ಕುಶಾಲನಗರ, ಜು 15: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡಿಗೆ ಸರ್ಕಲ್ ಸಮೀಪ ಮತ್ತು ಹಾರಂಗಿ ನದಿ ದಂಡೆಯ ಬಳಿ ಎರಡು ಬಡಾವಣೆಯ 50 ಕ್ಕೂ ಹೆಚ್ಚು ಕುಟುಂಬಕ್ಕೆ ಮಳೆಗಾಲದಲ್ಲಿ ಸಂಕಷ್ಟ ಎದುರಾಗುತ್ತಿದೆ.
ಹಾರಂಗಿ ನದಿಯ ನೀರು ಹೆಚ್ಚಾಗಿ ಮನೆಗಳಿಗೆ ನುಗ್ಗಿ ಅನಾಹುತಗಳು ಅಗುತ್ತಿರುವ ಹಿನ್ನೆಲೆಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಆಗ್ರಹಿಸಿ ಎರಡೂ ಬಡಾವಣೆಯ ನಿವಾಸಿಗಳು ಗ್ರಾಮ ಪಂಚಾಯತಿಗೆ ಮನವಿ ಪತ್ರ ಸಲ್ಲಿಸಿದರು.
ಹಾರಂಗಿ ನದಿ ದಂಡೆಯ ಸಮೀಪದಲ್ಲಿರುವ ವಿವೇಕಾನಂದ ಬಡಾವಣೆ, ದೇವೇಗೌಡ ಬಡಾವಣೆ ಅಲ್ಲದೆ ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯ ಹತ್ತಿರ ಮನೆಗಳಿಗೆ ಹಾರಂಗಿ ನದಿಯ ನೀರು ನುಗ್ಗಿದ ಪರಿಣಾಮವಾಗಿ ಮನೆ ಸಾಮಾಗ್ರಿಗಳು ಹಾಳಾಗುತ್ತಿವೆ ಎಂದು ಎರಡು ಬಡಾವಣೆಯ ನೂರಾರು ನಿವಾಸಿಗಳು ತಡೆಗೋಡೆ ನಿರ್ಮಾಣಕ್ಕೆ ಸಂಬಂಧಿಸಿದ ಇಲಾಖೆ ಒತ್ತಾಯ ಮಾಡಲು ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಡಾವಣೆಯ ಜೆ ಬಾಲಕೃಷ್ಣ, ಹರೀಶ್, ಭವ್ಯ, ವಿಶಾಲಾಕ್ಷಿ ಹೈದರಾಲಿ, ಕೃಷ್ಣ, ಸುನಿಲ್, ರುಬಿಯಾ ಮತ್ತಿತರರು ಇದ್ದರು.
ಮನವಿಯನ್ನು ಸ್ವೀಕರಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಕೆ.ಅಯಿಷಾ ಮಾತನಾಡಿ, ಗ್ರಾಮ ಪಂಚಾಯತಿ ಅನುದಾನದಲ್ಲಿ ಕಾಮಗಾರಿಯನ್ನು ಕೈಗೊಳ್ಳಲು ಆಗುವುದಿಲ್ಲ. ಸಂಬಂಧಿಸಿದ ನೀರಾವರಿ ಇಲಾಖೆಗೆ ಪತ್ರ ವ್ಯವಹಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.
Back to top button
error: Content is protected !!