ಕುಶಾಲನಗರ, ಮೇ 19: ಫೋರ್ಜರಿ ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿಗಳ ಆದೇಶದನ್ವಯ ವಜಾ ಮಾಡದೆ ಕುಶಾಲನಗರ ತಹಸೀಲ್ದಾರ್ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಆದಿವಾಸಿ ಸಮುದಾಯ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.
ಕುಶಾಲನಗರ ತಹಸೀಲ್ದಾರ್ ಕಛೇರಿ ಮುಂಭಾಗ ಧರಣಿ ನಡೆಸಿದ ಆದಿವಾಸಿ ಜನಾಂಗದವರು ನ್ಯಾಯಕ್ಕೆ ಒತ್ತಾಯಿಸಿ ಘೋಷಣೆ ಕೂಗಿದರು.
ಈ ಸಂದರ್ಭ ಮಾತನಾಡಿದ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯಾಧ್ಯಕ್ಷ ಎಂ.ಕೃಷ್ಣಯ್ಯ ದಿವಂಗತ ಎಸ್.ಎನ್.ರಾಜಾ ರಾವ್ ಅವರ ಮಕ್ಕಳು ಫೋರ್ಜರಿ ಮಾಡಿ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಪಡೆದಿದ್ದಾರೆ. ಇದನ್ನು ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗಳ ಆದೇಶವನ್ನು ತಹಸೀಲ್ದಾರ್ ಪಾಲಿಸದೆ ಉಲ್ಲಂಘಿಸಿದ್ದಾರೆ, ವಿಚಾರಿಸಿದರೆ ಸ್ಟೇ ಇದೆ ಎನ್ನುತ್ತಾರೆ, ಇದಕ್ಕೇ ಸೂಕ್ತ ದಾಖಲೆಗಳನ್ನು ಅವರು ಇದುವರೆಗೆ ಒದಗಿಸಿಲ್ಲ, ಸರಕಾರದ ವಕೀಲರು ಅಥವಾ ಹೈಕೋರ್ಟ್ ವಕೀಲರ ಅಭಿಪ್ರಾಯ, ಕಾನೂನು ಸಲಹೆ ಪಡೆಯದೆ ತಹಸೀಲ್ದಾರ್ ಅವರು ಖಾಸಗಿ ವಕೀಲರ ಅಭಿಪ್ರಾಯ ಬಳಸುವುದು ಪಕ್ಷಪಾತ ಧೋರಣೆ, ಆಡಳಿತಾತ್ಮಕ ನಿಯಮ ಉಲ್ಲಂಘನೆ ಮತ್ತು ನ್ಯಾಯದ ಅವಹೇಳವಾಗಿದೆ.
ನಕಲಿ ಜಾತಿ ಪ್ರಮಾಣ ಪಡೆಯುವ ಮೂಲಕ ನಮ್ಮ ಸಮುದಾಯಕ್ಕೆ ದೊರೆಯಬೇಕಾದ ಉನ್ನತ ಹುದ್ದೆ ಅಕ್ರಮವಾಗಿ ಕಬಳಿಸಿರುವುದು ನಮಗೆ ಮಾಡಿದ ಅನ್ಯಾಯವಾಗಿದೆ ಎಂದು ಆರೋಪಿಸಿದರು. ಸ್ಟೇ ಇದ್ದರೆ ಆದೇಶ ಪ್ರತಿ ನಮಗೆ ಒದಗಿಸಿದಲ್ಲಿ ಈಗಲೆ ಧರಣಿ ಕೈಬಿಡುತ್ತೇವೆ ಎಂದ ಅವರು ನಮ್ಮ ಬೇಡಿಕೆ ಈಡೇರುವ ತನಕ ಅಮರಣಾಂತರ ಉಪವಾಸ ಹೋರಾಟ ಮುಂದುವರೆಸುವುದಾಗಿ ಹಾಗೂ ಎಸ್.ಟಿ.ಆಯೋಗಕ್ಕೆ ಅಧಿಕಾರಿ ವಿರುದ್ದ ದೂರು ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭ ಆದಿವಾಸಿ ಮುಖಂಡರಾದ ಆರ್.ಕೆ.ಚಂದ್ರು, ಜೆ.ಟಿ.ಕಾಳಿಂಗ, ಬಿ.ಬಿ.ಮಹೇಶ, ನಂಜಯ್ಯ, ಬಸವಣ್ಣ, ವಿಶ್ವ ಡಿ.ಆರ್. ಪ್ರಭಾಕರ್ ಮತ್ತಿತರರು ಇದ್ದರು.
Back to top button
error: Content is protected !!