ಸುದ್ದಿಗೋಷ್ಠಿ

ನಾರಾಯಣಗೌಡ ಸಾರಥ್ಯದ ಕರವೇ ಅಧಿಕೃತ ಸಂಘಟನೆ: ಬಾಕಿ ನಕಲಿ ಬ್ರಾಂಡ್

ಕುಶಾಲನಗರ, ನ 05: ಟಿ.ಎ.ನಾರಾಯಣ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಅಧಿಕೃತ ಸಂಘಟನೆಯಾಗಿದ್ದು ಉಳಿದ ಕರವೇ ಸಂಘಟನೆಗಳು ನಕಲಿ‌ ಬ್ರಾಂಡ್ ಗಳು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ತಿಳಿಸಿದರು. ಕೊಡಗಿನ ಕುಶಾಲನಗರದ
ಖಾಸಗಿ ರೆಸಾರ್ಟ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಆರೋಪಿಸಿದರು. ರಾಜ್ಯದಲ್ಲಿ ನೂರಾರು ಕನ್ನಡಪರ ಸಂಘಟನೆಗಳಿವೆ. ನಾಡು ನುಡಿ ಬಗ್ಗೆ ನೈಜ ಕಾಳಜಿಯಿದ್ದರೆ ಕರವೇ ಎಂಬ ಹೆಸರು ಬದಲಿಗೆ ಬೇರೆ ಹೆಸರಿನಲ್ಲಿ ಕನ್ನಡ ಸೇವೆ ಸಲ್ಲಿಸಲು ಅವರು ಸೂಚಿಸಿದರು. ಕೊಡಗು ಜಿಲ್ಲೆಗೆ ಹೊಸ ಜಿಲ್ಲಾಧ್ಯಕ್ಷರನ್ನು ನೇಮಿಸಿದ್ದು ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ತಿಳಿಸಿದರು. ಬದ್ದತೆಯಿಲ್ಲದ ರಾಜಕಾರಣಗಳಿಂದ ರಾಜ್ಯದಲ್ಲಿ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯದೆ ಸಮಸ್ಯೆಗಳಾಗಿಯೇ ಉಳಿದಿವೆ ಎಂದು ಆರೋಪಿಸಿದರು.
ಕರವೇ 27 ವರ್ಷ ಪೂರೈಸಿದ್ದು, ಕನ್ನಡ ನಾಡು,ನುಡಿ,ನೆಲ,ಜಲ ಸಂರಕ್ಷಣೆಗೆ ಟೊಂಕ ಕಟ್ಟಿ ಹೋರಾಟ ನಡೆಸಿಕೊಂಡಿ ಬಂದಿದೆ.ಆದರೆ ಕೆಲವು ವ್ಯಕ್ತಿಗಳು ನಮ್ಮ ಸಂಘಟನೆಯ ಹೆಸರನ್ನು ಬಳಸಿಕೊಂಡು ನಕಲಿ ಬ್ರಾಂಡ್ ಸಂಘಟನೆಗಳನ್ನು ಕಟ್ಟಿಕೊಂಡಿದ್ದಾರೆ.
ನ್ಯಾಯಾಲಯದಿಂದ ನಾರಾಯಣ ಗೌಡ ಅವರ ಕರ್ನಾಟಕ ರಕ್ಷಣಾ ವೇದಿಕೆಯೇ ಅಧಿಕೃತ ಎಂದು ಆದೇಶ ಬಂದಿದೆ.
ನಕಲಿ ನಾಯಕರು ಸುಲಿಗೆ,ವಸೂಲಿ ಮಾಡಲು ನಮ್ಮದೆ ಸಂಘಟನೆ ಹೆಸರು ಬಳಕೆ‌ ಮಾಡಿಕೊಳ್ಳುತ್ತಿದ್ದಾರೆ.ಇವರಿಗೆ ಕರ್ನಾಟಕ ರಾಜ್ಯ ಬಗ್ಗೆ ನೈಜತೆ,ಪ್ರೀತಿ, ಭದ್ದತೆ ಇದ್ದರೆ
ಬೇರೆ ಹೆಸರಿನಲ್ಲಿ ಸಂಘಟನೆಯನ್ನು ಕಟ್ಟಿ ಹೋರಾಟ ಮಾಡಲಿ ಎಂದು ಸವಾಲು ಹಾಕಿದರು. ನಮ್ಮ ಸಂಘಟನೆಯೆ ಅಧಿಕೃತ ಎಂಬ ತೀರ್ಪು ಬಂದಿದ್ದರೂ ಕೂಡ ಕರವೇ ಹೆಸರು ಬಳಕೆ ಮಾಡುವ ಮೂಲಕ ಕಾನೂನಿಗೆ ಅಪಚಾರ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಭಾಷೆ ಮಾತನಾಡುವ ಜನರು ಮದ್ರಾಸ್,ಹೈದರಾಬಾದ್, ಮುಂಬೈ ಕರ್ನಾಟಕ ಪ್ರಾಂತ್ಯದಲ್ಲಿ ಹರಿದು ಹಂಚಿ ಹೋಗಿದ್ದರು. ಕನ್ನಡ ಭಾಷಿಕರು
ಅಖಂಡವಾಗಬೇಕು,ಒಂದುಗೂಡಬೇಕು ಎಂಬ ನಿಲುವಿನೊಂದಿಗೆ ಹರಿದು ಹಂಚಿಹೋಗಿದ್ದ ನಾಡು ಒಂದಾದ ದಿನವೆ ಕನ್ನಡ ರಾಜ್ಯೋತ್ಸವವಾಗಿ ಆಚರಣೆ ಮಾಡುತ್ತಿದ್ದೇವೆ.
