ಸಭೆ

ಮುಳ್ಳುಸೋಗೆ ಗ್ರಾಪಂ ಆಡಳಿತ ಮಂಡಳಿ ಸಾಮಾನ್ಯ ಸಭೆ

ಕುಶಾಲನಗರ, ಜು 16: ಮುಳ್ಳುಸೋಗೆ ಗ್ರಾಮ ಪಂಚಾಯತ್ ನ ಆಡಳಿತ ಮಂಡಳಿಯ ಮಾಸಿಕ ಸಾಮಾನ್ಯ ಸಭೆ ಗ್ರಾಪಂ ಅಧ್ಯಕ್ಷರಾದ ಚೆಲುವರಾಜು ರವರ ಅಧ್ಯಕ್ಷತೆಯಲ್ಲಿ ಶನಿವಾರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.


ಜಿಲ್ಲಾಧ್ಯಂತ ತೀವ್ರವಾದ ಮಳೆ ಬೀಳುತ್ತಿದ್ದು ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಅಧ್ಯಕ್ಷರು ಸಭೆಗೆ ಮಾಹಿತಿಯನ್ನು ನೀಡಿದರು. ಈ ಬಗ್ಗೆ ಚರ್ಚೆ ನಡೆಸಿ ಈಗಾಗಲೇ ಕಾವೇರಿ ನದಿ ತೀರದ ಬಡಾವಣೆಗಳಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಪ್ರಚಾರ ಮಾಡಿದ್ದು ನೋಟಿಸ್ ಜಾರಿ ಮಾಡಲಾಗಿರುತ್ತದೆ‌. ಅಲ್ಲದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎರಡು ಶಾಲೆಗಳಲ್ಲಿ ಪುನರ್ವಸತಿ ಕೇಂದ್ರಗಳು ಅಗತ್ಯ ಬಿದ್ದಲ್ಲಿ ತೆರೆಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆರ್ಥಿಕ ವರ್ಷದ ಲೈಸೆನ್ಸ್ ನವೀಕರಣ ಮಾಡದೆ ಹಲವು ವ್ಯಾಪಾರಸ್ಥರು ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಸದಸ್ಯರು ಆಕ್ರೋಶ ಹೊರಹಾಕಿದರು. ಕೂಡಲೇ ಲೈಸನ್ಸ್ ಪಡೆಯದೆ ವ್ಯಾಪಾರ ವಹಿವಾಟು ನಡೆಸುತ್ತಿರುವ ಅಂಗಡಿ ಮಳಿಗೆಗಳಿಗೆ ಬೇಗ ಜಡಿದು ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.


ಪಂಚತಂತ್ರ 2.0 ಹೊಸ ಆವೃತ್ತಿ ಬಿಡುಗಡೆಯಾಗಿದ್ದು ಸಾರ್ವಜನಿಕರು ತಮ್ಮ ಮನೆ ನಿವೇಶನ ಕಂದಾಯವನ್ನು ಆನ್ಲೈನ್ ನಲ್ಲಿ ಪಾವತಿ ಮಾಡಬಹುದಾಗಿರುತ್ತದೆ. ಅಲ್ಲದೆ ಗ್ರಾಮ ಪಂಚಾಯಿತಿಯಿಂದ ಆನ್ಲೈನ್ ಡಿಜಿಟಲ್ ರಶೀದಿಗಳನ್ನು ನೀಡಲಾಗುತ್ತದೆ ಎಂಬುದಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮೇಶ್ ಮಾಹಿತಿ ನೀಡಿದರು. ಇನ್ನು ಮುಂದೆ ಕೈಬರಹದ ರಶೀದಿಗಳು ಜಾರಿಯಲ್ಲಿ ಇರುವುದಿಲ್ಲ ಎಂಬುದನ್ನು ಸಹ ಸೂಚಿಸಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಈಗಾಗಲೇ ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಗುತ್ತಿದ್ದು ಗ್ರಾಮ ಪಂಚಾಯಿತಿ ಕ್ರಮದ ಬಗ್ಗೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಯ ಪೌರಕಾಮಿಕರು ಹಾಗೂ ನೀರು ನಿರ್ವಾಹಕರಿಗೆ ಈಗಾಗಲೇ ರೈನ್ ಕೋಟ್, ಗಂಬೂಟ್ ಮತ್ತಿತರ ಅವಶ್ಯಕತೆ ಸಾಮಗ್ರಿಗಳ ವಿತರಣೆ ಮಾಡಲಾಗಿರುವ ಬಗ್ಗೆ ಅಧ್ಯಕ್ಷರು ಸಭೆಗೆ ಮಾಹಿತಿಯನ್ನು ನೀಡಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಜಯಮ್ಮ ಹಾಗೂ ಸರ್ವ ಸದಸ್ಯರು ಹಾಜರಿದ್ದರು. ಗ್ರಾಮ ಪಂಚಾಯತ್ ಲೆಕ್ಕ ಸಹಾಯಕರಾದ ಮಂಜುನಾಥ್ ಸರ್ವರನ್ನು ಸ್ವಾಗತಿಸಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!