ಕಾರ್ಯಕ್ರಮ
ಐಸೆಕ್ ಸಂಸ್ಥೆ ವತಿಯಿಂದ ಚಿಕ್ಕತ್ತೂರಿನಲ್ಲಿ ಮಾದರಿ ಗ್ರಾಮ ಜಾಗೃತಿ ಕಾರ್ಯಕ್ರಮ

ಕುಶಾಲನಗರ, ಡಿ 14: ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ (ಐಸೆಕ್) ಆಶ್ರಯದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮತ್ತು ಚಿಕ್ಕತ್ತೂರು ಶ್ರೀ ವಿನಾಯಕ ಯುವಕ ಸಂಘದ ಸಹಯೋಗದೊಂದಿಗೆ, ಬೆಂಗಳೂರಿನ ಗೋಕುಲ್ ದಾಸ್ ಸಂಸ್ಥೆ ಬೆಂಬಲದೊಂದಿಗೆ ಮಾದರಿ ಗ್ರಾಮ ಜಾಗೃತಿ ಕಾರ್ಯಕ್ರಮ ಗ್ರಾಮದ ಸಮುದಾಯ ಭವನದಲ್ಲಿ ನಡೆಯಿತು.
ಗ್ರಾಮಮಟ್ಟದ ಹವಾಮಾನ ಉದ್ದೇಶಿತ ಕಾರ್ಯಗಳು, ನಗರದಂಚಿನ ಸಮುದಾಯಗಳ ಸ್ಥಿತಿಸ್ಥಾಪಕತ್ವ ಬಲವರ್ಧನಾ ಉಪಕ್ರಮಗಳು ಎಂಬ ವಿಚಾರದಡಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಗ್ರಾಮಸ್ಥರಲ್ಲಿ ವಿವಿಧ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಿದರು.

ಪಿರಿಯಾಪಟ್ಟಣ ಪುರಸಭೆಯ ಪರಿಸರ ಅಭಿಯಂತರೆ ವೈಶಾಲಿ ಅವರು ಘನತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿ ಒದಗಿಸಿದರು.
ಹಸಿಗಿಂತ ಒಣಕಸ ನಿರ್ವಹಣೆ ಶ್ರಮದಾಯಕವಾಗಿದೆ. ಅದರಲ್ಲೂ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಕವರ್ ಗಳ ಸಮಸ್ಯೆ ಬಹಳಷ್ಟಿದೆ. ಆದಷ್ಟು ಇಂತಹ ಪ್ಲಾಸ್ಟಿಕ್ ಕವರ್ ಬಳಕೆ ಕಡಿಮೆ ಮಾಡಬೇಕಿದೆ. ಈ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ. ಮನೆಗಳಿಂದಲೇ ಹಸಿ ಕಸ, ಒಣ ಕಸ ಸಮರ್ಪಕ ನಿರ್ವಹಣೆ ಎಲ್ಲರ ಜವಾಬ್ದಾರಿ. ಸ್ವಚ್ಚ ನಗರವಾಗಿಸುವಲ್ಲಿ ಆಡಳಿತದೊಂದಿಗೆ ಸಾರ್ವಜನಿಕರ ಸಹಕಾರ ಕೂಡ ಮುಖ್ಯವಾಗಿದೆ ಎಂದರು.

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ
ಬಿ.ವಿ.ಆನಂದ್ ಮಾತನಾಡಿ, ನಗರೀಕರಣದಿಂದ ಆರಣ್ಯ, ದಟ್ಟಾರಣ್ಯಗಳು ಕ್ಷೀಣಿಸುತ್ತಿದ್ದು ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿರುವ ಬಗ್ಗೆ ಮಾಹಿತಿ ಒದಗಿಸಿದರು. ಕೊಡಗಿನ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕಿದೆ ಎಂದರು.
ರಸ್ತೆ, ಚರಂಡಿ, ಕುಡಿವ ನೀರು, ಶಿಕ್ಷಣ, ಆರೋಗ್ಯ ವ್ಯವಸ್ಥೆ ಒಳಗೊಂಡಂತೆ ಎಲ್ಲಾ ಮೂಲಸೌಕರ್ಯ, ವ್ಯವಸ್ಥೆಗಳು ಸಮರ್ಪಕವಾಗಿದ್ದಾಗ ಮಾತ್ರ ಅದು ಮಾದರಿ ಗ್ರಾಮವಾಗಲಿದೆ. ಅದರಲ್ಲೂ ಆ ಗ್ರಾಮದಲ್ಲಿ ಮದ್ಯಪಾನಿಗಳು ಇರಲೇಬಾರದು. ಇದರ ಬಗ್ಗೆ ಗ್ರಾಮಸ್ಥರು ಚಿಂತನೆ ಹರಿಸಬೇಕಿದೆ ಎಂದರು.

ಬೆಂಗಳೂರಿನ ಗೋಕುಲ್ ಎಕ್ಸ್ ಪೋರ್ಟ್ಸ್ ನ ಮಾನವ ಸಂಪನ್ಮೂಲಗಳ ಹಿರಿಯ ನಿರ್ವಾಹಕ ಕೆ.ಟಿ.ರಾಜೇಂದ್ರ ಪ್ರಸಾದ್ ಮಾತನಾಡಿದರು. ಗ್ರಾಮಕ್ಕೆ ಅವಶ್ಯವಿರುವ ಯೋಜನೆಗಳು, ಕಾಮಗಾರಿಗಳು ಸರಕಾರ ಮಟ್ಟದಲ್ಲಿ ಜಾರಿಗೊಳ್ಳಬೇಕಿದೆ. ಖಾಸಗಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಕೂಡ ಹಲವು ಸಾಮಾಜಿಕ ಯೋಜನೆಗಳು ಅನುಷ್ಠಾನ ಮಾಡಲಾಗುತ್ತಿದೆ. ಮಾದರಿ ಗ್ರಾಮಕ್ಕೆ ಬೇಕಾದ ಅವಶ್ಯಕತೆಗಳಿದ್ದಲ್ಲಿ ನಮ್ಮ ಗಮನಕ್ಕೆ ತಂದಲ್ಲಿ ಸಾಧ್ಯವಾದ ಉಪಯುಕ್ತ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.




