ಕುಶಾಲನಗರ, ಆ 22: ಕುಶಾಲನಗರ ಮಹಾತ್ಮಾಗಾಂಧಿ ಪದವಿ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಕಾರ್ಯಕ್ರಮ ನಡೆಯಿತು.
ಕುಶಾಲನಗರ ಡಿವೈಎಸ್ಪಿ ಚಂದ್ರಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಶಿಕ್ಷಣ ಅತ್ಯಗತ್ಯ.
ಶಿಕ್ಷಣ ಎಂಬುದು ಕೇವಲ ಉದ್ಯೋಗ ಗಳಿಸಲು ಮಾತ್ರ ಸೀಮಿತಗೊಳಿಸಬಾರದು. ಜ್ಞಾನಾರ್ಜನೆ ಶಿಕ್ಷಣದ ಮುಖ್ಯ ಉದ್ದೇಶವಾಗಿರಬೇಕು.
ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕಾರ ಅಳವಡಿಸಿಕೊಂಡಾಗ ಮಾತ್ರ ಶಿಕ್ಷಣಕ್ಕೆ ಮಹತ್ವ ದೊರೆಯುತ್ತದೆ.
ಪಡೆದುಕೊಂಡ ಶಿಕ್ಷಣ ಸದ್ಬಳಕೆ ಮಾಡಿಕೊಂಡು ಸ್ವ ಉದ್ಯೋಗ ಪಡೆದುಕೊಳ್ಳಲು ಚಿಂತನೆ ಹರಿಸಬೇಕಿದೆ. ನಾವು ಕಲಿತ ಶಿಕ್ಷಣವನ್ನು ಸತ್ಕಾರ್ಯ, ಒಳ್ಳೆಯ ವಿಚಾರಗಳಿಗೆ ಉಪಯೋಗಿಸಬೇಕಿದೆ ಎಂದರು.
ವಿದ್ಯಾರ್ಥಿಗಳು ತಪ್ಪು ಹಾದಿ ಹಿಡಿಯದೆ, ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜು ಪ್ರಾಂಶುಪಾಲೆ ಲಿಖಿತಾ ಟಿ.ಎ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನೂತನ ವಿದ್ಯಾರ್ಥಿ ಸಮಿತಿ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಪದಗ್ರಹಣ ನೆರವೇರಿಸಿದರು.
ವಿವೇಕಾನಂದರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ವಿದ್ಯಾರ್ಥಿಗಳು ಕಾನೂನಿಗೆ ಸಂಬಂಧಿಸಿದ ಸಂಶಯಗಳನ್ನು ಡಿವೈಎಸ್ಪಿ ಅವರ ಬಳಿ ಪ್ರಶ್ನಿಸಿ ಉತ್ತರ ಪಡೆದುಕೊಂಡರು.
ವಿವೇಕಾನಂದ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಕ್ಲಾರಾ ರೇಷ್ಮಾ ಬಿ.ಎಸ್, ಆಡಳಿತಾಧಿಕಾರಿ ಮಹೇಶ್ ಅಮಿನ್, ಪ್ರಮುಖರಾದ ನಂಜಪ್ಪ ಸೇರಿದಂತೆ ಉಪನ್ಯಾಸಕ ವೃಂದದವರು ಇದ್ದರು.