ಕುಶಾಲನಗರ ಜು 24; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕುಶಾಲನಗರದ ಕೊಡವ ಸಮಾಜದ ಆವರಣದಲ್ಲಿ 1954ನೇ ಮದ್ಯವರ್ಜನ ಶಿಬಿರ ಹಮ್ಮಿಕೊಳ್ಳಲಾಗಿದ್ದು, 8 ನೇ ದಿನವಾದ ಬುಧವಾರ ಕಾವೇರಿ ಮಹಾ ಆರತಿ ಬಳಗ ಹಾಗೂ ನಮಾಮಿ ಕಾವೇರಿ ಇವರ ಸಹಯೋಗದಲ್ಲಿ ಮಧ್ಯವರ್ಜನ ಶಿಬಿರದ ಶಿಬಿರಾರ್ಥಿಗಳು ಕಾವೇರಿ ನದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಕಾವೇರಿಗೆ ಆರತಿ ಬೆಳಗಿದರು.
ಪಟ್ಟಣದ ಕೊಡವ ಸಮಾಜದಿಂದ ಹೊರಟು ರಥಬೀದಿಯ ಮೂಲಕ ಸಾಗಿ ಬಂದ ಶಿಬಿರಾರ್ಥಿಗಳು ಮಧ್ಯ ವ್ಯವಸನದಿಂದ ಆಗುವ ದುಷ್ಪರಿಣಾಮದ ಕುರಿತು ಘೋಷಣೆ ಕೂಗಿದರು. ನಂತರ ದಂಡಿನಪೇಟೆಯ ಕಾವೇರಿ ನದಿ ತಟದಲ್ಲಿ ಕಾವೇರಿಗೆ ಆರತಿ ಬೆಳಗಿದರು.
ಈ ವೇಳೆ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಎಂ ಎನ್ ಚಂದ್ರಮೋಹನ್ ಮಾತನಾಡಿ, ಯಾವುದೇ ಚಟ ಮನುಷ್ಯನನ್ನು ಅಂಧನನ್ನಾಗಿ ಮಾಡುತ್ತದೆ. ಮನುಷ್ಯ ಜೀವನವನ್ನು ಸಂಪೂರ್ಣವಾಗಿ ಆವರಿಸಿ ಜೀವನದ ಸರ್ವಸ್ವವನ್ನು ಕಬಳಿಸುವ ಶಕ್ತಿ ವ್ಯಸನಕ್ಕಿದೆ. ಹೊಸ ಜೀವನದ ಸಂತೋಷಕ್ಕಾಗಿ ಪ್ರತಿನಿತ್ಯ ಪೂಜೆ, ನಾಮಸ್ಮರಣೆ ಅಸಹಾಯಕತೆಯಿಂದ ಹೊರಬರಲು ಸಹಕಾರಿಯಾಗಿದೆ. ಮದ್ಯವರ್ಜನ ಶಿಬಿರದಲ್ಲಿ ತನ್ನ ಶಕ್ತಿಯನ್ನು ತಾನೇ ಅರ್ಥಮಾಡಿಕೊಂಡು ಬದುಕುವ ಆತ್ಮ ಸ್ಥೈರ್ಯವನ್ನು ಪಡೆಯಲು ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ ಎಂದರು.
ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ಮಾತನಾಡಿ, ಕುಡಿತದ ದಾಸರಾದವರು ಸಮಾಜ, ಕುಟುಂಬ, ನೆಮ್ಮದಿಯ ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ.
ಒಂದು ದುಶ್ಚಟ ಇಡೀ ಕುಟುಂಬದ ವಿನಾಶಕ್ಕೆ ಕಾರಣವಾಗುತ್ತದೆ. ಇಂತಹ ಶಿಬಿರಗಳಿಗೆ ಭಾಗವಹಿಸಿ ತಮ್ಮ ಬದುಕಿನ ದಿಕ್ಕನ್ನು ಬದಲಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು. ಶಿಬಿರದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರು ಧೃಢ ಮನಸ್ಸು ಮಾಡಿ ಕುಡಿತವನ್ನು ತ್ಯಜಿಸಿ ಇತರರಿಗೆ ಮಾದರಿಯಾಗಬೇಕು ಎಂದರು.
ನಂತರ ಅಣುಕು ಶವವನ್ನು ಸುಟ್ಟ ಮಧ್ಯವರ್ಜನ ಶಿಬಿರಾರ್ಥಿಗಳು ಪ್ರತಿಜ್ಞೆ ಮಾಡಿದರು.
ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ನಿರ್ದೇಶಕರಾದ ಲೀಲಾವತಿ, ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಮೇಲ್ವಿಚಾರಕರಾದ ನಾಗರಾಜು, ಜನಜಾಗೃತಿ ವೇದಿಕೆ ಸದಸ್ಯರಾದ ರಾಜಶೇಖರ್, ಚಂದ್ರು, ಮಧ್ಯವರ್ಜನ ಉಸ್ತುವಾರಿ ಅಧಿಕಾರಿ ನಂದಕುಮಾರ್, ಪ್ರಮುಖರಾದ ಧರಣಿ ಸೋಮಯ್ಯ ಮಧ್ಯವರ್ಜನ ಶಿಬಿರದ 50 ಕ್ಕೂ ಅಧಿಕ ಶಿಬಿರಾರ್ಥಿಗಳು, ಯೋಜನೆಯ ಸೇವಾ ಪ್ರತಿನಿಧಿಗಳು ಹಾಗೂ ಮತ್ತಿತರರು ಹಾಜರಿದ್ದರು.
Back to top button
error: Content is protected !!