ರಾಜ್ಯದಲ್ಲಿ ಭಾಷೆ ಬೆಳೆಸುವ ಉದ್ದೇಶ, ಉದ್ಯೋಗ ಕೊಡಿಸುವ ಉದ್ದೇಶ,ಜಲ ಸಮಸ್ಯೆಗಳು,ಗಡಿ ಸಮಸ್ಯೆ
ಕರ್ನಾಟಕಕ್ಕೆ ಬರುತ್ತಿರುವ ವಲಸೆ ಸೇರಿದಂತೆ ಇನ್ನಿತರ ಜ್ವಲಂತ ಸಮಸ್ಯೆಗಳು ಇದುವರೆಗೂ ಪರಿಹಾರ ಕಂಡಿಲ್ಲ.ಇದಕ್ಕೆ ನಮ್ಮ ರಾಜ್ಯದಲ್ಲಿ ಪ್ರಜ್ಞಾವಂತ ರಾಜಕಾರಣಿಗಳ ಕೊರತೆಯೆ ಮೂಲ ಕಾರಣವಾಗಿದೆ.ಕರ್ನಾಟಕ ರಾಜ್ಯದ ಬಗ್ಗೆ, ಕನ್ನಡಿಗರ ಬಗ್ಗೆ ಕಾಳಜಿ ಇಲ್ಲದ ಬೇಜವಬ್ದಾರಿ ರಾಜಕಾರಣಿಗಳು ವಿಧಾನಸಭೆಯಲ್ಲಿ ಕುಳಿತಿರುವ ಹಿನ್ನೆಲೆಯಲ್ಲಿ ಯಾವುದೇ
ಸಮಸ್ಯೆ ಬಗೆಹರಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕಾವೇರಿ ಜಲ ಸಮಸ್ಯೆ ಉಂಟಾದ ಬಳಿಕ
ದಕ್ಷಿಣ ಭಾರತದಿಂದ ಕರ್ನಾಟಕ ರಾಜ್ಯಕ್ಕೆ ಬರುತ್ತಿದ್ದ ವಲಸೆ ಕಡಿಮೆ ಆಗಿದೆ.ಆದರೆ ಉತ್ತರ ಭಾರತದಿಂದ ರಾಜ್ಯಕ್ಕೆ ವಲಸೆ ಬರುವವರ ಸಂಖ್ಯೆ ಜಾಸ್ತಿಯಾಗಿದೆ. ಆ ಭಾಗದಿಂದ ಬಂದಿರುವ ಉದ್ಯಮಿಗಳು ಅವರದೇ ರಾಜ್ಯದ ಜನರಿಗೆ ಉದ್ಯೋಗ ನೀಡುತ್ತಾ ಬಂದಿದ್ದಾರೆ. ಇದರಿಂದ ನಮ್ಮ ರಾಜ್ಯದ ಜನರು ಬದಕು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ ಎಂದರು.
ಕಾವೇರಿ,ಕೃಷ್ಣೆ. ಮಹಾದಾಯಿ ನದಿಗಳ ಸಮಸ್ಯೆ ಪರಿಹಾರ ಕಾಣಲು ಸಾಧ್ಯವಾಗಿಲ್ಲ. ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನ ಆಗಿಲ್ಲ. ದಿ.ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕನ್ನಡ ಮಕ್ಕಳಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ಕೂಗು ಬಂದ ಹಿನ್ನೆಲೆಯಲ್ಲಿ
ರಾಮಕೃಷ್ಣ ಹೆಗಡೆ ಅವರು ಡಾ.ಸರೋಜಿನಿ ಮಹಿಷಿ ನಿಯೋಗ ಮಾಡಿದ್ರು,ಆದರೆ ಆಗಿ ಮಂತ್ರಿ ಮಂಡಲದ ಭಾಷ ಅಲ್ಪಸಂಖ್ಯಾತ ಸಚಿವರ ವಿರೋಧ ನಡುವೆ ಕೈಬಿಟ್ಟರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದುವರೆಗೆ ಆಡಳಿತ ನಡೆಸಿದ
ಎಲ್ಲಾ ಸರಕಾರಗಳು ಮಹಿಷಿ ವರದಿ ಜಾರಿಗೆ ತರಲು ವಿಫಲವಾಗಿವೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಿ ಮನವಿ ಮಾಡಿದ ಮೇರೆಗೆ ಅವರು ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ ಅನುಷ್ಠಾನ ಮಾಡಲು ಮುಂದಾದರು. ಆದರೆ ಉದ್ಯಮಿ ಮೋಹನ್ ದಾಸ್ ಪೈ ಸೇರಿದಂತೆ ಕೆಲವು ಉದ್ಯಮಿಗಳು ಹಾಗೂ
ಐಟಿಬಿಟಿ ಕಂಪನಿ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವರದಿ ಅನುಷ್ಠಾನವನ್ನು ಕೈಬಿಟ್ಟಿದ್ದಾರೆ ಎಂದರು.
