ಥೆ ಆಗಬೇಕಿದೆ ಎಂದು ಆಗ್ರಹಿಸಿದರು.
ಇದಲ್ಲದೆ ಕುಶಾಲನಗರದಲ್ಲಿ ಹಲವಷ್ಟು ಸಮಸ್ಯೆಗಳು ತಾಂಡವವಾಡುತ್ತಿದೆ. ಪಟ್ಟಣದ ಹೃದಯ ಭಾಗದಲ್ಲಿ ಶೌಚ ತ್ಯಾಜ್ಯ ನೀರು ಚರಂಡಿ ಮೂಲಕ ನದಿ ಸೇರುತ್ತಿದೆ. ನದಿ ಮಲಿನ ಮಾಡುತ್ತಿರುವವರನ್ನು ಪತ್ತೆಹಚ್ಚಿ ಕ್ರಿಮಿನಿಲ್ ಮೊಕದ್ದಮೆ ಹೂಡುವ ಕೆಲಸ ಆಗಬೇಕಿದೆ ಎಂದು ಅವರು ಒತ್ತಾಯಿಸಿದರು.

ತಾಲೂಕು ಅಧ್ಯಕ್ಷ ಸಿ.ಎಂ.ಆಸಿಫ್ ಮಾತನಾಡಿ, ಕಳೆದ 40 ವರ್ಷಗಳಿಂದ ಈ‌ ಭಾಗದಲ್ಲಿ ಗೆದ್ದು ಬಂದ ಜನ ಪ್ರತಿನಿಧಿಗಳಿಗೆ ಈ ನಾಮಫಲಕ ಗೋಚರಿಸದೆ ಇರುವುದು ವಿಪರ್ಯಾಸ ಎನಿಸುತ್ತಿದೆ. ಜಗತ್ತು ಎ.ಐ.ಕಾಲಕ್ಕೆ ಮುಂದುವರೆದಿದ್ದರೂ ಕೂಡ ಇಲ್ಲಿನ ಪುರಸಭೆ ಹಳೆಯ ಮಂಡಲ‌ ಪಂಚಾಯಿತಿ ವ್ಯವಸ್ಥೆಯಿಂದ ಹೊರಬಂದಿಲ್ಲ ಎನ್ನುವುದಕ್ಕೆ ಈ ನಾಮಫಲಕವೇ ಸಾಕ್ಷಿ. ಇಂತಹ ಸಣ್ಣ ಪುಟ್ಟ ಲೋಪದೋಷಗಳ ವಿಚಾರಗಳಿಂದ ಪಟ್ಟಣದ ಮಾನ ಮರ್ಯಾದೆ ಹರಾಜಾಗಲಿದೆ ಎಂದರು. ಇಂತಹ ವಿಚಾರಗಳು ಇತರೆಡೆ ಕಂಡುಬಂದಲ್ಲಿ ಸಾರ್ವಜನಿಕರು ನಮ್ಮ ಗಮನಕ್ಕೆ ತರಬೇಕಿದೆ ಎಂದರು.

ಈ ಸಂಬಂಧ ಪುರಸಭೆ ಕಂದಾಯ ನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕರವೇ ನಗರಾಧ್ಯಕ್ಷ ಡಿ.ಆರ್. ಯೋಗೇಶ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸಂಧ್ಯಾ ಗಣೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೃತಿ ಗಿರೀಶ್, ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಕನ್ನಡಿಗ ಆನಂದ್ ಗೌಡ, ಕ್ಷೇತ್ರ ಉಪಾಧ್ಯಕ್ಷ ಜೈ ಸ್ವಾಮಿ, ತಾಲೂಕು ಉಪಾಧ್ಯಕ್ಷ ಪರಮೇಶ್ ಮಂಡ್ಯ, ತಾಲೂಕು ಕಾರ್ಯದರ್ಶಿ ಗಣೇಶ್, ತಾಲೂಕು ಯುವ ಘಟಕದ ಅಧ್ಯಕ್ಷ ಪುನೀತ್, ನಗರಾಧ್ಯಕ್ಷೆ ರೇಣುಕಾ, ನಗರ ಉಪಾಧ್ಯಕ್ಷರಾದ ರವಿ ಡಿ.ಎನ್, ಭವ್ಯ, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಪವನ್ ಪಾಂಡುರಂಗ, ಸದಸ್ಯರುಗಳಾದ ಮಂಜುನಾಥ್, ಸಲೀಂ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!