ಕುಶಾಲನಗರ, ನ 20: ಕನ್ನಡದ ನೆಲದಲ್ಲಿ ಜೀವಿಸುತ್ತಿರುವ ಎಲ್ಲರೂ ಕನ್ನಡ ಭಾಷೆಯ ಮೇಲೆ ಹೆಚ್ಚು ಅಭಿಮಾನ ಹಾಗೂ ಗೌರವ ತೋರುವ ಮೂಲಕ ಪೂಜ್ಯ ಭಾವದಿಂದ ಕಾಣಬೇಕೆಂದು ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಆವರ್ತಿ ಆರ್.ಮಹದೇವಪ್ಪ ಹೇಳಿದರು.
ಕೊಡಗು ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಕುಶಾಲನಗರದ ಕಾವೇರಿ ನದಿ ದಂಡೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡದ ಮೇಲಿನ ಅಭಿಮಾನ ಹಾಗೂ ಆಚರಣೆಗಳು ಕೇವಲ ನವೆಂಬರ್ ಗೆ ಸೀಮಿತವಾಗದೇ ವರ್ಷಪೂರ್ತಿ ವಿವಿಧ ಕನ್ನಡದ ಕಾರ್ಯಕ್ರಮ ಗಳು ನಡೆಯಬೇಕು.
ಎಲ್ಲರೂ ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಮೂಲಕ ಕನ್ನಡದ ಸಾಹಿತಿಗಳಿಗೆ, ಬರಹಗಾರರಿಗೆ ಹಾಗೂ ಲೇಖಕರಿಗೆ ನೆರವಾಗಬೇಕು ಎಂದು ಮಹದೇವಪ್ಪ ಆಶಿಸಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ
ಉದ್ಯಮಿ ಸುದೀಪ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ರಾಷ್ಟ್ರೀಯ ಹಬ್ಬಗಳ ಸಂದರ್ಭ ಸರಕಾರಿ ರಜೆ ಘೋಷಿಸದೆ ದಿನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ಕಾರ್ಯ ಕಡ್ಡಾಯವಾಗಿ ಆಗಬೇಕಿದೆ. ಆಗ ಮಾತ್ರ ನಮ್ಮ ನಾಡು, ನುಡಿಗೆ ಹೋರಾಡಿದವರ ಬಗ್ಗೆ ಯುವ ಸಮೂಹಕ್ಕೆ ಅರಿವು ಮೂಡುತ್ತದೆ ಎಂದರು.
ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಹಳ್ಳಿಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಸದಾ ಪ್ರಚಲಿತದಲ್ಲಿದೆ. ಏನಿದ್ದರೂ ಬೆಂಗಳೂರಿನಂತಹ ನಗರಗಳಲ್ಲಿ ಕನ್ನಡ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಅಗತ್ಯವಿದೆ ಎಂದರು.
ಈ ಸಂದರ್ಭ
ಮೈಸೂರು ಪ್ರಾಂತ್ಯಮಟ್ಟದ ಛಾಯಾಗ್ರಾಹಕರ ಗೃಹ ನಿರ್ಮಾಣ ಸಂಘ ಅಧ್ಯಕ್ಷ ಎಂ.ಎಸ್.ರಾಜೇಂದ್ರ ಕುಮಾರ್, ಉಪಾಧ್ಯಕ್ಷ ಎಂ.ಎಸ್.ಶ್ರೀನಿಧಿ, ಹೋಟೆಲ್ ಉದ್ಯಮಿ ಬಾಲು, ಕಾರ್ಮಿಕ ಇಲಾಖೆ ಅಧಿಕಾರಿ ವಾಣಿ, ಶಿಕ್ಷಕ ಮೂಕಳೇರ ಲಕ್ಷ್ಮಣ ಇದ್ದರು.
ಹಾಗೆಯೇ ಮಂಜಿನ ನಗರಿ, ದಕ್ಷಿಣ ಕೊಡಗು, ಪುಷ್ಪಗಿರಿ, ಶ್ರೀ ಕಾವೇರಿ ಛಾಯಾಗ್ರಾಹಕರ ಸಂಘಗಳ ಪದಾಧಿಕಾರಿಗಳು, ಪ್ರೊಫೆಷನಲ್ ಫೊಟೋಗ್ರಾಫರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.
ಗಾಯಕ ಕಣಗಾಲು ಧನಪಾಲ್ ಕನ್ನಡ ಗೀತೆಗಳನ್ನು ಹಾಡಿದರು.
Back to top button
error: Content is protected !!