ಕುಶಾಲನಗರ, ಆ 01:ಕೊಡಗು ಜಿಲ್ಲಾ ಪೊಲೀಸ್, ಕುಶಾಲನಗರ ಟೌನ್ ಪೊಲೀಸ್ ಠಾಣೆ ವತಿಯಿಂದ ಮನೆಮನೆಗೆ ಪೊಲೀಸ್ ಕಾರ್ಯಕ್ರಮ ಉದ್ಘಾಟನೆ ಹಾಗೂ ಗಣೇಶೋತ್ಸವ ಆಚರಣೆ ಪೂರ್ವಭಾವಿ ಸಭೆ ನಡೆಯಿತು.
ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಪಿ.ದಿನೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಜನರೊಂದಿಗೆ ಪೊಲೀಸರು ಹೆಚ್ಚು ಬೆರೆಯಬೇಕು ಎನ್ನುವ ಉದ್ದೇಶದಿಂದ ಗ್ರಾಮಗಸ್ತು ವ್ಯವಸ್ಥೆ ಏರ್ಪಡಿಸಲಾಗಿದೆ. ಈ ಮೂಲಕ ಜನರ ಸಮಸ್ಯೆಗಳನ್ನು ಅರಿತು ಪರಿಹಾರ ಕಲ್ಪಿಸುವುದು ಇಲಾಖೆಯ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ನಿಗದಿತ ಸಂಖ್ಯೆಯ ಮನೆಗಳ ಸಮೂಹ ರಚನೆ, ಮುಖ್ಯಸ್ಥರ ನೇಮಕ, ಪೊಲೀಸರ ನಿಯೋಜನೆ ಬಗ್ಗೆ ವಿವರಿಸಿದರು.
ಅತ್ಯುತ್ತಮ ಪೊಲೀಸ್ ಸಲಹೆಗಾರರು, ಪೊಲೀಸ್ ಸ್ನೇಹಿತರನ್ನು ಗುರುತಿಸಿ ಗೌರವಿಸಲಾಗುವುದು. ಅಪರಾಧ ರಹಿತ, ಸುಧಾರಿತ ಸಮಾಜ ನಿರ್ಮಾಣ, ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸಾರ್ವಜನಿಕರ ಬೆಂಬಲ ಅತ್ಯಗತ್ಯ ಎಂದರು.
ಸೋಮವಾರಪೇಟೆ ಉಪ ವಿಭಾಗದ ಉಪ ಅಧೀಕ್ಷಕ ಪಿ.ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಿ, ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಉಪಯುಕ್ತ ಮಾಹಿತಿಗಳು ಇಲಾಖೆಗೆ ಅಗತ್ಯವಿದೆ.
ಜನಸ್ನೇಹಿ ಪೊಲೀಸ್ ಉದ್ದೇಶ, ಸುಧಾರಿತ ಗ್ರಾಮಗಸ್ತು, ಪೊಲೀಸರು, ಸಾರ್ವಜನಿಕರ ನಡುವೆ ಬಾಂಧವ್ಯ ವೃದ್ದಿಸುವ ನಿಟ್ಟಿನಲ್ಲಿ ಮನೆಮನೆಗೆ ಪೊಲೀಸ್ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯೋಜನೆಯ ಬಗ್ಗೆ ಮಾಹಿತಿ ಒದಗಿಸಿದರು.
ಉಪ ವಿಭಾಗದ ಸೋಮವಾರಪೇಟೆ, ಕುಶಾಲನಗರ ತಾಲೂಕಿನಲ್ಲಿ 250-300 ಕಡೆಗಳಲ್ಲಿ ಗಣೇಶೋತ್ಸವ ನಡೆಯಲಿದೆ. ಈ ಉತ್ಸವ ಸುಲಲಿತವಾಗಿ ಜರುಗಲು ಪೊಲೀಸರೊಂದಿಗೆ ಸಮಿತಿಯವರು, ಸಾರ್ವಜನಿಕರು ಕೈಜೋಡಿಸಬೇಕಿದೆ. ಗಣೇಶ ಪೆಂಡಾಲ್ ಗಳಲ್ಲಿ ಕಡ್ಡಾಯವಾಗಿ ಒಂದಿಬ್ಬರ ವಾಸ್ತವ್ಯ, ಮೆರವಣಿಗೆ, ವೇದಿಕೆ ಕಾರ್ಯಕ್ರಮ ಸಂದರ್ಭ ಸಮಿತಿ ಸದಸ್ಯರು ಬಂದೋಬಸ್ತ್ ನಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕಿದೆ. ವಿಸರ್ಜನೆ ಸಂದರ್ಭ ಅನಾಹುತ ಸಂಭವಿಸದಂತೆ ಅಗತ್ಯ ಎಚ್ಚರ ವಹಿಸಬೇಕಿದೆ ಎಂದು ಅವರು ಸೂಚಿಸಿದರು.
ಅತಿಥಿಯಾಗಿ ಪಾಲ್ಗೊಂಡಿದ್ದ ಉದ್ಯಮಿ ಸುದೀಪ್ ಕುಮಾರ್ ಮಾತನಾಡಿ, ರಸ್ತೆ ಬದಿ ತ್ಯಾಜ್ಯ ಹರಡುವುದನ್ನು ನಿಯಂತ್ರಿಸಲು, ಅಪರಾಧ ಕೃತ್ಯಗಳನ್ಬು ತಡೆಗಟ್ಟುವ ಉದ್ದೇಶದಿಂದ ಬಯಲು ಬಸವೇಶ್ವರ ದೇವಾಲಯ ಸಮಿತಿಯಿಂದ ಹಾರಂಗಿ ರಸ್ತೆಯಲ್ಲಿ ಸಿಸಿ ಕ್ಯಾಮೆರಗಳನ್ನು ಅಳವಡಿಸಿರುವ ಕಾರ್ಯದ ಬಗ್ಗೆ ವಿವರಿಸಿದರು. ಕುಶಾಲನಗರ ವೃತ್ತ ನಿರೀಕ್ಷಕ ಬಿ.ಎಸ್. ದಿನೇಶ್ ಕುಮಾರ್,
ಸೋಮವಾರಪೇಟೆ ಪೊಲೀಸ್ ನಿರೀಕ್ಷಕ ಮುದ್ದು ಮಹದೇವ, ಶನಿವರ ಸಂತೆ ನಿರೀಕ್ಷಕ ಕೃಷ್ಣರಾಜು ಸೇರಿದಂತೆ ಅಧಿಕಾರಿ, ಸಿಬ್ಬಂದಿ ವರ್ಗದವರು, ಸಂಘಸಂಸ್ಥೆಗಳ ಪ್ರಮುಖರು ಇದ್ದರು.
Back to top button
error: Content is protected !!