ಈ ಕೂಡಲೇ ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನ ಜೊತೆಗೆ ಅನುಷ್ಠಾನ ಕಾಯ್ದೆ ಆಗಬೇಕು‌ ಮಾತ್ರ ಎಲ್ಲ ಕಾಲಕ್ಕೂ ಕನ್ನಡದ ಮಕ್ಕಳಿಗೆ ಉದ್ಯೋಗ ದೊರೆಯುತ್ತದೆ. ಇದನ್ನು ಕೂಡಲೇ ಮಾಡಬೇಕು ಎಂದು ಕರವೇ ಸರಕಾರವನ್ನು ಆಗ್ರಹಿಸುತ್ತಿದೆ. ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ಕೂಡ ದ್ವಿಭಾಷಾ ಸೂತ್ರ ಜಾರಿಗೆ ತರಬೇಕು ಎಂದು ಒತ್ತಾಯಿಸುತ್ತಿದೆ.ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಒಲವು ತೋರಿದ್ದಾರೆ ಎಂದರು.
ರಾಜ್ಯದಲ್ಲಿ ತ್ರಿಭಾಷಾ ನೀತಿ ಇದೆ.ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿ ಹೇರಿಕೆ ಮಾಡಿದೆ. ಇದರಿಂದ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಹಿಂದಿ ಭಾಷೆ ವಿಷಯದಲ್ಲಿ ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಅನುತ್ತೀರ್ಣ ರಾಗುತ್ತಿದ್ದಾರೆ ಎಂದರು.ತಮಿಳುನಾಡು, ಮಹಾರಾಷ್ಟ್ರ ದ್ವಿಭಾಷಾ ವ್ಯವಸ್ಥೆ ಇದೆ.ಅದೇ ರೀತಿ ರಾಜ್ಯದಲ್ಲೂ
ದ್ವಿಭಾಷಾ ಸೂತ್ರ ಜಾರಿಗೆ ಕರವೇ ಒತ್ತಾಯಿಸಿದೆ ಎಂದರು. ನಾನು ಚಳುವಳಿಗೆ ಪಾದಾರ್ಪಣೆ ಮಾಡಿ 40 ವರ್ಷ ಆಗಿದೆ. ನಾಡು,ನುಡಿ,ನೆಲ,ಜಲ,ಗಡಿ ವಿಷಯದಲ್ಲಿ ಹೋರಾಟ ನಡೆಸಿ
ಅನೇಕ ಮೊಕದ್ದಮೆ ಹಾಕಿಸಿಕೊಂಡು ಜೈಲಿಗೆ ಹೋಗಿ ಬಂದಿದ್ದೇನೆ.ಕನ್ನಡ ಹೋರಾಟಗಾರರ ಮೇಲೆ ಹಾಕಿರುವ
ಮೊಕದ್ದಮೆಗಳನ್ನು ವಾಪಸ್ಸು ಪಡೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದರು.
ನ.29 ರಂದು ದಕ್ಷಿಣ ಭಾರತದ ಮುಖಂಡರು,ಸಾಹಿತಿಗಳು, ಹೋರಾಟಗಾರರ ಸಭೆಯನ್ನು ಕರೆದಿದ್ದು, ಕೇಂದ್ರ ದಿಂದ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ.ಈ ಕುರಿತು ಕೇಂದ್ರದ ಮೇಲೆ ಒತ್ತಡ ಹಾಕಲಾಗುತ್ತದೆ ಎಂದರು.
ರಾಜ್ಯದಲ್ಲಿ 80 ಲಕ್ಷ ಕರವೇ ಕಾರ್ಯಕರ್ತರು ಇದ್ದಾರೆ.ಇದರಲ್ಲಿ
3.80 ಲಕ್ಷ ಮಹಿಳೆಯರು ಇದ್ದಾರೆ ಎಂದರು‌.ರಾಜ್ಯದಲ್ಲಿ
ಶೇ.60 ಕನ್ನಡ ನಾಮಫಲಕ ಹಾಕಬೇಕು ಎಂಬ ನಿಯಮ ಇದೆ.ಆದರೆ ಯಾರು ಇದನ್ನು ಪಾಲಿಸುತ್ತಿಲ್ಲ.ಇದರ ವಿರುದ್ಧ ನಾವು ನಿರಂತರ ಹೋರಾಟ ನಡೆಸುತ್ತೇವೆ ಎಂದರು.
ಸುದ್ದಿಗೋಷ್ಠಿ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ರಾಜ್ಯ ಸಂಚಾಲಕಿ ದೀಪಾಪೂಜಾರಿ,ಕೊಡಗು ಜಿಲ್ಲಾಧ್ಯಕ್ಷ ರಾಜು, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!