ಕುಶಾಲನಗರ, ಸೆ 26: ರಸ್ತೆ ಗುಂಡಿ ಮುಚ್ಚುವ ವಿಷಯದಲ್ಲಿ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಖಂಡಿಸಿ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಘೋಷಣೆ ಕೂಗಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ನೇತೃತ್ವದಲ್ಲಿ ಪಕ್ಷದ ಕಚೇರಿಯಿಂದ ಹೊರಟ ಕಾರ್ಯಕರ್ತರು ಕುಶಾಲನಗರ ಗಣಪತಿ ದೇವಾಲಯದ ಮುಂಭಾಗ ಸೇರಿ ಮಾನವ ಸರಪಳಿ ರಚಿಸಿ ಪಕ್ಷ ಮತ್ತು ಶಾಸಕ ಮಂತರ್ ಗೌಡ ಸೇರಿದಂತೆ ಪಕ್ಷದ ನಾಯಕರ ಪರ ಘೋಷಣೆ ಕೂಗಿದರು.
ಈ ಸಂದರ್ಭ ಮಾತನಾಡಿದ ವಿ.ಪಿ. ಶಶಿಧರ್ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿರುವ ಶಾಸಕರ ವಿರುದ್ಧ ವಿನಾಕಾರಣ ಮಾಜಿ ಶಾಸಕರು ಆರೋಪ ವ್ಯಕ್ತಪಡಿಸಿರುವುದು ಸರಿಯಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ದುಡಿಯುವ ಮೂಲಕ ಸರ್ಕಾರದಿಂದ ಹಲವು ಯೋಜನೆಗಳನ್ನು ತಂದು ಕ್ಷೇತ್ರದ ಬೆಳವಣಿಗೆಗೆ ಕಾರಣಕರ್ತರಾಗಿರುವ ಶಾಸಕರ ಮೇಲೆ ಅನಾವಶ್ಯಕ ಆರೋಪ ಹೊರಿಸುತ್ತಿದ್ದಾರೆ. ರಂಜನ್ ಅವರ ಅಧಿಕಾರ ಅವಧಿಯಲ್ಲಿ ಪೂರ್ಣಗೊಳ್ಳದ ಹಲವು ಕಾಮಗಾರಿಗಳನ್ನು ಇದೀಗ ಹಾಲಿ ಶಾಸಕರ ಕಾಳಜಿಯಿಂದ ಎಲ್ಲಾ ಅಪೂರ್ಣ ಕಾಮಗಾರಿಗಳು ಲೋಕಾರ್ಪಣೆಗೊಳ್ಳುತ್ತಿವೆ. ಇದನ್ನು ಸಹಿಸದೆ ಮಾಜಿ ಶಾಸಕರು ನೀಡುತ್ತಿರುವ ಹೇಳಿಕೆಗಳು ಹಾಸ್ಯಾಸ್ಪದ ಆಗಿದೆ ಎಂದರು.
ಪ್ರತಿಭಟನೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಂಜುನಾಥ ಗುಂಡುರಾವ್, ಪ್ರಮುಖರಾದ ಸಜಿ, ರಮಣಿ, ರಫೀಕ್, ಕೃಷ್ಣೇಗೌಡ, ಸುನಿತಾ, ಪುಷ್ಪಲತಾ, ರಾಜಶೇಖರ್ ಮತ್ತಿತರರು ಹಾಜರಿದ್ದರು.
Back to top button
error: Content is protected !!